ಕನ್ನಡಪ್ರಭ ವಾರ್ತೆ ಮೈಸೂರುಹೆಣ್ಣು ಮಗಳು ಕ್ರೀಡೆಯಲ್ಲಿ ಸಾಧನೆ ಮಾಡಲಾಗುವುದಿಲ್ಲ ಎಂದವರಿಗೆಲ್ಲ ವಿಶ್ವಕಪ್ ಗೆಲ್ಲುವ ಮೂಲಕ ಉತ್ತರ ನೀಡಿದ್ದೇವೆ ಎಂದು ಅಂತಾರಾಷ್ಟ್ರೀಯ ಖೋ ಖೋ ಆಟಗಾರ್ತಿ ಬಿ. ಚೈತ್ರಾ ಹೇಳಿದರು.ನಗರದ ಜೆ.ಎಲ್.ಬಿ ರಸ್ತೆಯ ರೋಟರಿ ಸಂಸ್ಥೆಯಲ್ಲಿ ಬುಧವಾರ ರೋಟರಿ ಮೈಸೂರು ಮಿಡ್‌ಟೌನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೋಟರಿ ಮಿಡ್‌ಟೌನ್ ವಿಕ್ರಿಯೇಟ್ ಸ್ಪೇಸ್ ಕ್ರೀಡಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.ಆರಂಭದಲ್ಲಿ ಪೋಷಕರು ಹೆಣ್ಣು ಮಕ್ಕಳಿಗೆ ಕ್ರೀಡೆ ಆಗುವುದಿಲ್ಲ ಬೇಡ ಎಂದರು. ಆದರೆ ಅದನ್ನು ಮೆಟ್ಟಿ ನಿಂತು ಇಂದು ಸಾಧನೆ ಮಾಡಿದ್ದೇನೆ. ಅವರಿಗೆಲ್ಲ ಆಟದ ಮೂಲಕವೇ ಉತ್ತರ ನೀಡಿದ್ದೇನೆ. ಈಗ ವಿಶ್ವಕಪ್ ಗೆದ್ದು ನಗರ ಪಾಲಿಕೆಯ ಸ್ವಚ್ಛತಾ ರಾಯಭಾರಿಯಾಗಿದ್ದೇನೆ ಎಂದರು.4ನೇ ತರಗತಿಯಲ್ಲಿ ಖೋಖೋ ಆಡಲು ಆರಂಭಿಸಿದೆ. 6ನೇ ತರಗತಿಯಲ್ಲಿ ಮೊದಲ ಬಾರಿಗೆ ರಾಷ್ಟ್ರ ಮಟ್ಟದಲ್ಲಿ ಕ್ರೀಡಾಪಟುವಾಗಿ ಗುರುತಿಸಿಕೊಂಡೆ. 35 ಬಾರಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ 14 ಬಾರಿ ಚಿನ್ನದ ಪದಕವನ್ನು ಪದ್ದಿದ್ದೇನೆ. ಮಂಜುನಾಥ್ ಸರ್‌ಅವರ ಪರಿಶ್ರಮದಿಂದ ಈ ಗುರಿ ಮುಟ್ಟಿದ್ದೇನೆ. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಯಾವುದಾದರೊಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿ. ಅದು ಮಾನಸಿಕ ಬೆಳವಣಿಗೆ ಜೊತೆಗೆ ದೈಹಿಕವಾಗಿ ಸದೃಢವಾಗಲು ಹಾಗೂ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.ಕ್ರೀಡೆಯ ಮೂಲಕವೇ ಇಂದು ನಾನು ಶಿಕ್ಷಣ ಪಡೆಯುತ್ತಿದ್ದೇನೆ. ನಿರಂತರ ಪರಿಶ್ರಮದಿಂದ ರಾಷ್ಟ್ರೀಯ ಮಟ್ಟದಲ್ಲಿ ಆಡಲು ಸಾಧ್ಯವಾಯಿತು. 2006ರಲ್ಲಿ ಪೊಲೀಸ್ ನೌಕರಿಗೆ ಸೇರಿಕೊಂಡೆ. ಅದಾದ ಬಳಿಕ 2014ರಲ್ಲಿ ಏಷ್ಯನ್ ಗೇಮ್ಸ್ ಅಲ್ಲಿ ಚಿನ್ನದ ಪದಕ ಗೆದ್ದೆವು. ನಮ್ಮ ಶ್ರಮದ ಜತೆಗೆ ಕುಟುಂಬದ ಸಹಕಾರ ಅತ್ಯಗತ್ಯ. ಅದ್ದರಿಂದ ಇಂದು ಈ ಎಲ್ಲಾ ಸಾಧನೆ ಮಾಡಲು ಸಾಧ್ಯವಾಯಿತು ಎಂದರು.ಕ್ರೀಡೆಯಲ್ಲಿ ಗುರುತಿಸಿಕೊಂಡವರಿಗೆ ಪೊಲೀಸ್ ಇಲಾಖೆ ಹೊರತುಪಡಿಸಿ ಬೇರೆ ಇಲಾಖೆಯಲ್ಲಿ ಕೆಲಸ ಸಿಗುತ್ತಿರಲಿಲ್ಲ. 2025ರಲ್ಲಿ ನನಗೆ ಬಿ ಗ್ರೂಪ್ ಹುದ್ದೆ ನೀಡಿದ್ದಾರೆ ಎಂದು ಅವರು ಹೇಳಿದರು.ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕಿ ಹಾಗೂ ಅಂತಾರಾಷ್ಟ್ರೀಯ ಕಬ್ಬಡಿ ಪಟು ಸುಷ್ಮಿತಾ ಪವರ್ ಪ್ರಶಸ್ತಿ ಪ್ರದಾನ ಮಾಡಿದರು. ರೋಟರಿ ಮಿಡ್ ಟೌನ್ ಅಧ್ಯಕ್ಷ ಕೆ.ಎಲ್. ರಾಕೇಶ್ ಬಾಬು, ಕಾರ್ಯದರ್ಶಿ ಭಾಸ್ಕರ್ ಸೈನಿಕ್, ಅಯ್ಯಣ್ಣ ಮೊದಲಾದವರು ಇದ್ದರು.
ಸಾಧ್ಯವಿಲ್ಲ ಎಂದವರೆಗೆ ಸಾಧ್ಯವಾಗಿಸಿ ತೋರಿಸಿದ್ದೇವೆ
ಆರಂಭದಲ್ಲಿ ಪೋಷಕರು ಹೆಣ್ಣು ಮಕ್ಕಳಿಗೆ ಕ್ರೀಡೆ ಆಗುವುದಿಲ್ಲ ಬೇಡ ಎಂದರು. ಆದರೆ ಅದನ್ನು ಮೆಟ್ಟಿ ನಿಂತು ಇಂದು ಸಾಧನೆ ಮಾಡಿದ್ದೇನೆ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.