ಸಾರಾಂಶ
ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಪೂಜಾ ಬೆಳಕೇರಿ ಅಭಿಮತ------------ಕನ್ನಡಪ್ರಭ ವಾರ್ತೆ ಹುಣಸೂರು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಎಲ್ಲ ಮತದಾರರೂ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಅಗತ್ಯವೆಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಪೂಜಾ ಬೆಳಕೇರಿ ಅಭಿಪ್ರಾಯಪಟ್ಟರು.ಪಟ್ಟಣದ ಜ್ಞಾನಧಾರ ಪ್ರಥಮ ದರ್ಜೆ ಕಾಲೇಜು, ತಾಲೂಕು ಆಡಳಿತ ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿ ಸಹಯೋಗದಲ್ಲಿ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ದೇಶಕ್ಕೆ ಸಂವಿಧಾನಶಿಲ್ಪಿ ಅಂಬೇಡ್ಕರ್ ನೀಡಿದ ವೈಶಿಷ್ಟ್ಯಪೂರ್ಣ ಸಂವಿಧಾನದ ಪೀಠಿಕೆಯಲ್ಲಿನ ಪ್ರತಿಯೊಂದು ಪದವೂ ಅರ್ಥಗರ್ಭಿತವಾದುದು. ಪೀಠಿಕೆಯನ್ನು ಅರ್ಥೈಸಿಕೊಂಡು ನಡೆದುಕೊಳ್ಳಬೇಕಾದ ಜವಾಬ್ದಾರಿ ನಮ್ಮದಾಗಿದೆ. ಪ್ರಜಾಪ್ರಭುತ್ವ ಈ ನೆಲದ ಅಂತಃ ಸತ್ವವಾಗಿದ್ದು, ಚುನಾವಣೆಯ ಆಧಾರದಡಿ ಪ್ರಜಾಪ್ರಭುತ್ವ ನಿಂತಿದೆ. ಇತ್ತೀಚಿನ ದಿನಗಳಲ್ಲಿ ನೋಟಾ ಮತದಾನ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಮುಖ್ಯವಾಗಿ ಯುವಕರು ಈ ನಿಟ್ಟಿನಲ್ಲಿ ಹೆಚ್ಚು ಕ್ರಿಯಾಶೀಲರಾಗಬೇಕೆಂದು ಕಿವಿಮಾತು ಹೇಳಿದರು.ಉಪವಿಭಾಗಾಧಿಕಾರಿ ಎಚ್.ಟಿ. ವಿಜಯಕುಮಾರ್ ಮಾತನಾಡಿ, 1950ರ ಜ. 25ರಂದು ದೇಶದಲ್ಲಿ ಚುನಾವಣಾ ಆಯೋಗ ಸ್ಥಾಪನೆಯಾಯಿತು. ಮತದಾನ ಪ್ರಕ್ರಿಯೆಯಲ್ಲಿ ನಿರಾಸಕ್ತಿ ಹೊಂದಿದವರ ಸಂಖ್ಯೆ ಹೆಚ್ಚುತ್ತಿದ್ದ ಹಿನ್ನೆಲೆ 2011ರಲ್ಲಿ ಈ ದಿನವನ್ನು ರಾಷ್ಟೀಯ ಮತದಾರರ ದಿನವಾಗಿ ಘೋಷಿಸಿ ಯುವ ಮತದಾರರಲ್ಲಿ ಮತದಾನದ ಅಗತ್ಯತೆಯ ಕುರಿತು ಅರಿವು ಮೂಡಿಲು ನಿರ್ಧರಿಸಲಾಯಿತು ಎಂದರು.ತಹಸೀಲ್ದಾರ್ ಜೆ. ಮಂಜುನಾಥ್, ತಾಪಂ ಇಒ ಕೆ. ಹೊಂಗಯ್ಯ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್. ಶಿವಣ್ಣೇಗೌಡ ಮಾತನಾಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಎಚ್.ಬಿ. ಕಾರ್ತೀಕ್ ವಹಿಸಿದ್ದರು. ಚುನಾವಣಾವಿಭಾಗದ ಶಿರಸ್ತೇದಾರ್ ಎಂ.ಆರ್. ಅರುಣ್ ಸಾಗರ್, ಸಿಬ್ಬಂದಿ ರಘು, ಶ್ರೀನಿವಾಸ್, ಕಾಲೇಜಿನ ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು ಇದ್ದರು.ಕಡ್ಡಾಯ ಮತದಾನ ಮಾಡುವ ಕುರಿತು ತಹಸೀಲ್ದಾರ್ ಮಂಜುನಾಥ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.