ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ನಗರದ ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಜ್ಞಾನವಿ ಎಂ. 597 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.ನಗರದ ವಿದ್ಯಾನಿಧಿ ಪಿಯು ಕಾಲೇಜಿನ ವಿದ್ಯಾರ್ಥಿ ಜ್ಞಾನವಿ ಎಂ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 597 ಅಂಕಗಳನ್ನು ಗಳಿಸುವ ಮೂಲಕ ಇಡೀ ರಾಜ್ಯದಲ್ಲೇ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಕಾಲೇಜು, ತುಮಕೂರು ಜಿಲ್ಲೆ ಹಾಗೂ ತಂದೆ-ತಾಯಿಗೆ ಕೀರ್ತಿ ತಂದಿದ್ದಾರೆ. ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿನಿ ಜ್ಞಾನವಿ ಎಂ. ತಂದೆ ಮಂಜುನಾಥ್ ಹಾಗೂ ತಾಯಿ ಮಂಜುಳಾ ದಂಪತಿಗಳು ಎಡೆಯೂರು ಸಮೀಪದ ಹಾಗೂ ಮಂಡ್ಯ ಜಿಲ್ಲೆಯ ಬೀಚನಹಳ್ಳಿ ಗ್ರಾಮದವರಾಗಿದ್ದು, ಹೋಟೆಲ್ ನಡೆಸಿಕೊಂಡು ಮಗಳನ್ನು ಹಾಸ್ಟೆಲ್‌ನಲ್ಲಿ ಬಿಟ್ಟು ವ್ಯಾಸಂಗ ಮಾಡಿಸುತ್ತಿದ್ದರು. ವಿದ್ಯಾನಿಧಿ ಹಾಸ್ಟೆಲ್‌ನಲ್ಲಿದ್ದು ಓದುತ್ತಿದ್ದ ಜ್ಞಾನವಿ ಎಂ. ಭವಿಷ್ಯದಲ್ಲಿ ಸಿಎ ಆಗುವ ಬಯಕೆಯನ್ನು ವ್ಯಕ್ತಪಡಿಸಿದ್ದು, ನನ್ನ ಇವತ್ತಿನ ಯಶಸ್ಸಿಗೆ ತಂದೆ-ತಾಯಿ, ಕಾಲೇಜಿನ ಉಪನ್ಯಾಸಕರು ಹಾಗೂ ಆಡಳಿತ ಮಂಡಳಿಯ ಬೆಂಬಲ, ಸಹಕಾರ ಪ್ರಮುಖವಾಗಿದೆ ಎಂದರು.ನಾನು ಓದುವಾಗ ಮೊಬೈಲ್ ಬಳಕೆಗೆ ಮಾಡುತ್ತಿರಲಿಲ್ಲ. ಮೊಬೈಲ್‌ನಿಂದ ದೂರವಿದ್ದು ಓದುತ್ತಿದ್ದೆ. ಹಾಗೆಯೇ ನಮ್ಮ ಹಾಸ್ಟೆಲ್‌ನಲ್ಲೂ ಸಹ ಮೊಬೈಲ್ ಬಳಕೆಗೆ ಅವಕಾಶ ಇರಲಿಲ್ಲ. ಇದು ಸಹ ಈ ಮಟ್ಟದ ಸಾಧನೆಗೆ ಕಾರಣವಾಯಿತು ಎಂದು ವಿದ್ಯಾರ್ಥಿನಿ ಜ್ಞಾನವಿ ತಿಳಿಸಿದರು. ಮುಂದಿನ ದಿನಗಳಲ್ಲಿ ಸಿಎ ಆಗುವ ಇಂಗಿತ ಹೊಂದಿರುವ ನಾನು ಈಗಾಗಲೇ ವಿದ್ಯಾವಾಹಿನಿ ಕಾಲೇಜಿನಲ್ಲಿ ಸಿಎ ಮತ್ತು ಬಿ.ಕಾಂ. ಓದಲು ದಾಖಲಾಗಿದ್ದೇನೆ ಎಂದು ಅವರು ಹೇಳಿದರು.ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರದೀಪ್‌ಕುಮಾರ್ ಮಾತನಾಡಿ, ವಿದ್ಯಾನಿಧಿ ಪಿಯು ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದೆ. ಜ್ಞಾನವಿ ಎಂ. ಅವರು 600ಕ್ಕೆ 597 ಅಂಕಗಳನ್ನು ಪಡೆಯುವ ಮೂಲಕ ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದರು.ಇವರೊಂದಿಗೆ 8 ವಿದ್ಯಾರ್ಥಿಗಳು ಸಹ ರಾಜ್ಯಕ್ಕೆ ಟಾಪರ್‌ಗಳಾಗಿದ್ದಾರೆ ಎಂದರು. ವಾಣಿಜ್ಯ ವಿಭಾಗದಲ್ಲಿ ಜ್ಞಾನವಿ 597, ದೀಪಶ್ರೀ 594, ತುಂಗಾ 593, ಮನಮೋಹನ್ 592, ಗಗನಶ್ರೀ 591, ಅನನ್ಯ ಜೆ.ಟಿ. 591, ಮೋನಿಶಾ 590, ಸಾಕ್ಷಿ 590, ಕುಮುದ 589, ಮಾರುತಿ ಭುವನ್ 588, ವಿಜ್ಞಾನ ವಿಭಾಗದಲ್ಲಿ ನಿತ್ಯ ಕೆ.ಆರ್. 586, ಶಾಶ್ವತ್ 586, ತನುಷ್ ಆರಾಧ್ಯ 585, ನಿಸರ್ಗ ಎ.ಎಂ. 584, ಲತಾ ಆರ್. 584 ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ನಮ್ಮ ಕಾಲೇಜಿನ ವಿದ್ಯಾರ್ಥಿ ಅತ್ಯುನ್ನತ ಸಾಧನೆ ಮಾಡಲು ಆಡಳಿತ ಮಂಡಳಿ ಹಾಗೂ ಉಪನ್ಯಾಸಕರ ಶ್ರಮ ಅಪಾರವಾಗಿದೆ ಎಂದು ಅವರು ಹೇಳಿದರು.ಈ ವೇಳೆ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ ಜ್ಞಾನವಿ ಎಂ. ಸೇರಿದಂತೆ ಅತಿ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಕಾಲೇಜಿನ ಅಧ್ಯಕ್ಷ ಕೆ.ಬಿ. ಜಯಣ್ಣ, ಕಾರ್ಯದರ್ಶಿ ಪ್ರದೀಪ್‌ಕುಮಾರ್ ಹಾಗೂ ಪ್ರಾಂಶುಪಾಲ ಸಿದ್ದೇಶ್ವರಸ್ವಾಮಿ ಸಿಹಿ ತಿನಿಸಿ, ಹೂಗುಚ್ಛ ನೀಡಿ ಅಭಿನಂದಿಸಿದರು.