ಸಾರಾಂಶ
ಮಧ್ಯ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆ ಜಿಲ್ಲೆ. ಆದರೆ, ಇಲ್ಲಿ ಐಟಿ-ಬಿಟಿ, ದೊಡ್ಡ ದೊಡ್ಡ ಕೈಗಾರಿಕೆಗಳು ಇದುವರೆಗೆ ಬಂದಿಲ್ಲ ಎಂದು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯಕುಮಾರ್ ಬೇಸರ ಚನ್ನಗಿರಿಯಲ್ಲಿ ವ್ಯಕ್ತಪಡಿಸಿದ್ದಾರೆ.
ಚನ್ನಗಿರಿ : ಮಧ್ಯ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆ ಜಿಲ್ಲೆ. ಆದರೆ, ಇಲ್ಲಿ ಐಟಿ-ಬಿಟಿ, ದೊಡ್ಡ ದೊಡ್ಡ ಕೈಗಾರಿಕೆಗಳು ಇದುವರೆಗೆ ಬಂದಿಲ್ಲ. ಇದಕ್ಕೆ ಇಷ್ಟು ದೀರ್ಘಕಾಲ ಆಡಳಿತ ನಡೆಸಿರುವವರಿಗೆ ರಾಜಕೀಯ ಇಚ್ಛಾಶಕ್ತಿ, ಬದ್ಧತೆ ಕೊರತೆಯೇ ಕಾರಣ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯಕುಮಾರ್ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಬೆಳಲಗೆರೆ ಗ್ರಾಮದಲ್ಲಿ ಮತಯಾಚಿಸಿದ ಅವರು, ಪ್ರತಿ ಗ್ರಾಮಗಳಲ್ಲಿಯೂ ಶುದ್ಧ ನೀರಿನ ಘಟಕ ಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ನೀರಾವರಿ ಯೋಜನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ರೈತರಿಗೆ ಅನುಕೂಲ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.
ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ಗ್ರಾಮದವನು ನಾನು. ನನಗೆ ರಾಜಕೀಯ ಹೊಸದು. ನನ್ನ ತಂದೆ, ತಾಯಿ, ಸಂಬಂಧಿಕರು ಯಾರೂ ರಾಜಕಾರಣದಲ್ಲಿ ಶಾಸಕರಾಗಿಲ್ಲ, ಸಚಿವರೂ ಆಗಿಲ್ಲ. ಸಂಸದರಾಗಿ ಕಾರ್ಯ ನಿರ್ವಹಿಸಿಲ್ಲ. ಎಲ್ಲರೂ ಬೆಂಬಲಿಸಿ ಗೆಲ್ಲಿಸುತ್ತೀರಾ ಎಂಬ ಭರವಸೆ ಇದೆ. ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಿ ಸಾಮಾನ್ಯ ಯುವಕನನ್ನು ಲೋಕಸಭೆಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿದರು.
ಹಣಬಲ, ತೋಳ್ಬಲ ಇಲ್ಲದಿದ್ದರೂ ಜನಬಲ ನನ್ನಲ್ಲಿದೆ. ಹಣ, ಆಮಿಷಕ್ಕೆ ಬಲಿಯಾಗಿ ಮತ ಚಲಾಯಿಸದೇ ಸ್ವಾಭಿಮಾನಿಗಳಾಗಿ ಮತ ಹಾಕಿ. ನೀವು ಹಾಕುವ ಒಂದೊಂದು ಮತವೂ ದುರ್ಬಳಕೆ ಆಗಲ್ಲ. ಜನರ ಅಭಿವೃದ್ಧಿಗಾಗಿ ಬಳಕೆಯಾಗುತ್ತದೆ. ಮತ್ತೆ ನಿಮ್ಮ ಮನೆ ಬಾಗಿಲಿಗೆ ಸೇವೆ ಮಾಡಲು ಬರುತ್ತದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಲ್ಲಿ ನಾಯಕತ್ವ, ದುರಂಹಕಾರ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಅಸಮಾಧನಗೊಂಡವರ ಸಂಖ್ಯೆ ಹೆಚ್ಚಿದೆ. ಮೇಲ್ನೋಟಕ್ಕೆ ತೋರ್ಪಡಿಸದಿದ್ದರೂ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುತ್ತಾರೆ ಎಂದರು.
ಬೆಳಲಗೆರೆ ಗ್ರಾಮದ ಮುಖಂಡರಾದ ದೊಡ್ಡಪ್ಪ, ರಾಕೇಶ, ಪ್ರಕಾಶ ಬೀರೇಶ, ಮಂಜುನಾಥ, ದೊಡ್ಡೇಶ, ಮಂಜುನಾಥ, ರವಿಕುಮಾರ್, ಮೈಲಾರಿ, ಶ್ರೀನಿವಾಸ್, ಚಂದ್ರಪ್ಪ, ಮಂಜು, ದೇವೇಂದ್ರಪ್ಪ ಮತ್ತಿತರರು ಹಾಜರಿದ್ದರು.