ನಿರುದ್ಯೋಗಿಗಳಿಗೆ ಉದ್ಯೋಗ ಮೇಳ ವರದಾನ

| Published : Aug 13 2024, 01:00 AM IST

ಸಾರಾಂಶ

ದೇಶದಲ್ಲಿ ನಿರುದ್ಯೋಗಿ ಪದವಿದರರ ಸಂಖ್ಯೆ ಹೆಚ್ಚುತ್ತಿದೆ. ಅವರಿಗೆ ಸ್ವಯಂ ಉದ್ಯೋಗ ಕೈ ಗೊಳ್ಳಲು ಬಂಡವಾಳವಾದ ಕೊರತೆ ಕಾಡುತ್ತಿದೆ. ಸರ್ಕಾರಿ ಉದ್ಯೋಗಗಳು ಗಗನ ಕುಸುಮವಾಗಿವೆ. ಆದ್ದರಿಂದ ಇಂತಹ ಉದ್ಯೋಗ ಮೇಳಗಳು ಪದವೀಧರರಿಗೆ ಸಹಾಯಕವಾಗುತ್ತದೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಉದ್ಯೋಗ ಮೇಳಗಳನ್ನು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನಡೆಸುವುದರಿಂದ ಅಲ್ಲಿನ ಉದ್ಯೋಗಾಂಕ್ಷಿ ಯುವ ಜನತೆಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಮಾಜಿ ಕೃಷಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ಹೇಳಿದರು.

ನಗರದ ಹೊರವಲಯದಲ್ಲಿರುವ ಸಮಾನತಾ ಸೌಧದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದುಡಿಯುವ ಕೈಗಳಿಗೆ ಉದ್ಯೋಗ ಲಭಿಸುವಂತೆ ಮಾಡಿದಾಗಲೆ ದೇಶದ ಅಭಿವೃದ್ಧಿ ಸಾಧ್ಯ ಎಂದರು.

ಉದ್ಯೋಗ ಮೇಳ ಸಹಕಾರಿ

ದೇಶದಲ್ಲಿ ನಿರುದ್ಯೋಗಿ ಪದವಿದರರ ಸಂಖ್ಯೆ ಹೆಚ್ಚುತ್ತಿದೆ. ಅವರಿಗೆ ಸ್ವಯಂ ಉದ್ಯೋಗ ಕೈ ಗೊಳ್ಳಲು ಬಂಡವಾಳವಾದ ಕೊರತೆ ಕಾಡುತ್ತಿದೆ. ಸರ್ಕಾರಿ ಉದ್ಯೋಗಗಳು ಗಗನ ಕುಸುಮವಾಗಿವೆ. ಆದ್ದರಿಂದ ಇಂತಹ ಉದ್ಯೋಗ ಮೇಳಗಳು ಪದವೀಧರರಿಗೆ ಸಹಾಯಕವಾಗುತ್ತದೆ. ಪ್ರತಿ ತಾಲೂಕಿನಲ್ಲಿ ಇಂತಹ ಮೇಳಗಳನ್ನು ಆಯೋಜಿಸುವುದರಿಂದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆಯುತ್ತದೆ ಎಂದರು.

ಪ್ರಶಿದ್ಧ ಕಂಪನಿಗಳಲ್ಲಿ ಉದ್ಯೋಗ ದೊರೆತರೆ ಅವರ ಭವಿಷ್ಯ ಉಜ್ವಲವಾಗುತ್ತದೆ. ತಾಲೂಕಿನ ಯುವಕರಿಗೆ ಅರ್ಹತೆಗೆ ಅನುಗುಣವಾಗಿ ಉದ್ಯೋಗವಕಾಶಕ್ಕೆ ಮೊದಲ ಆದ್ಯತೆ ನೀಡುವಂತೆ ಸೂಚಿಸಲಾಗಿದೆ. ಇದರ ಜೊತೆಗೆ ರೇಮಾಂಡ್ಸ್‌ ಕಾರ್ಖಾನೆಯಲ್ಲೂ ಕ್ಷೇತ್ರದ ಸ್ಥಳಿಯ ಮಹಿಳೆಯರಿಗೆ ಉದ್ಯೋಗವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಬೃಹತ್‌ ಮೇಳ

ಮುಂದಿನ ದಿನಗಳಲ್ಲಿ ಮತ್ತಷ್ಟು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಮೇಳ ಆಯೋಜಿಸಿ ಮತ್ತಷ್ಟು ಉದ್ಯೋಗಾಂಕ್ಷಿಗಳಿಗೆ ಉದ್ಯೋಗ ಲಭಿಸುವಂತಾಗಲು ಶ್ರಮಿಸಲಿದ್ದೇನೆ ಎಂದು ಮಾಜಿ ಸಚಿವರಾದ ಎನ್.ಹೆಚ್.‌ ಶಿವಶಂಕರರೆಡ್ಡಿ ಹೇಳಿದರು.

ಈ ಸಂಸ್ಥೆಯ ಎಚ್.ಆರ್.‌ ಮಾತನಾಡಿ ದೇವನಹಳ್ಳೀ ಏರ್‌ ಇಂಡಿಯಾ ಸ್ಯಾಟ್ಸಸ್ ಸರ್ವೀಸಸ್‌ ಪ್ರೈ.ಲಿ. ಕಂಪನಿಯವರು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದು ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ ಉತ್ತೀರ್ಣ, ಅನುತ್ತೀರ್ಣ, ಡಿಪ್ಲೊಮೊ, ಐ.ಟಿ.ಐ ಮತ್ತು ಪದವಿ ವಿದ್ಯಾರ್ಥಿಗಳಿಗೆ ಅವರವರ ವಿದ್ಯಾರ್ಹತೆ ಮೇರೆಗೆ ಉದ್ಯೋಗವಕಾಶ ಕಲ್ಪಿಸಲಾಗುತ್ತಿದೆ. ಈ ಅವಕಾಶವನ್ನು ನಿರುದ್ಯೋಗ ಯುವಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

200 ಮಂದಿಗೆ ನೇಮಕಾತಿ ಪತ್ರ

ಉದ್ಯೋಗಮೇಳದಲ್ಲಿ ಒಟ್ಟು 500 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದು, ಅದರಲ್ಲಿ 200 ಮಂದಿಗೆ ದೇವನಹಳ್ಳಿ ಮತ್ತು ಬೆಂಗಳೂರು ಭಾಗಗಳಲ್ಲಿ ಕಾರ್ಖಾನೆಗಳವರು ಉದ್ಯೋಗ ಮೇಳದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗವಕಾಶದ ನೇಮಕಾತಿ ಪತ್ರಗಳನ್ನು ನೀಡಲಾಯತು.

ಈ ಕಾರ್ಯದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೇಶವರೆಡ್ಡಿ, ಮುಖಂಡರಾದ ಹೆಚ್.‌ ಎನ್. ಪ್ರಕಾಶರೆಡ್ಡಿ, ದೇವನಹಳ್ಳಿ ಏರ್ ಇಂಡಿಯಾ ಕಂಪನಿಯ ವ್ಯವಸ್ಥಾಪಕರು ಮತ್ತು ನಿರ್ದೇಶಕರು ಮತ್ತಿತರರು ಭಾಗವಹಿಸಿದ್ದರು.