ಅ. 24ರಂದು ಬೆಳಗ್ಗೆ 8.30ಕ್ಕೆ ನೋಂದಣಿ ಆರಂಭವಾಗಲಿದ್ದು, ಬಳಿಕ ಸಾಮರ್ಥ್ಯ ಪರೀಕ್ಷೆ ಮತ್ತು ಸಂದರ್ಶನ ನಡೆಯಲಿದೆ. ಅರ್ಹ ಅಭ್ಯರ್ಥಿಗಳನ್ನು ಸ್ಥಳದಲ್ಲೇ ಆಯ್ಕೆ ಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

ಭಟ್ಕಳ: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ಸಹಯೋಗದಲ್ಲಿ ಇಲ್ಲಿನ ಅಂಜುಮನ್ ಹಾಮಿ- ಎ- ಮುಸ್ಲಿಮೀನ್ ಸಂಸ್ಥೆಯ ಅಂಜುಮನ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಕಾಲೇಜಿನಲ್ಲಿ ಅ. 24ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಮೇಳದ ಮೂಲಕ 500 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವ ಗುರಿ ಹೊಂದಲಾಗಿದೆ ಎಂದು ಅಂಜುಮನ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಯೂಸೂಫ್ ಕೋಲಾ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಕಾಂ, ಬಿಎ, ಬಿಬಿಎ, ಬಿಬಿಎಂ, ಬಿಎಸ್ಸಿ, ಬಿಸಿಎ, ಬಿಎಎಫ್ ಹಾಗೂ ಬಿಬಿಐ ಪದವಿ ಪಡೆದಿರುವ ಅಭ್ಯರ್ಥಿಗಳು ಮೇಳದಲ್ಲಿ ಭಾಗವಹಿಸಬಹುದು. 2024, 2025 ಮತ್ತು 2026ರಲ್ಲಿ ಪದವಿ ಪೂರ್ಣಗೊಳಿಸಿದ ಅಥವಾ ಪೂರ್ಣಗೊಳಿಸುತ್ತಿರುವ ಅಭ್ಯರ್ಥಿಗಳಿಗೆ ಅವಕಾಶವಿದೆ. ಹಿಂದಿ, ಉರ್ದು, ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಜ್ಞಾನ ಹಾಗೂ ಉತ್ತಮ ಸಂವಹನ ಕೌಶಲ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹19,000 ಆರಂಭಿಕ ವೇತನ ನೀಡಲಾಗುವುದು ಎಂದರು.

ಅ. 24ರಂದು ಬೆಳಗ್ಗೆ 8.30ಕ್ಕೆ ನೋಂದಣಿ ಆರಂಭವಾಗಲಿದ್ದು, ಬಳಿಕ ಸಾಮರ್ಥ್ಯ ಪರೀಕ್ಷೆ ಮತ್ತು ಸಂದರ್ಶನ ನಡೆಯಲಿದೆ. ಅರ್ಹ ಅಭ್ಯರ್ಥಿಗಳನ್ನು ಸ್ಥಳದಲ್ಲೇ ಆಯ್ಕೆ ಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಭಟ್ಕಳ, ಮುರುಡೇಶ್ವರ, ಕುಮಟಾ, ಅಂಕೋಲಾ, ಕಾರವಾರ ಸೇರಿದಂತೆ ವಿವಿಧ ಪ್ರದೇಶಗಳ ಹಾಗೂ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಬೈಂದೂರು, ಕುಂದಾಪುರ, ಶಿರೂರು ಮತ್ತು ಮಂಗಳೂರು ಭಾಗದ ಅರ್ಹ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅಂಜುಮನ್ ಕಾಲೇಜ್ ಬೋರ್ಡ್ ಕಾರ್ಯದರ್ಶಿ ಫಯ್ಯಾಜ್‌ ಅಹ್ಮದ್ ಕೋಲಾ, ಪ್ರೊ. ಗಾನಿಂ ಮೊಹತೇಶಮ್, ಪ್ರೊ. ದಾಮೋದರ್ ನಾಯ್ಕ ಉಪಸ್ಥಿತರಿದ್ದರು.ಇಂದು ಮಹಾಬಲ ಪ್ರಶಸ್ತಿ ಪ್ರದಾನ, ಯಕ್ಷಗಾನ ಪ್ರದರ್ಶನ

ಹೊನ್ನಾವರ: ತಾಲೂಕಿನ ಗುಣವಂತೆಯ ಶಂಭುಲಿಂಗೇಶ್ವರ ದೇವಾಲಯದ ಆವರಣದಲ್ಲಿ ಅ. 24ರಂದು ಡಾ. ಕೆರೆಮನೆ ಮಹಾಬಲ ಹೆಗಡೆ ಸ್ಮಾರಕ ರಂಗ ಪ್ರತಿಷ್ಠಾನದವರ ವತಿಯಿಂದ ಡಾ. ಕೆರೆಮನೆ ಮಹಾಬಲ ಹೆಗಡೆ ಸಂಸ್ಮರಣೆ- 17 ಹಾಗೂ ಕೆರೆಮನೆ ರಾಮ ಹೆಗಡೆ ಸಂಸ್ಮರಣೆ- 7 ಕಾರ್ಯಕ್ರಮ ಜರುಗಲಿದೆ.ಯಕ್ಷಗಾನ ಸಾಹಿತ್ಯಜ್ಞ, ಕನ್ನಡ ವಿದ್ವಾಂಸ ಡಾ. ಸಿ. ಆನಂದ ರಾಮ ಉಪಾಧ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಎಂಪಿಇ ಸೊಸೈಟಿಯ ಅಧ್ಯಕ್ಷ ಕೃಷ್ಣ ಮೂರ್ತಿ ಭಟ್ ಶಿವಾನಿ, ಮಹಾಬಲ ಪ್ರಶಸ್ತಿಯನ್ನು ಹಿಂದೂಸ್ತಾನಿ ಗಾಯಕ ಪಂ. ಗಣಪತಿ ಭಟ್ ಹಾಸಣಗಿ ಅವರಿಗೆ ಪ್ರದಾನ ಮಾಡಲಾಗುವುದು.ತಬಲಾ ವಾದಕ, ನಿವೃತ್ತ ಉಪನ್ಯಾಸಕ ಪಂ. ಗೋಪಾಲಕೃಷ್ಣ ಹೆಗಡೆ ಕಲ್ಭಾಗ ಅವರು ಅಭಿನಂದನಾ ನುಡಿಗಳನ್ನು ಆಡುವರು. ಬಳಿಕ ಕೀಚಕ ವಧೆ ಎಂಬ ಪೌರಾಣಿಕ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ ಎಂದು ಡಾ. ಕೆರೆಮನೆ ಮಹಾಬಲ ಹೆಗಡೆ ಸ್ಮಾರಕ ರಂಗ ಪ್ರತಿಷ್ಠಾನದ ಗೌರವಾಧ್ಯಕ್ಷೆ ನಾಗವೇಣಿ ರಾಮ ಹೆಗಡೆ ಕೆರೆಮನೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.