ಸಾರಾಂಶ
ಹಾವೇರಿ: ರಾಜ್ಯ ಪದವೀಧರರ ಹಿತರಕ್ಷಣಾ ವೇದಿಕೆ ವತಿಯಿಂದ ಮೇ 31ರಂದು ನಗರದ ಟಿಎಂಎಇಎಸ್ ಮಹಾವಿದ್ಯಾಲಯದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಪದವೀಧರರ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ರಾಘವೇಂದ್ರ ಬಾಸೂರ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯುವಜನತೆ ಸ್ವಯಂ ಉದ್ಯೋಗಿಗಳಾಗಲು, ನಿರುದ್ಯೋಗಿ ಯುವ ಜನತೆಗೆ ಉದ್ಯೋಗ ಒದಗಿಸಿಕೊಡುವ ನಿಟ್ಟಿನಲ್ಲಿ ಮೇ 31ಕ್ಕೆ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ. ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ಒದಗಿಸುವುದರ ಜತೆಗೆ ಸ್ವಂತ ಉದ್ಯೋಗ ಕೈಗೊಳ್ಳಲು ಅಗತ್ಯ ಮಾರ್ಗದರ್ಶನ ನೀಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಮೇಳವನ್ನು ಉದ್ಘಾಟಿಸುವರು. ಕಾರ್ಮಿಕ ಸಚಿವ ಸಂತೋಷ ಲಾಡ್ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.ಪದವೀಧರರ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶಿವಕುಮಾರ ಪಾಟೀಲ ಮಾತನಾಡಿ, ಯುವಜನತೆಯನ್ನು ಬೆಂಬಲಿಸಲು ಹಾಗೂ ಪದವೀಧರರ ಸಮಸ್ಯೆಗಳನ್ನು ಆಲಿಸಲು ವೇದಿಕೆಯನ್ನು ರಚಿಸಲಾಗಿದೆ. ವಿಧಾನಪರಿಷತ್ ಪದವೀಧರ ಕ್ಷೇತ್ರಗಳಿಗೆ ಇದುವರೆಗೆ ಹಳಬರೇ ಆಯ್ಕೆಯಾಗುತ್ತ ಬಂದಿದ್ದಾರೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಯುವಕರಿಗೆ ಆದ್ಯತೆ ಸಿಗಬೇಕು. ರಾಘವೇಂದ್ರ ಬಾಸೂರ ಅವರು ಮುಂಬರುವ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಕಣಕ್ಕಿಳಿಸಲು ತಯಾರಿ ನಡೆಸಿದ್ದೇವೆ ಎಂದರು.
ನಗರಸಭೆ ಸದಸ್ಯ ಗಣೇಶ ಬಿಷ್ಟಣ್ಣನವರ, ವೇದಿಕೆಯ ರಾಜ್ಯ ಉಪಾಧ್ಯಕ್ಷ ಶಂಕರ ಮೆಹರವಾಡೆ, ನಗರಸಭೆ ಮಾಜಿ ಸದಸ್ಯ ಬಾಬುಸಾಬ ಮೋಮಿನಗಾರ, ಈರಣ್ಣ ಚೌಡಣ್ಣನವರ, ಸಂತೋಷ ಬಾಸೂರ ಇತರರು ಇದ್ದರು. ಅಬಲೂರು ಕೃಷಿ ಪತ್ತಿನ ಸಂಘಕ್ಕೆ ಆಯ್ಕೆಹಿರೇಕೆರೂರು: ತಾಲೂಕಿನ ಅಬಲೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ರಾಜಶೇಖರ ಕೋರಿ ಉಪಾಧ್ಯಕ್ಷರಾಗಿ ಮಲ್ಲೇಶಪ್ಪ ಮುದಿಗೌಡ್ರ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಮಂಗಳಾ ಬಣಕಾರ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಸದಸ್ಯರಾದ ಬಸವರಾಜಪ್ಪ ಮಳವಳ್ಳಿ, ಶಂಕ್ರಪ್ಪ ಗೌಡ್ರ, ಗಂಗನಗೌಡ ಮುದಿಗೌಡ್ರ, ಬಸವಂತಪ್ಪ ಹರಿಜನ, ಪ್ರಭಾಕರ ಹುಲ್ಲತ್ತಿ, ಗಣೇಶಪ್ಪ ಆಡೂರ, ಚಂದ್ರಗೌಡ ದಳವಾಯಿ, ಮಾದೇವಕ್ಕ ಕುರುವತ್ತೇರ, ನಾಗರಾಜ ಪುರದ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಕಚವೇರ, ಸಿಬ್ಬಂದಿಯವರಾದ ಬಸವರಾಜ ಕಮ್ಮಾರ, ಗಿರೀಶ ಕಡೇಮನಿ ಇದ್ದರು.