ಸಾರಾಂಶ
ಉದ್ಯೋಗ ಮೇಳಗಳು ಯುವಜನರಿಗೆ ದಾರಿದೀಪವಾಗುತ್ತವೆ. ಪ್ರತಿಭೆಗಳಿಗೆ ಇಲ್ಲಿ ಸಾಕಷ್ಟು ಅವಕಾಶಗಳಿವೆ. ಈ ಮೇಳ ಯಶಸ್ವಿಯಾಗಿ ನಡೆಯಲಿ, ಯುವಜನರಿಗೆ ಹೆಚ್ಚು ಉದ್ಯೋಗ ದೊರಕುವಂತಾಗಲಿ.
ಹುಬ್ಬಳ್ಳಿ:
ಉದ್ಯೋಗ ಮೇಳಕ್ಕೆ ಹೆಚ್ಚಿನ ಯುವಕರು ಹೆಸರು ನೋಂದಾಯಿಸಿದ್ದು, ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಬೆಂಗಳೂರಿನ ಸಮರ್ಥನಂ ಅಂಗವಿಕಲರ ಸಂಸ್ಥೆಯ ಟ್ರಸ್ಟಿ ಉದಯಕುಮಾರ ಹೇಳಿದರು.ಇಲ್ಲಿನ ಶ್ರೀಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆಯಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆ ಏರ್ಪಡಿಸಿದ್ದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂತಹ ಮೇಳಗಳು ಯುವಜನರಿಗೆ ದಾರಿದೀಪವಾಗುತ್ತವೆ. ಪ್ರತಿಭೆಗಳಿಗೆ ಇಲ್ಲಿ ಸಾಕಷ್ಟು ಅವಕಾಶಗಳಿವೆ. ಈ ಮೇಳ ಯಶಸ್ವಿಯಾಗಿ ನಡೆಯಲಿ, ಯುವಜನರಿಗೆ ಹೆಚ್ಚು ಉದ್ಯೋಗ ದೊರಕುವಂತಾಗಲಿ ಎಂದು ಹಾರೈಸಿದರು.ಸಮರ್ಥನಂ ಅಂಗವಿಕಲರ ಸಂಸ್ಥೆಯ ಎಸ್. ಸುಭಾಶ್ಚಂದ್ರ ಅವರು ಉದ್ಯೋಗ ಮೇಳ ಕುರಿತು ಉದ್ಯೋಗಾಕಾಂಕ್ಷಿಗಳಿಗೆ ಮಾಹಿತಿ ನೀಡಿದರು.
ಬೆಳಗ್ಗೆ ಉದ್ಯೋಗಾಕಾಂಕ್ಷಿಗಳ ಹೆಸರು ನೋಂದಣಿ, ನಂತರ ಸಂದರ್ಶನ ನಡೆಯಿತು. ಈ ಮೇಳದಲ್ಲಿ 28 ಕಂಪನಿ, 1700 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರೆ, ಸಂಜೆಗೆ 190 ಯುವಜನರಿಗೆ ನೇಮಕಾತಿ ಪತ್ರ ನೀಡಲಾಯಿತು.ಕಾಲೇಜಿನ ಪ್ಲೇಸ್‌ಮೆಂಟ್ ಅಧಿಕಾರಿ ಮತ್ತು ರಾಜ್ಯಶಾಸ್ತ್ರ ಉಪನ್ಯಾಸಕ ಸಿದ್ಧಲಿಂಗಯ್ಯ ಗುಡಕಟ್ಟಿ ಪ್ರಾಸ್ತಾವಿಕ ಮಾತನಾಡಿ, ವಂದಿಸಿದರು. ಸಮರ್ಥನಂ ಅಂಗವಿಕಲರ ಸಂಸ್ಥೆಯ ವಿದ್ಯಾರ್ಥಿನಿ ರಾಜೇಶ್ವರಿ ಪ್ರಾರ್ಥಿಸಿದರು. ಸಂಸ್ಥೆಯ ಹರ್ಷಿತಾ ಜೈನ್ ಕಾರ್ಯಕ್ರಮ ನಿರೂಪಿಸಿದರು.