ಸಾರಾಂಶ
ಹಳಿಯಾಳ: ಭಾರತವು ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶವಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಇಂದು ಸಾಕಷ್ಟು ಅವಕಾಶಗಳಿವೆ. ಅದಕ್ಕಾಗಿ ಈ ತಂತ್ರಜ್ಞಾನ ಕ್ಷೇತ್ರದಲ್ಲಿ ಯಶಸ್ವಿಯಾಗಬೇಕಾದರೆ ಇಂದಿನ ಯುವ ಜನಾಂಗವು ತಾಂತ್ರಿಕ ಶಿಕ್ಷಣದ ಜೊತೆಗೆ ಗುಣಮಟ್ಟದ ಕೌಶಲ ತರಬೇತಿಯಲ್ಲಿ ಪಾರಂಗತರಾಗಬೇಕು ಎಂದು ಸರ್ಕಾರಿ ಐಟಿಐ ಹವಗಿ ಕಾಲೇಜಿನ ಪ್ರಾಚಾರ್ಯ ಎಂ.ಎ. ಕಾಗದ ಹೇಳಿದರು.
ತಾಲೂಕಿನ ಹವಗಿ ಗ್ರಾಮದಲ್ಲಿನ ಸರ್ಕಾರಿ ಐಟಿಐ ಕಾಲೇಜಿನಲ್ಲಿ ದೆಹಲಿಯ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಮಂತ್ರಾಲಯ ಹಾಗೂ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಿಂದ ಸೋಮವಾರ ನಡೆದ ಜಿಲ್ಲಾ ಮಟ್ಟದ ಪ್ರಧಾನಮಂತ್ರಿ ರಾಷ್ಟ್ರೀಯ ಶಿಶಿಕ್ಷು ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.ವೃತ್ತಿ ಕೌಶಲ ಉಳ್ಳವರಿಗೆ ಅವಕಾಶಗಳು ಹೇರಳವಾಗಿದ್ದು, ಉದ್ಯೋಗಗಳು ಸುಲಭವಾಗಿ ದೊರೆಯಲು ಸಾಧ್ಯವೆಂದರು.
ದೇಶದ ಆರ್ಥಿಕತೆಯು ಬದಲಾವಣೆಯ ಹಾದಿಯಲ್ಲಿ ಸಾಗಿದೆ. ಭಾರತವು ಮೇಕ್ ಇಂಡಿಯಾ ಹಾಗೂ ಸ್ಕಿಲ್ ಇಂಡಿಯಾದಂತಹ ವಿಚಾರಗಳಿಂದ ವಿಶ್ವದ ಗಮನ ಸೆಳೆದಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕೌಶಲಾಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆ ಎಂದರು.ಗೋವಾ ರಾಜ್ಯದ ಎಂಆರ್‌ಎಫ್, ಬಳ್ಳಾರಿಯ ಜಿಂದಾಲ್ ಸ್ಟೀಲ್, ದಾಂಡೇಲಿಯ ಕಾಗದ ಕಾರ್ಖಾನೆ, ಬೆಂಗಳೂರಿನ ಬಾಶ್, ಅಶೇಜರ್ಸ್, ಕನೆಕ್ಟ್, ಇಂಪ್ಯಾಕ್ಟ್ ಹಾಗೂ ಶಾಂಬಾ ಸೇರಿದಂತೆ ಇನ್ನಿತರ ಕಂಪನಿಗಳ ಪ್ರತಿನಿಧಿಗಳು ಮೇಳದಲ್ಲಿ ಭಾಗವಹಿಸಿ ಸುಮಾರು 500ಕ್ಕೂ ಅಧಿಕ ಜನರಿಗೆ ಶಿಶಿಕ್ಷು ನೀಡಲು ಆಯ್ಕೆ ಮಾಡಿಕೊಂಡರು. ಜಿಲ್ಲೆ ಸೇರಿದಂತೆ ರಾಜ್ಯದ ಇನ್ನಿತರ ಭಾಗಗಳಿಂದ ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗಿ ಮೇಳವನ್ನು ಸದುಪಯೋಗ ಪಡೆದುಕೊಂಡರು.
ಈ ಸಂದರ್ಭದಲ್ಲಿ ವಿವಿಧ ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳಾದ ವಿಜಯ ಮಹಾಂತೇಶ, ಸಹದೇವ, ಪವನ, ರಾಜಶೇಖರ ಹಾಗೂ ತರಬೇತಿ ಅಧಿಕಾರಿಗಳಾದ ಚಂದ್ರಕಾಂತ ಪಾತಾಳಿ, ಪ್ರೀತಾ ಚಿಕ್ಕಮಠ, ಎಮ್.ಬಿ.ಓಶೀಮಠ, ಸುಭಾಶ ಕಡವಾಡಕರ, ಆರ್.ಬಿ.ಪತ್ತಾರ, ಜಗದೀಶ ತೋರಗಲ್, ಪ್ರಶಾಂತ ಕುಂಬಾರ, ಅಮರೇಶ, ಆಗಸ್ಟಿನ್ ಕಾಳೆ, ರಾಜಶೇಖರ ಚವ್ಹಾಣ ಇದ್ದರು.