- ಬೆಂಗಳೂರಿನ ರಿಫಾ ಚೇಂಬರ್ ಆಫ್ ಕಾಮರ್ಸ್ ರಾಜ್ಯಾಧ್ಯಕ್ಷ ಸೈಯದ್ ಸಲಹೆ
- - -ಕನ್ನಡಪ್ರಭ ವಾರ್ತೆ ಹರಿಹರ
ಪ್ರತಿಷ್ಟಿತ ಉದ್ಯಮಗಳಲ್ಲಿ ಉದ್ಯೋಗ ಪಡೆಯಲು ವಿದ್ಯಾರ್ಥಿಗಳು ಪಠ್ಯದ ಜತೆಗೆ ಅಗತ್ಯ ಉದ್ಯಮ ಆಧಾರಿತ ಕೌಶಲ್ಯಗಳನ್ನು ಕಲಿಯಲು ಆದ್ಯತೆ ನೀಡಬೇಕು ಎಂದು ಬೆಂಗಳೂರಿನ ರಿಫಾ ಚೇಂಬರ್ ಆಫ್ ಕಾಮರ್ಸ್ ರಾಜ್ಯಾಧ್ಯಕ್ಷ ಸೈಯದ್ ಮುಮ್ತಾಜ್ ಮನ್ಸೂರಿ ಹೇಳಿದರು.ನಗರದ ಚಾನಲ್ ರಸ್ತೆ ಕಾಳಿದಾಸ ನಗರದ ಸಂಕಲ್ಪ ಅಕಾಡೆಮಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ವಾರ್ಷಿಕ ಸಮಾರಂಭ, ಪರ್ವಾಜ್ 3.0 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಎಂಜಿನಿಯರಿಂಗ್, ಎಂಬಿಎ, ಬಿಬಿಎ, ಬಿ.ಕಾಂ. ಬಿಸಿಎ ಸೇರಿದಂತೆ ಯಾವುದೇ ಪದವೀಧರರು ಉತ್ತಮ ಅಂಕಗಳನ್ನು ಪಡೆದರೆ ಸಾಲದು. ಸುಲಲಿತವಾಗಿ ಆಂಗ್ಲ ಭಾಷೆಯಲ್ಲಿ ಮಾತನಾಡುವುದು, ಕಂಪ್ಯೂಟರ್, ವ್ಯಾಪಾರ, ವಹಿವಾಟಿನ ವಾಸ್ತವ, ಕೌಶಲ್ಯಗಳ ಕಲಿಕೆ ಉದ್ಯೋಗದಾತರನ್ನು ಸೆಳೆಯುವ ಪ್ರಮುಖ ಅಂಶಗಳಾಗಿವೆ ಎಂದರು.
ಮುಖ್ಯ ಅತಿಥಿ, ಮಂತಿಖ್ ಟೆಕ್ನಾಲಜೀಸ್ ಸ್ಥಾಪಕ ಮೊಹ್ಮದ್ ಖಿಜರ್ ಮಾತನಾಡಿ, ಎಲ್ಲರಿಗೂ ಸರ್ಕಾರಿ ನೌಕರಿ ಸಿಗಲು ಸಾಧ್ಯವಿಲ್ಲ. ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಪಡೆಯುವುದು ಅನಿವಾರ್ಯವಾಗಿದೆ. ಗ್ರಾಮೀಣ ಭಾಗದ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಮಹಾನಗರಗಳ ವಿದ್ಯಾರ್ಥಿಗಳಂತೆ ಹೆಚ್ಚುವರಿ ಕೌಶಲ್ಯ, ತರಬೇತಿ ಪಡೆಯುವುದು ಮುಖ್ಯವಾಗಿದೆ ಎಂದರು.
ಮುಬಲ್ಲಿಗ್ ಸುನ್ನಿ ದಾವತ್ ಎ ಇಸ್ಲಾಂ ಸಂಸ್ಥೆ ಮುಖಂಡ ಸೈಯದ್ ಗುಲಾಮ್ ಹಸನ್ ನೂರಿ ಮಾತನಾಡಿ, ಹದಿಹರೆಯದಲ್ಲಿ ಶಿಕ್ಷಣಕ್ಕೆ ಧಕ್ಕೆ ಒದಗಿಸುವ ಹಲವು ಆಕರ್ಷಣೆಗಳು ಎದುರಾಗುತ್ತವೆ. ಅವುಗಳನ್ನು ಮೀರಿ ಶಿಕ್ಷಣಕ್ಕೆ ಆದ್ಯತೆ ನೀಡಿದರೆ ಉನ್ನತ ಸಾಧನೆ ಮಾಡಲು ಸಾಧ್ಯ. ಶಿಕ್ಷಣದ ಜೊತೆಗೆ ಆಂತರಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವತ್ತಲೂ ಶಿಕ್ಷಣ ಸಂಸ್ಥೆ ಆದ್ಯತೆ ನೀಡುತ್ತಿರುವುದು ಸಂತಸಕರ ಸಂಗತಿ ಎಂದರು.
ಮಲೇಬೆನ್ನೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಅಧ್ಯಾಪಕಿ ಅತಿಯಾ ಕೌಸರ್ ಮಾತನಾಡಿ, ಪಿಯುಸಿ ನಂತರ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಬಿಟ್ಟು ಬೇರೆ ಕೋರ್ಸ್‌ಗಳ ಕಲಿಕೆಯತ್ತ ಚಿತ್ತಹರಿಸಬೇಕು. ಕಡಿಮೆ ಖರ್ಚಿನಲ್ಲೇ ಉತ್ತಮ ಪದವಿ ಪಡೆದು ಪ್ರತಿಷ್ಟಿತ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಸಾಧ್ಯ ಎಂದರು.ಇಖ್ರಾ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮೊಹ್ಮದ್ ಇಸ್ಮಾಯಿಲ್ ಮುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಉತ್ತಮ ವಿದ್ಯಾರ್ಥಿಯಾಗಿ ಆಯ್ಕೆಯಾದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಜುವೇರಿಯಾ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸತ್ಕರಿಸಲಾಯಿತು. ಪ್ರಾಂಶುಪಾಲರು, ಅಧ್ಯಾಪಕರು, ಪೋಷಕರು, ವಿದ್ಯಾರ್ಥಿಗಳಿದ್ದರು.
- - --24HRR.01:
ಕಾಳಿದಾಸ ನಗರದ ಸಂಕಲ್ಪ ಅಕಾಡಮಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವಾರ್ಷಿಕ ಸಮಾರಂಭ ಪರ್ವಾಜ್ 3.0 ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.