ಮಾತು ಬಾರದವನಿಗೆ ಉದ್ಯೋಗ ಖಾತ್ರಿಯೇ ಆಸರೆ

| Published : Jun 04 2024, 12:32 AM IST

ಸಾರಾಂಶ

ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮಾ ಗಾಂಧಿ ನರೇಗಾ ಯೋಜನೆಯು ಕೇವಲ ವಯಸ್ಕರು, ವೃದ್ಧರಿಗಷ್ಟೇ ಅಲ್ಲದೇ, ಅಂಗವಿಕಲರ ಕುಟುಂಬದ ನಿರ್ವಹಣೆಗೂ ಕೂಡ ಆಸರೆಯಾಗಿದೆ.

ನರೇಗಾದಡಿ ಬದುಕು ಕಟ್ಟಿಕೊಂಡ ಚಂದ್ರಪ್ಪ ಛಲವಾದಿ

ಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮಾ ಗಾಂಧಿ ನರೇಗಾ ಯೋಜನೆಯು ಕೇವಲ ವಯಸ್ಕರು, ವೃದ್ಧರಿಗಷ್ಟೇ ಅಲ್ಲದೇ, ಅಂಗವಿಕಲರ ಕುಟುಂಬದ ನಿರ್ವಹಣೆಗೂ ಕೂಡ ಆಸರೆಯಾಗಿದೆ.

ಹೌದು! ತಾಲೂಕಿನಲ್ಲಿ ಸಾಕಷ್ಟು ಅಂಗವಿಕಲರು ನರೇಗಾ ಯೋಜನೆಯಡಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದನ್ನು ಕಾಣಬಹುದು. ಅದರಲ್ಲಿ ತಾಲೂಕಿನ ಕಂದಕೂರು ಗ್ರಾಮದ ಚಂದ್ರಪ್ಪ ಸಂಗಪ್ಪ ಛಲವಾದಿ ಇದ್ದೂರಲ್ಲೆ ಇದ್ದುಕೊಂಡು ನರೇಗಾ ಯೋಜನೆಯಲ್ಲಿ ಕೆಲಸ ಮಾಡುವ ಮೂಲಕ ಗುಳೆ ಹೋಗದೇ ತಮ್ಮ ಆರ್ಥಿಕ ಜೀವನ ಮಟ್ಟವನ್ನು ಸರಿದೂಗಿಸಿಕೊಂಡಿದ್ದಾರೆ.

ತಾಲೂಕಿನ ಕಂದಕೂರು ಗ್ರಾಪಂ ವ್ಯಾಪ್ತಿಯ ಕೇಂದ್ರ ಸ್ಥಾನ ಕಂದಕೂರು ಗ್ರಾಮದ ಚಂದ್ರಪ್ಪ ಛಲವಾದಿ ಹುಟ್ಟಿನಿಂದಲೇ ಇವರಿಗೆ ಮಾತು ಬರಲ್ಲ. ಅಲ್ಲದೇ, ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡುವ ಮೂಲಕ ಸ್ವಾವಲಂಬಿ ಜೀವನವನ್ನು ಸಾಗಿಸುತ್ತಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಾ ಬಂದಿದ್ದಾರೆ. ಗ್ರಾಮದಲ್ಲಿ ನಾಲಾ, ಕೆರೆ ಹೂಳೆತ್ತುವ ಕೆಲಸಕ್ಕೆ ತೆರಳುವ ಇವರು ಪ್ರತಿವರ್ಷ 80ಕ್ಕೂ ಹೆಚ್ಚು ಮಾನವ ದಿನಗಳನ್ನು ಪೂರೈಸಿದ್ದಾರೆ.

ಇನ್ನು ಇವರಿಗೆ ಮದುವೆಯಾಗಿದ್ದು, ಇಬ್ಬರು ಗಂಡು ಮಕ್ಕಳಿದ್ದು, ಶಾಲೆಗೆ ಹೋಗುತ್ತಿದ್ದಾರೆ. ಉದ್ಯೋಗ ಖಾತ್ರಿಯಡಿ ದುಡಿದ ದುಡ್ಡು ಮಕ್ಕಳ ಓದಿಗೆ ಅನುಕೂಲವಾಗಿದೆ ಎಂದು ಕೈಸನ್ನೆ ಮೂಲಕ ಖುಷಿ ಹಂಚಿಕೊಳ್ಳುತ್ತಾರೆ. ಒಟ್ಟಾರೆ ಉದ್ಯೋಗ ಖಾತ್ರಿ ಯೋಜನೆಯಿಂದ ಸಾಕಷ್ಟು ಜನರಿಗೆ ಅನುಕೂಲವಾಗಿದ್ದು, ಎಲ್ಲೂ ಗುಳೆ ಹೋಗದೇ ಇದ್ದೂರಲ್ಲೇ ಸುಂದರ ಬದುಕು ಕಟ್ಟಿಕೊಳ್ಳುವಲ್ಲಿ ಆಸರೆಯಾಗಿದೆ ಎನ್ನಬಹುದಾಗಿದೆ.

ಅಂಗವಿಕಲರಿಗೆ ಮಾತಿನ ಅನುಕಂಪ ತೋರಿಸುವ ಬದಲು ಸಮಾಜದಲ್ಲಿ ಇತರರಂತೆ ಬದುಕಲು ಅವರಿಗೆ ಅವಕಾಶ ಕಲ್ಪಿಸಿಕೊಡಬೇಕು. ಆ ನಿಟ್ಟಿನಲ್ಲಿ ನಮ್ಮ ನರೇಗಾ ಯೋಜನೆಯು ಸಹಕಾರಿಯಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಅಂಗವಿಕಲರು, ಹಿರಿಯ ನಾಗರಿಕರಿಗೆ ನರೇಗಾದಡಿ ಕೆಲಸ ನೀಡಲಾಗಿದೆ ಎಂದು ತಾಪಂ ಇಒ ನಿಂಗಪ್ಪ ಮಸಳಿ ತಿಳಿಸಿದ್ದಾರೆ.