ಧಾರವಾಡ: ವಯಸ್ಸು ಮೀರುತ್ತಿದ್ದರೂ ನೌಕರಿ ಸಿಗದೇ ಪರದಾಡುತ್ತಿರುವ ಉದ್ಯೋಗಾಕಾಂಕ್ಷಿಗಳು ಸರ್ಕಾರದ ವಿರುದ್ಧ ಈಗಾಗಲೇ ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಇಷ್ಟಾಗಿಯೂ ಸರ್ಕಾರದಿಂದ ಸ್ಪಂದನೆ ಸಿಗದೇ ಧಾರವಾಡದಲ್ಲಿ ಸರ್ಕಾರಿ ನೌಕರಿ ಆಕಾಂಕ್ಷಿಯೊಬ್ಬರು ದಯಾಮರಣ ಕೋರಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದಾರೆ.

ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಸರ್ಕಾರ ನೀಡಿದ ಭರವಸೆಯಂತೆ ಇಲ್ಲಿಯವರೆಗೆ ಲಕ್ಷಾಂತರ ಉದ್ಯೋಗಗಳ ಭರ್ತಿಗೆ ಅಧಿಸೂಚನೆ ಹೊರಡಿಸಬೇಕಿತ್ತು. ನಮ್ಮಂತಹ ಲಕ್ಷಾಂತರ ಯುವಕರ ವಯೋಮಿತಿ ಮೀರುತ್ತಿದೆ. ಈಗ ಮನೆ ಜವಾಬ್ದಾರಿ ಮತ್ತು ಭವಿಷ್ಯದ ಅನಿಶ್ಚಿತತೆಯಿಂದ ಬದುಕುವ ಭರವಸೆಯೇ ಕಳೆದುಹೋಗುತ್ತಿದೆ. ಜೀವನೋಪಾಯದ ದಾರಿ ಕಾಣದ ನನಗೆ ಬದುಕು ಸಾಗಿಸುವುದು ಅಸಾಧ್ಯವಾಗಿದ್ದು, ದಯವಿಟ್ಟು ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಉಪ್ಪಲದಿನ್ನ ಗ್ರಾಮದ ವಿಜಯ ಲಮಾಣಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

ಬಿಕಾಂ ಪದವೀಧರರಾಗಿರುವ ವಿಜಯ ಲಮಾಣಿ 2020ರಲ್ಲಿಯೇ ಪದವಿ ಮುಗಿಸಿದರು. 2021ರಲ್ಲಿ ಭಾರತೀಯ ಸೇನೆಗೆ ನೇಮಕಗೊಂಡಿದ್ದರು. ಆದರೆ ಅಗ್ನಿವೀರ ಯೋಜನೆ ಜಾರಿ ಹಿನ್ನೆಲೆಯಲ್ಲಿ ಆ ಅಧಿಸೂಚನೆಯೇ ರದ್ದುಗೊಂಡಿತು. ಆನಂತರದಲ್ಲಿ ಪಿಎಸ್‌ಐ, ಪೊಲೀಸ್ ಪೇದೆ ಹುದ್ದೆಗೆ ಯತ್ನಿಸಿ 2 ಅಂಕಗಳಲ್ಲಿ ಅನುತ್ತೀರ್ಣಗೊಂಡಿದ್ದರು. ಆನಂತರ ಅವರಿವರ ಬಳಿ ಸಾಲ ಪಡೆದು ಓದು ಮುಂದುವರಿಸಿದ ಅವರು ನೌಕರಿ ಸಿಗುವ ವಿಶ್ವಾಸದಲ್ಲಿದ್ದಾರೆ. ಆದರೆ, ಹುದ್ದೆ ಭರ್ತಿ ಆಗದ್ದರಿಂದ ನಿರಾಸೆಗೊಂಡಿದ್ದಾರೆ. ಅವರಿಗೆ ತಂದೆ ಇಲ್ಲ. ಸಹೋದರ ನಾನಪ್ಪ ಅವರಿಗೆ ಎರಡೂ ಕಾಲಿಲ್ಲ. ಇನ್ನೊಬ್ಬ ಸಹೋದರ ಕೃಷಿಕಾರ್ಮಿಕ. ಈಗಲೂ ಅವರ ದುಡಿಮೆಯಲ್ಲಿಯೇ ಬದುಕುತ್ತಿರುವ ಇವರು ನೇಮಕಾತಿ ವಿಳಂಬದಿಂದ ಕುಗ್ಗಿ ಹೋಗಿದ್ದಾರೆ.

ನಮ್ಮ ಕುಟುಂಬ ಸಾಲದ ಸುಳಿಯಲ್ಲಿ ಸಿಲುಕಿದೆ. ದುಡಿದು ಮನೆಗೆ ಹಣ ಕೊಡಬೇಕಾದ ವಯಸ್ಸು ನನ್ನದು. ಆದರೆ, ಈಗಲೂ ಅಣ್ಣನ ದುಡಿಮೆಯ ದುಡ್ಡು ಅವಲಂಬಿಸಿರುವೆ. ಇನ್ನೊಂದು ವರ್ಷ ಕಳೆದರೆ ವಯೋಮಿತಿಯೂ ಮೀರಿ ಹೋಗಲಿದೆ. ಹೀಗಾಗಿ ನಾನು ಬದುಕಿದರೆಷ್ಟು, ಸತ್ತರೆಷ್ಟು ಎಂದುಕೊಂಡು ದಯಾಮರಣ ಕೋರಿ ಅರ್ಜಿ ಸಲ್ಲಿಸಿದ್ದೇನೆ ಎನ್ನುತ್ತಾರೆ ವಿಜಯ ಲಮಾಣಿ.