ಸಾರಾಂಶ
ಬಳ್ಳಾರಿ: ರಾಜ್ಯದಲ್ಲಿ ಖಾಲಿ ಇರುವ 2.84 ಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯಿಂದ ನಗರದಲ್ಲಿ ಸೋಮವಾರ ನೂರಾರು ಯುವಕರು ಪ್ರತಿಭಟನಾ ಮೆರವಣಿಗೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ಖಾಲಿ ಹುದ್ದೆಗಳ ಭರ್ತಿಗೆ ಕೋವಿಡ್ ಕಾರಣ ಹೇಳಿ ಯಾವುದೇ ಪ್ರಯತ್ನ ಮಾಡಲಿಲ್ಲ. ತಾನು ಅಧಿಕಾರಕ್ಕೆ ಬಂದರೆ ಎಲ್ಲ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂತು. ಆದರೆ ಅಧಿಕಾರಕ್ಕೆ ಬಂದು 2 ವರ್ಷ 4 ತಿಂಗಳು ಕಳೆದರೂ ಒಳ ಮೀಸಲಾತಿ ಹೆಸರಿನಲ್ಲಿ ಯಾವುದೇ ನೇಮಕಾತಿ ಮಾಡಿಲ್ಲ. ತಾನು ನೀಡಿದ ಉದ್ಯೋಗದ ಗ್ಯಾರಂಟಿಯನ್ನು ಅಧಿಕಾರಕ್ಕೆ ಬಂದ ನಂತರ ಕಾರ್ಯರೂಪಕ್ಕೆ ತರುವುದೆಂದು ಯುವಜನತೆ ನಿರೀಕ್ಷೆಯಲ್ಲಿದ್ದರು. ಆದರೆ, ಯುವಸಮುದಾಯದ ನಿರೀಕ್ಷೆಯನ್ನು ರಾಜ್ಯ ಸರ್ಕಾರ ಸಂಪೂರ್ಣ ಹುಸಿಗೊಳಿಸಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.2025-26ನೇ ಸಾಲಿಗೆ ರಾಜ್ಯದ 43 ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ ಬಿದ್ದಿವೆ. ಅವುಗಳ ನೇಮಕಕ್ಕೆ ಕಿಂಚಿತ್ತು ಪ್ರಯತ್ನಗಳು ನಡೆಯುತ್ತಿಲ್ಲ. ಕೆಲವು ಕುಂಟುನೆಪಗಳನ್ನು ಹೇಳುತ್ತಾ ನೇಮಕಾತಿಗಳನ್ನು ಮುಂದೂಡಲಾಗುತ್ತಿದೆ. ರಾಜ್ಯದ ಎಲ್ಲೆಡೆ ಲಕ್ಷಾಂತರ ಉದ್ಯೋಗಾಕಾಂಕ್ಷಿ ಯುವಜನರು ಸರ್ಕಾರ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಬಹುದೆಂದು ಹಲವಾರು ವರ್ಷಗಳಿಂದ ಪರೀಕ್ಷೆಗಳ ತಯಾರಿ ನಡೆಸುತ್ತಿದ್ದಾರೆ. 4-5 ವರ್ಷಗಳಿಂದ ನೇಮಕಾತಿಗಳೇ ನಡೆಯದಿರುವುದರಿಂದ ಅದೆಷ್ಟೋ ಯುವಜನರು ತಮ್ಮ ಅರ್ಹತಾ ವಯಸ್ಸನ್ನು ಮೀರಿದ್ದಾರೆ. ಉದ್ಯೋಗದ ಭರವಸೆಯಿಲ್ಲದೇ ಯುವಜನರು ಆತ್ಮಹತ್ಯೆಯಂತಹ ಕಠಿಣ, ನೋವಿನ ನಿರ್ಧಾರಕ್ಕೆ ಮೊರೆ ಹೋಗುತ್ತಿದ್ದಾರೆ ಎಂದು ಪ್ರತಿಭಟನೆ ಬೆಂಬಲಿಸಿ ಮಾತನಾಡಿದ ಎಐಡಿವೈಒ ಸಂಘಟನೆಯ ರಾಜ್ಯಾಧ್ಯಕ್ಷ ಶರಣಪ್ಪ ಉದ್ಬಾಳ್ ತಿಳಿಸಿದರು.ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 59,454 ಹುದ್ದೆಗಳು ಖಾಲಿ ಬಿದ್ದಿವೆ. ಕಲ್ಯಾಣ ಕರ್ನಾಟಕ ಭಾಗದ 6 ಜಿಲ್ಲೆಗಳಲ್ಲಿ 21,381 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಮತ್ತೊಂದೆಡೆ ಆರೋಗ್ಯ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಕಂದಾಯ, ಒಳಾಡಳಿತ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ಬಹಳ ದೊಡ್ಡ ಸಂಖ್ಯೆಯ ಹುದ್ದೆಗಳು ಖಾಲಿ ಇರುವುದರಿಂದ ಜನಸಾಮಾನ್ಯರಿಗೆ ಸಿಗಬೇಕಾದ ಸೇವೆಗಳು ಸರಿಯಾಗಿ ತಲುಪುತ್ತಿಲ್ಲ. ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ತುಂಬಿಕೊಂಡು ಪುಡಿಗಾಸಿಗೆ, ಉದ್ಯೋಗ ಭದ್ರತೆ ನೀಡದೇ ದುಡಿಸಿಕೊಳ್ಳಲಾಗುತ್ತಿದೆ ಎಂದು ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಜಗದೀಶ್ ನೇಮಕಲ್ ಆರೋಪಿಸಿದರು.
ನೇಮಕಾತಿಗಾಗಿ ಯುವಕರು ಹಲವು ವರ್ಷಗಳಿಂದ ಎದುರು ನೋಡುತ್ತಿದ್ದಾರೆ. ಸಾವಿರಾರು ರೂಪಾಯಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಖರ್ಚು ಮಾಡಿಕೊಂಡಿದ್ದಾರೆ. ಹಗಲಿರುಳು ಕೂಲಿ-ನಾಲಿ ಮಾಡಿ, ಸಾಲ ಮಾಡಿ ಪೋಷಕರು ಮಕ್ಕಳಿಗೆ ಕೋಚಿಂಗ್ ಕೊಡಿಸುತ್ತಿದ್ದಾರೆ. ಇಷ್ಟೆಲ್ಲ ಗಂಭೀರ ಸಮಸ್ಯೆಗಳನ್ನು ಯುವಜನರು ಎದುರಿಸುತ್ತಿದ್ದರೂ ಸರ್ಕಾರಗಳು ಈ ಬಗ್ಗೆ ಮಾನವೀಯವಾಗಿ ವರ್ತಿಸುತ್ತಿಲ್ಲ. ಈಗಲಾದರೂ ಸರ್ಕಾರಗಳು ಯಾವುದೇ ನೆಪಗಳನ್ನು ಹೇಳದೆ, ಕೆಲವೇ ಸಾವಿರ ಹುದ್ದೆಗಳ ಭರ್ತಿಗೆ ಸೀಮಿತಗೊಳಿಸದೇ ಎಲ್ಲ ಖಾಲಿ ಹುದ್ದೆಗಳ ಭರ್ತಿಗೆ ಕೂಡಲೇ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಮುಖ್ಯವಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳನ್ನು ತಡೆಗಟ್ಟಿ, ಪಾರದರ್ಶಕತೆ ತರುವ ಮೂಲಕ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ನಾಲೈದು ವರ್ಷಗಳಿಂದ ನೇಮಕಾತಿಗಳು ನಡೆಯದ ಕಾರಣ ಅರ್ಹತಾ ವಯೋಮಿತಿಯಲ್ಲಿಯೂ ಕನಿಷ್ಠ ಐದು ವರ್ಷಗಳ ಸಡಿಲಿಕೆ ಮಾಡಬೇಕು. ದುಬಾರಿ ಅರ್ಜಿ ಶುಲ್ಕವನ್ನು ಕೈಬಿಡಬೇಕು ಎಂದು ಜಗದೀಶ್ ನೇಮಕಲ್ ಆಗ್ರಹಿಸಿದರು.ಇಲ್ಲಿನ ನಗರೂರು ನಾರಾಯಣರಾವ್ ಪಾರ್ಕ್ ನಿಂದ ಮೆರವಣಿಗೆ ಹೊರಟ ನೂರಾರು ಉದ್ಯೋಗಾಕಾಂಕ್ಷಿಗಳು ಗಡಗಿಚನ್ನಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ, ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಕಳಿಸಿಕೊಟ್ಟರು. ಹೋರಾಟ ಸಮಿತಿಯ ಪ್ರಮೋದ್, ಪುರುಷೋತ್ತಮ, ಆಂಜನೇಯ, ಸುಜಾತಾ ನವಲಗುಂದ, ಎನ್.ಸುರೇಶ್, ಗೋಪಾಲ್, ಮೋಹನ್, ನಾಗರಾಜ್, ಟಿ.ಮಂಜುನಾಥ, ಶಿವಶಂಕರ್ ಭಾಗವಹಿಸಿದ್ದರು.