ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಯಾವುದೇ ಅಹಂವಿಲ್ಲದೇ ಎಲ್ಲರನ್ನೂ ತೆಗೆದುಕೊಂಡು ಹೋಗುವ ವ್ಯಕ್ತಿತ್ವವುಳ್ಳವರಾದ ಬಸವರಾಜ ಜಾಬಶೆಟ್ಟಿ ಅವರನ್ನು ಸರ್ಕಾರವು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನೇಮಕ ಮಾಡಿದೆ ಎಂದು ಬೀದರ್ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದರ್ ನುಡಿದರು.ಅವರು ನಗರದ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಮತ್ತು ನ್ಯಾಸ ಹಾಗೂ ವಿವಿಧ ಅಂಗ ಸಂಸ್ಥೆಗಳಿಂದ ಆಯೋಜಿಸಲಾದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಾನು ಬೀದರ್ ವಿಶ್ವವಿದ್ಯಾಲಯ ಕುಲಪತಿಗಳಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಅವರನ್ನು ಬಹಳ ಹತ್ತಿರದಿಂದ ಗಮನಿಸುತ್ತೀರುವೆ. ಬಸವರಾಜ್ ಜಾಬಶೆಟ್ಟಿ ಅವರು ಮೇರು ವ್ಯಕ್ತಿತ್ವವುಳ್ಳವರು, ಅತ್ಯಂತ ಸರಳ ಜನಪರ ಸೇವಾ ಮನೋಭಾವನೆವುಳ್ಳ ಜನನಾಯಕರು ಸದಾಕಾಲ ಪ್ರಗತಿಪರ ಯೋಚನೆವುಳ್ಳವರಾಗಿದ್ದು ಜೊತೆಗೆ ಜನರಿಗೆ ಅತ್ಯಂತ ಹತ್ತಿರವಾದವರಾಗಿದ್ದಾರೆ ಎಂದರು.
ಕಲಬುರಗಿ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ಜಿ. ಮೂಲಿಮನಿ ಮಾತನಾಡಿ, ಜಾಬಶೆಟ್ಟಿ ಅವರು ಬಡವ-ಬಲ್ಲಿದ ಎಂಬ ಬೇದಭಾವವಿಲ್ಲದೆ ಎಲ್ಲಾ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುತ್ತಿರುವ ಕೆಆರ್‌ಇ ಸಂಸ್ಥೆಯ ಅಧ್ಯಕ್ಷರು ಸುಮಾರು ಸುದೀರ್ಘ 42 ವರ್ಷಗಳ ರಾಜಕೀಯ ಮತ್ತು ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆ ಮಾತಿನಲ್ಲಿ ವಿವರಿಸಲಾಗದು. ಅವರ ಶೈಕ್ಷಣಿಕ ಕಾಳಜಿ ಪ್ರಾಧ್ಯಾಪಕರಿಗಿಂತಲು ಹೆಚ್ಚಿದೆ ಎಂದು ತೋರಿಸಿಕೊಡುತ್ತಿದೆ ಎಂದು ನುಡಿದರು.ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಸುಮಾರು 42 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಮಾಡಿ ಎಂದಿಗೂ ಅಧಿಕಾರ ಆಸೆ ಪಟ್ಟವನಲ್ಲ ನನ್ನ ಗುರಿ ಅಭಿವೃದ್ಧಿಯಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದಾಗ ನಿಮಗೆ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದೇನೆ. ನೀವು ಜನರು ಶಾಶ್ವತವಾಗಿ ನೆನಪಿಡುವಂತಹ ಕೆಲಸಗಳು ನಿಮ್ಮಿಂದ ಆಗಲಿ ಎಂದು ಶುಭ ಹಾರೈಸಿದರು. ಅದರಂತೆ ಮುಂದಿನ ದಿನಗಳಲ್ಲಿ ಜನರ ಆಸೆಗೆ ತಕ್ಕಂತೆ ಅಭಿವೃದ್ಧಿ ಕೆಲಸ ಮಾಡಲು ಪ್ರಯತ್ನಿಸುತ್ತೇನೆಂದು ಹೇಳಿದರು.ಸಂಸ್ಥೆಯ ಉಪಾಧ್ಯಕ್ಷರಾದ ಬಿ ಜಿ. ಶೆಟಕಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಸವರಾಜ ಜಾಬಶೆಟ್ಟಿ ಅವರಿಗೆ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡುವುದರ ಮೂಲಕ ಆ ಹುದ್ದೆಗೆ ಮತ್ತಷ್ಟು ಗೌರವ ಬಂದಂತಾಗಿದೆ ಜೊತೆಗೆ ನಮ್ಮ ಸಂಸ್ಥೆಗೂ ಹೆಮ್ಮೆ ತಂದಿದೆ ಮುಂದಿನ ದಿನಗಳಲ್ಲಿ ಅವರು ಉನ್ನತ ಹುದ್ದೆಗೆ ಏರಲಿ ಎಂದರು.
ಸಂಸ್ಥೆ ಕಾರ್ಯದರ್ಶಿ ಸಿದ್ದರಾಮ ಪಾರಾ ಪ್ರಾಸ್ತಾವಿಕ ಮಾತನಾಡಿದರು. ಲಕ್ಷೀ ನಿರೂಪಿಸಿದರೆ ಐ.ಟಿ.ಐ.ಕಾಲೇಜಿನ ಪ್ರಾಚಾರ್ಯ ವಿಜಯ್‌ಕುಮಾರ್ ವಂದಿಸಿದರು.ಇದೇ ವೇಳೆ ಸಂಸ್ಥೆಯ ಜಂಟಿ ಕಾರ್ಯದರ್ಶಿಗಳು ಸತೀಶ್ ಪಾಟೀಲ್ ಹಾಗೂ ನ್ಯಾಸದ ಕಾರ್ಯದರ್ಶಿಗಳಾದ ಮಡಿವಾಳಪ್ಪ ಗಂಗಶೆಟ್ಟಿ ಮತ್ತು ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ವಿವಿಧ ಅಂಗ ಸಂಸ್ಥೆಗಳ ಪ್ರಾಚಾರ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.