ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಇದೇ 17ರ ಶನಿವಾರ ಪಟ್ಟಣದ ದಿ.ನರಸಪ್ಪ ಸ್ಮಾರಕ ಬಯಲು ರಂಗಮಂದಿರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸವಿನೆನಪಿಗಾಗಿ ದ್ವಿತೀಯ ಬಾರಿಗೆ ರಾಷ್ಟ್ರ ಮಟ್ಟದ ಜೋಡಿ ಕುಸ್ತಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕುಸ್ತಿ ಸಮಿತಿ ಅಧ್ಯಕ್ಷ ಎಂ.ಸಂದೀಪ್ ತಿಳಿಸಿದರು.ಬುಧವಾರ ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದೃಢ ಪ್ರಜೆ ಬಲಿಷ್ಠ ದೇಶದ ಸಂಕೇತವಾಗಿದೆ. ಈ ದಿಸೆಯಲ್ಲಿ ಪವರ್ ಸ್ಟಾರ್ ದಿ.ಪುನೀತ್ ರಾಜಕುಮಾರ್ ರವರ ಸದೃಢ ಮೈಕಟ್ಟು, ಅಸಹಾಯಕರು, ನಿರ್ಗತಿಕರ ಬಗೆಗಿನ ಪ್ರಾಮಾಣಿಕ ಕಾಳಜಿ ಮತ್ತಿತರ ಅಪರೂಪದ ವ್ಯಕ್ತಿತ್ವದಿಂದ ಮಾದರಿಯಾಗಿರುವ ಅವರ ಸವಿನೆನಪಿನಲ್ಲಿ ಇದೀಗ ದ್ವಿತೀಯ ಬಾರಿಗೆ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ತಿಳಿಸಿದರು.ಕುಸ್ತಿ ಅಪ್ಪಟ ಗ್ರಾಮೀಣ ಕ್ರೀಡೆಯಾಗಿದೆ. ಇತ್ತೀಚಿನ ವರ್ಷದಲ್ಲಿ ಕ್ರಿಕೆಟ್, ವಾಲಿಬಾಲ್, ಹಾಕಿ ಮತ್ತಿತರ ಕ್ರೀಡೆಯಲ್ಲಿ ಕುಸ್ತಿ ಪಂದ್ಯಕ್ಕೆ ಪ್ರೋತ್ಸಾಹ ಕಡಿಮೆಯಾಗುತ್ತಿದೆ. ಕ್ರಮೇಣ ಮರೆಯಾಗುವ ಆತಂಕವಿದ್ದು, ಈ ದಿಸೆಯಲ್ಲಿ ಕುಸ್ತಿ ಪ್ರೋತ್ಸಾಹಿಸಿ ದೈಹಿಕ ಕಸರತ್ತು ಮೂಲಕ ಸದೃಢ ಆರೋಗ್ಯವಂತ ಶರೀರಕ್ಕಾಗಿ ಉತ್ತೇಜಿಸಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.ಸ್ಪರ್ದೆಯಲ್ಲಿ ಕಳೆದ ಬಾರಿ 20 ಜೋಡಿ ಕುಸ್ತಿ ಪಟು ಪಾಲ್ಗೊಂಡಿದ್ದು ಇದೀಗ ಪುನಃ 20 ಜೋಡಿ ಪಟುಗಳು ಕೊಲ್ಹಾಪುರ, ಪುಣೆ, ಮುಂಬೈ, ಹರ್ಯಾಣ, ಪಂಜಾಬ್, ಬೆಳಗಾವಿ, ಧಾರವಾಡ ಸಹಿತ ಸುತ್ತುಮುತ್ತಲಿನ ವಿವಿಧ ರಾಜ್ಯದ ಪ್ರಸಿದ್ಧ ಪಟುಗಳು ಸೆಣಸಾಡಲಿದ್ದಾರೆ. ರಾಷ್ಟ್ರಮಟ್ಟದ ಹೆಸರಾಂತ ಪಟು ಕಿಶನ್ ಭಗತ್ ಕೈಚಳಕ ವೀಕ್ಷಿಸಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ ಎಂದು ತಿಳಿಸಿದರು.ಪ್ರಥಮ ಬಹುಮಾನ ₹1ಲಕ್ಷ, ದ್ವಿತೀಯ ₹80 ಸಾವಿರ, ತೃತೀಯ ₹60 ಸಾವಿರ ನಂತರ ಕ್ರಮವಾಗಿ ₹40, 30, 20, 10 ಸಾವಿರ ರು. ಜತೆಗೆ ಬೆಳ್ಳಿಗದೆ ಟ್ರೋಫಿ ನೀಡಲಾಗುವುದು ಎಂದರು.
ಪಂದ್ಯಾವಳಿಯನ್ನು ಶನಿವಾರ ಮಧ್ಯಾಹ್ನ 3ಕ್ಕೆ ಸಂಸದ ರಾಘವೇಂದ್ರ ಉದ್ಘಾಟಿಸಲಿದ್ದು, ಶಾಸಕ ವಿಜಯೇಂದ್ರ ಚಾಲನೆ ನೀಡಲಿದ್ದಾರೆ. ಕಮಿಟಿ ಗೌರವಾಧ್ಯಕ್ಷ ಎಂ.ಶ್ರೀಕಾಂತ್, ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್, ವೀರಶೈವ ಸಮಾಜದ ಅಧ್ಯಕ್ಷ ಈರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಹುಲ್ಮಾರ್, ಮಹಿಳಾ ಅಧ್ಯಕ್ಷೆ ಪುಷ್ಪಾ ಸಹಿತ ಗಣ್ಯರು ಸಾಕ್ಷಿಯಾಗಲಿದ್ದಾರೆ.ಕ್ರೀಡಾಸಕ್ತರು,ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಗೋಷ್ಠಿಯಲ್ಲಿ ಮಾಜಿ ಕುಸ್ತಿ ಪಟು ಭಂಡಾರಿ ಮಾಲತೇಶ, ವೀರಶೈವ ಸಮಾಜದ ಅಧ್ಯಕ್ಷ ಈರೇಶ್, ಕುಸ್ತಿ ಪಟು ನವೀನ್ ಶೆಟ್ಟಿ, ಗಜೇಂದ್ರ, ಸುಹಾಸ್ ಭಟ್ ಮತ್ತಿತರರಿದ್ದರು.