ಏ.3 ರಂದು ಶಕಾಪುರದಲ್ಲಿ ಜೋಡು ರಥೋತ್ಸವ

| Published : Mar 29 2024, 12:48 AM IST

ಸಾರಾಂಶ

ಮಾತೋಶ್ರೀ ಬಸವಾಂಬೆ ತಾಯಿ ಅವರ 73ನೇ ಜಾತ್ರಾ ಮಹೋತ್ಸವ ನಿಮಿತ್ತ ಏ.3ರಂದು ಸಂಜೆ ೬ಕ್ಕೆ ಜೋಡು ರಥೋತ್ಸವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಜೇವರ್ಗಿ

ತಾಲೂಕಿನ ಶಖಾಪುರ ಎಸ್.ಎ. ಗ್ರಾಮದ ಆರಾಧ್ಯ ದೈವ, ಸಿದ್ದಕುಲ ಚಕ್ರವರ್ತಿ ಸದ್ಗುರು ವಿಶ್ವಾರಾಧ್ಯರು ಮತ್ತು ಅವರ ಧರ್ಮಪತ್ನಿ ಮಾತೋಶ್ರೀ ಬಸವಾಂಬೆ ತಾಯಿ ಅವರ 73ನೇ ಜಾತ್ರಾ ಮಹೋತ್ಸವ ನಿಮಿತ್ತ ಏ.3ರಂದು ಸಂಜೆ ೬ಕ್ಕೆ ಜೋಡು ರಥೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ಶಖಾಪುರದ ವಿಶ್ವಾರಾಧ್ಯ ತಪೋವನ ಮಠದ ಪೀಠಾಧಿಪತಿ ಡಾ.ಸಿದ್ಧರಾಮ ಶಿವಾಚಾರ್ಯರು ಹೇಳಿದರು.

ತಾಲೂಕಿನ ಶಖಾಪುರ ತಪೋವನ ಮಠದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ, ಜಾತ್ರಾ ಮಹೋತ್ಸವಕ್ಕೂ ಮುಂಚೆ ಲೋಕಕಲ್ಯಾಣಾರ್ಥವಾಗಿ ಏ.1 ಮತ್ತು 2ರಂದು ಸದ್ಗುರು ವಿಶ್ವಾರಾಧ್ಯರ ಧರ್ಮಪತ್ನಿ ಮಾತೋಶ್ರೀ ಬಸವಾಂಬೆ ತಾಯಿಯವರ ಜನ್ಮ ಸ್ಥಳ ಜೋಗೂರ ನಿಂದ ಶಕಾಪುರದ ವರೆಗೆ ಎರಡು ದಿನಗಳವರೆಗೆ ಪಾದಯಾತ್ರೆ ನಡೆಯಲಿದ್ದು, ಮೈನಾಳ, ಚಿನಮಳ್ಳಿ, ಕಲ್ಲೂರ ಮಾರ್ಗವಾಗಿ ನೆಲೋಗಿಗೆ ಆಗಮಿಸಿ ಅಲ್ಲಿ ಏ.1ರಂದು ಧರ್ಮಸಭೆ ನಡೆಯಲಿದೆ. ನಂತರ ಕೂಟನೂರ, ಹರವಾಳ, ಜನಿವಾರ, ಸೌಳಹಾಳ ಮುಖಾಂತರ ಮುಕ್ತಿ ಕ್ಷೇತ್ರ ಶಕಾಪುರಕ್ಕೆ ಲೋಕಕಲ್ಯಾಣಕ್ಕಾಗಿ ಪಾದಯಾತ್ರೆಯಲ್ಲಿ ಸುಮಾರು 5 ಸಾವಿರ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು. ಮಾತೋಶ್ರೀ ಬಸವಾಂಬೆ ತಾಯಿ ಅವರ 73ನೇ ಜಾತ್ರಾ ಮಹೋತ್ಸವ ನಿಮಿತ್ತ ಏ.3ರಂದು ಸಂಜೆ 6 ಗಂಟೆಗೆ ಜೋಡು ರಥೋತ್ಸವ ಜರುಗಲಿದೆ.

ಮಾ.24ರಿಂದ ಏ.2ರವರೆಗೆ ಶ್ರೀ ಅಜಾತ ನಾಗಲಿಂಗ ಶಿವಯೋಗಿಗಳ ಮಹಾ ಪುರಾಣವನ್ನು ಶಿವಾನಂದ ಶಾಸ್ತ್ರೀಗಳು ನಡೆಸಿಕೊಡಲಿದ್ದು, ಕಲ್ಲಯ್ಯಸ್ವಾಮಿ, ಸೂರ್ಯಕಾಂತ ಮಾಸ್ತರ, ಕು.ಸಂಜನಾ ದೇಸಾಯಿ, ಪ್ರಾಣೇಶ ಶಹಾಪುರ ಸಂಗೀತ ಸೇವೆ ಸಲ್ಲಿಸಲಿಸುತ್ತಿದ್ದಾರೆ ಎಂದರು.

ಏ.3ರಂದು ಸಂಜೆ ನಡೆಯಲಿರುವ ಧಾರ್ಮಿಕ ಸಭೆಯ ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ. ಶಕಾಪುರ ತಪೋವನ ಮಠದ ಡಾ.ಸಿದ್ಧರಾಮ ಶಿವಾಚಾರ್ಯರು ನೇತೃತ್ವ, ಪಾಳಾದ ಡಾ.ಗುರುಮೂರ್ತಿ ಶಿವಾಚಾರ್ಯರು ಅಧ್ಯಕ್ಷತೆ ವಹಿಸಲಿದ್ದಾರೆ. ನಾಡಿನ ಮಠಾಧೀಶರು, ಹರ ಗುರು ಚರ ಮೂರ್ತಿಗಳು ಧಾರ್ಮಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.