ಕಾರಟಗಿಯಲ್ಲಿ ವಿಜೃಂಭಣೆಯ ಜೋಡು ರಥೋತ್ಸವ, ಪುರಾಣ ಕಾರ್ಯಕ್ರಮ ಸಂಪನ್ನ

| Published : Sep 14 2024, 01:58 AM IST

ಕಾರಟಗಿಯಲ್ಲಿ ವಿಜೃಂಭಣೆಯ ಜೋಡು ರಥೋತ್ಸವ, ಪುರಾಣ ಕಾರ್ಯಕ್ರಮ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಕಾರಟಗಿ ಪಟ್ಟಣದ ಆರಾಧ್ಯದೈವ ಶ್ರೀ ಶರಣಬಸವೇಶ್ವರರ ಜೋಡು ರಥೋತ್ಸವ ಶುಕ್ರವಾರ ಸಂಜೆ ಜನಸಾಗರದ ನಡುವೆ ವಿಜೃಂಭಣೆಯೊಂದಿಗೆ ನಡೆಯಿತು. ಇದರೊಂದಿಗೆ ತಿಂಗಳ ಪರ್ಯಂತ ಸಾಗಿದ ಸುವರ್ಣ ಮಹೋತ್ಸವದ ಪುರಾಣ ಪ್ರವಚನ, ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡಿತು.

ಕಾರಟಗಿ: ಪಟ್ಟಣದ ಆರಾಧ್ಯದೈವ ಶ್ರೀ ಶರಣಬಸವೇಶ್ವರರ ಜೋಡು ರಥೋತ್ಸವ ಶುಕ್ರವಾರ ಸಂಜೆ ಜನಸಾಗರದ ನಡುವೆ ವಿಜೃಂಭಣೆಯೊಂದಿಗೆ ನಡೆಯಿತು.

ನೆರೆದಿದ್ದ ಸಾವಿರಾರೂ ಭಕ್ತರು ಜೋಡು ರಥಗಳು ಸಾಗುವುದನ್ನು ಭಕ್ತಿಯಿಂದ ಕಣ್ತುಂಬಿಕೊಂಡರು. ಇದರೊಂದಿಗೆ ತಿಂಗಳ ಪರ್ಯಂತ ಸಾಗಿದ ಸುವರ್ಣ ಮಹೋತ್ಸವದ ಪುರಾಣ ಪ್ರವಚನ, ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡಿತು.

ದೇವಸ್ಥಾನದ ಮುಂದಿನ ರಥಬೀದಿಯಲ್ಲಿ ಅಲಂಕೃತ ಎರಡು ರಥಗಳಲ್ಲಿ, ನಿಗದಿಯಾಗಿದ್ದ ೬.೩೦ರ ಮುಹೂರ್ತಕ್ಕೆ ಭಕ್ತರು ಬೆಳಗ್ಗೆ ಜೋಡುರಥಗಳನ್ನು ಅಲಂಕರಿಸಿದ್ದರು. ಇನ್ನು ಕೆಲವು ಭಕ್ತರು ಬೃಹತ್ ರುದ್ರಾಕ್ಷಿ ಮಾಲೆ, ಬೃಹತ್ ಹೂವಿನ ಹಾರವನ್ನು ಹಾಕಿ ಮತ್ತಷ್ಟು ಮೆರಗು ನೀಡಿದ್ದರು.

ಶರಣಬಸವೇಶ್ವರ ಬೆಳ್ಳಿ ಮೂರ್ತಿ ಹಾಗೂ ಗಣೇಶನ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಕಳಸಾರೋಹಣ ಮಾಡಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಸ್ತೆಯ ಎರಡು ಬದಿಗಳಲ್ಲಿ ನೆರೆದಿದ್ದ ಅಪಾರ ಜನಸ್ತೋಮ ಶ್ರೀ ಶರಣ ಬಸವೇಶ್ವರರಿಗೆ ಜಯವಾಗಲಿ ಎಂದು ಜೈಕಾರ ಹಾಕಿದರು. ಜೈಕಾರದ ನಡುವೆ ಎರಡು ರಥಗಳು ನಿಧಾನವಾಗಿ ಸಾಗಿದವು. ವಿವಿಧ ಕಲಾ ತಂಡಗಳು ಸೇರಿದಂತೆ ಸ್ಥಳೀಯ ಡೊಳ್ಳು ಕಲಾವಿದರ ಹಲವು ವಾದ್ಯಗಳ ನಡುವೆ ರಥಗಳು ಸಾಗಿದವು.

ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ರಥಬೀದಿಯ ಮನೆ ಮುಂದೆ ಮತ್ತು ಮೇಲ್ಬಾಗದಲ್ಲಿ ಜಮಾಯಿಸಿದ್ದರು. ರಥಕ್ಕೆ ಜಯಘೋಷ ಹಾಕುತ್ತ ಹೂವು, ಹಣ್ಣು, ಉತ್ತತ್ತಿ ಎಸೆದು ಭಕ್ತಿಯನ್ನು ಅರ್ಪಿಸಿದರು.

ನೂರಾರು ಯುವಕರು ಎರಡು ರಥಗಳನ್ನು ಸಮತಟ್ಟವಾಗಿ ಎಳೆದರು. ಎರಡು ರಥಗಳು ಸುಂಕಲಮ್ಮ ಬೈಲ್ ಬಳಿಯ ಬಸವಣ್ಣ ದೇವಾಲಯದ ಪಾದಗಟ್ಟೆ ವರೆಗೆ ಸಾಗಿ, ಪುನಃ ಸ್ವಸ್ಥಳಕ್ಕೆ ಆಗಮಿಸಿದವು. ರಥೋತ್ಸವ ಸಾಂಗವಾಗಿ ಸಾಗಲು ಪುರಾಣ ಸಮಿತಿ, ಪುರಸಭೆ ಮತ್ತು ಕಾರಟಗಿ ಪೊಲೀಸ್ ಸಿಬ್ಬಂದಿ ಸೂಕ್ತ ವ್ಯವಸ್ಥೆ ಮಾಡಿದ್ದರು.

ಈ ಬಾರಿ ಸುವರ್ಣ ಮಹೋತ್ಸವದ ಪುರಾಣ ಪ್ರವಚನ ಶ್ರಾವಣ ಮಾಸದ ತಿಂಗಳ ವರೆಗೆ ನಡೆಯಿತು. ಇತರೆಲ್ಲ ಧಾರ್ಮಿಕ ಕಾರ್ಯಕ್ರಮಗಳು ಜೋಡು ರಥೋತ್ಸವದೊಂದಿಗೆ ಸಂಪನ್ನಗೊಂಡಿತು.

ಸಂಸದರ ಭೇಟಿ: ಸಂಸದ ಕೆ. ರಾಜಶೇಖರ ಹಿಟ್ನಾಳ ಶುಕ್ರವಾರ ದೇವಸ್ಥಾನಕ್ಕೆ ಭೇಟಿ ನೀಡಿ, ಶ್ರೀ ಶರಣ ಬಸವೇಶ್ವರ ದರ್ಶನ ಪಡೆದರು. ದೇವಸ್ಥಾನ ಸಮಿತಿಯಿಂದ ಸಂಸದರನ್ನು ಗೌರವಿಸಿ, ಪ್ರಸಾದ ನೀಡಲಾಯಿತು. ಪುರಸಭೆ ಅಧ್ಯಕ್ಷೆ ರೇಖಾ ಆನೆಹೊಸೂರು ಮತ್ತು ಕಾಂಗ್ರೆಸ್‌ನ ವಿವಿಧ ಘಟಕಗಳ ಮುಖಂಡರು, ಪದಾಧಿಕಾರಿಗಳು ಈ ವೇಳೆ ಇದ್ದರು.

ಬೆಳಗ್ಗೆ ದೇವಸ್ಥಾನದಲ್ಲಿ ಶರಣಬಸವೇಶ್ವರ ಮೂರ್ತಿ, ವೀರಭದ್ರೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅರ್ಚನೆ, ಅಭಿಷೇಕ, ವಿಶೇಷ ಪೂಜೆ, ಅಲಂಕಾರ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರಥೋತ್ಸವದಲ್ಲಿ ತಾಲೂಕಿ ವಿವಿಧ ಗ್ರಾಮಗಳ ಭಕ್ತರು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರು.