ಫೆಬ್ರವರಿ 21ಕ್ಕೆ ರಾಜ್ಯಾದ್ಯಂತ ಎಲ್ಲೋ ಜೋಗಪ್ಪ ನಿನ್ನರಮನೆ: ನಿರ್ದೇಶಕ ಹಯವದನ

| Published : Feb 15 2025, 12:31 AM IST

ಫೆಬ್ರವರಿ 21ಕ್ಕೆ ರಾಜ್ಯಾದ್ಯಂತ ಎಲ್ಲೋ ಜೋಗಪ್ಪ ನಿನ್ನರಮನೆ: ನಿರ್ದೇಶಕ ಹಯವದನ
Share this Article
  • FB
  • TW
  • Linkdin
  • Email

ಸಾರಾಂಶ

ಸೋಷಿಯಲ್ ಮೀಡಿಯಾದ ಅತಿಯಾದ ಪ್ರಭಾವಕ್ಕೊಳಗಾಗಿ ತನ್ನ ತಂದೆಯೊಂದಿಗೆ ಜಗಳ ಮಾಡಿಕೊಂಡು ಮನೆ ಬಿಟ್ಟು ಹೊರಡುವ ಯುವಕ ದೇಶ ಅಲೆಯುತ್ತಾ ಸಾಗಿದಂತೆ ಪ್ರಯಾಣ ಮತ್ತು ಭಾವನೆಗಳ ಸುತ್ತಾ ಸಾಗುವ ಕೌಟುಂಬಿಕ ಕಥಾ ಹಂದರದ ಎಲ್ಲೋ ಜೋಗಪ್ಪ ನಿನ್ನರಮನೆ ಚಲನಚಿತ್ರವು ಫೆ.21ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ ಎಂದು ಚಿತ್ರದ ನಿರ್ದೇಶಕ ಹಯವದನ ತಿಳಿಸಿದರು.

ಅಂಜನ್ ನಾಯಕ, ನಾಯಕಿಯಾಗಿ ವೆನ್ಯಾ ರೈ । ಪ್ರಮೋದ್‌ ಮರವಂತೆ ಸಾಹಿತ್ಯ

ಕನ್ನಡಪ್ರಭ ವಾರ್ತೆ ದಾವಣಗೆರೆ

ಸೋಷಿಯಲ್ ಮೀಡಿಯಾದ ಅತಿಯಾದ ಪ್ರಭಾವಕ್ಕೊಳಗಾಗಿ ತನ್ನ ತಂದೆಯೊಂದಿಗೆ ಜಗಳ ಮಾಡಿಕೊಂಡು ಮನೆ ಬಿಟ್ಟು ಹೊರಡುವ ಯುವಕ ದೇಶ ಅಲೆಯುತ್ತಾ ಸಾಗಿದಂತೆ ಪ್ರಯಾಣ ಮತ್ತು ಭಾವನೆಗಳ ಸುತ್ತಾ ಸಾಗುವ ಕೌಟುಂಬಿಕ ಕಥಾ ಹಂದರದ ಎಲ್ಲೋ ಜೋಗಪ್ಪ ನಿನ್ನರಮನೆ ಚಲನಚಿತ್ರವು ಫೆ.21ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ ಎಂದು ಚಿತ್ರದ ನಿರ್ದೇಶಕ ಹಯವದನ ತಿಳಿಸಿದರು.

ನಗರದಲ್ಲಿ ಎಲ್ಲೋ ಜೋಗಪ್ಪ ನಿನ್ನರಮನೆ ಸಿನಿಮಾ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಾರಾಷ್ಟ್ರದಲ್ಲಿ ಚಿತ್ರದ ನಾಯಕ ಆದಿ ಅಲ್ಲಿನ ಮರಾಠಿ ಭಾಷಿಗಳಾದ ಚಿತ್ರದ ನಾಯಕಿ ಸಿಗುತ್ತಾಳೆ. ಆದಿ ಹಾಗೂ ಶೀತಲ್ ಇಬ್ಬರೂ ಒಟ್ಟಿಗೆ ಪ್ರಯಾಣ ಮುಂದುವರಿಸುತ್ತಾರೆ. ಹೀಗೆ ಪಯಣಿಸುವಾಗ ಹಲವಾರು ಸಂದರ್ಭ, ಹಲವಾರು ಜನರನ್ನು ಎದುರಿಸುತ್ತಾರೆ. ಶೀತಲ್ ಮಹಾರಾಷ್ಟ್ರದ ಹುಡುಗಿಯಾಗಿದ್ದರೂ, ದಾವಣಗೆರೆ ಆಕೆಯ ತಾಯಿಯ ತವರು ಮನೆಯಾಗಿರುತ್ತದೆ. ನಮ್ಮ ಚಿತ್ರದಲ್ಲಿ ದಾವಣಗೆರೆ ಬೆಣ್ಣೆದೋಸೆ ಘಮಲೂ ಇದೆ ಎಂದು ತಿಳಿಸಿದರು.

ಹೀಗೆ ತಂದೆ ಜೊತೆಗೆ ಜಗಳ ಮಾಡಿ ಹೊರಟ ಚಿತ್ರದ ನಾಯಕ ಆದಿ ಚಿತ್ರದುರ್ಗ, ಹುಬ್ಬಳ್ಳಿ, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಪಂಡರಾಪುರ, ಆಗ್ರಾ, ದೆಹಲಿ, ಹಿಮಾಚಲ ಪ್ರದೇಶದಮನಾಲಿ, ಛತ್ತೀಸಘಡ್‌, ಹಿಮಾಲಯದವರೆಗೆ ಹತ್ತಾರು ರಾಜ್ಯಗಳಲ್ಲಿ ಸಾಗುವಾಗ ಹಲವು ವ್ಯಕ್ತಿಗಳನ್ನು ಹಾಗೂ ಸಂದರ್ಭಗಳನ್ನು ಎದೆರಿಸುತ್ತಾನೆ. ಏನನ್ನೋ ಹುಡುಕಿಕೊಂಡು ಬೆಂಗಳೂರಿನಿಂದ ಹೊರಟ ಕಥಾ ನಾಯಕ ಅಂದುಕೊಂಡಿದ್ದು ಕಡೆಗೆ ಸಿಗುತ್ತದೆಯೇ ಎಂಬುದೇ ಕಥೆಯ ಸಾರಾಂಶ ಎಂದು ಹೇಳಿದರು.

ಪವನ್‌ ಸೀಮಿಕೇರಿ ಮತ್ತು ಸಿಂಧು ಹಯವದನ ಚಿತ್ರ ನಿರ್ಮಾಣ ಮಾಡಿದ್ದು, ನಟರಾಜ ಮದ್ದಾಲ ಛಾಯಾಗ್ರಹಣ‍ವಿದೆ. ಸಿ.ರವಿಚಂದ್ರನ್‌ ಸಂಕಲನ ಮಾಡಿದ್ದು, ಶಿವೋಮ್‌ ಸಂಗೀತ ನೀಡಿದ್ದಾರೆ. ಪ್ರಮೋದ್‌ ಮರವಂತೆ ಮತ್ತು ರವೀಂದ್ರ ಮುದ್ದಿ ಸಾಹಿತ್ಯವಿದೆ. ಹೊಸ ಮನೆ ಮೂರ್ತಿ ಕಲಾ ನಿರ್ದೇಶನವಿದೆ. ನಾಯಕ ನಟನಾಗಿ ಅಂಜನ್ ನಾಗೇಂದ್ರ, ನಾಯಕಿಯಾಗಿ ಕರಾವಳಿ ಜಿಲ್ಲೆಯ ವೆನ್ಯಾ ರೈ ಅಭಿನಯಿಸಿದ್ದಾರೆ. ಸಂದನಾ ದಾಸ್‌, ಶರತ್ ಲೋಹಿತಾಶ್ವ, ದಿನೇಶ ಮಂಗಳೂರು, ಬಿರಾದಾರ್‌, ದಾನಪ್ಪ ಉಮೇಶ ಕಿನ್ನಾಳ, ವಿಠ್ಠಲ ಪರೀಟ್‌, ಸ್ವಾತಿ, ಇಳಾ ವಿಟ್ಲಾ ಇತರರು ಪಾತ್ರ ವರ್ಗದಲ್ಲಿದ್ದಾರೆ ಎಂದು ಅವರು ಹೇಳಿದರು.

ಕಿರುತೆರೆಯ ಅಗ್ನಿಸಾಕ್ಷಿ, ನಾಗಿಣಿ, ಕಮಲಿ ಧಾರಾವಾಹಿ ನಿರ್ದೇಶನ ಮಾಡಿದ್ದೆ. ಇಡೀ ಚಿತ್ರ ತಂಡವು ಕಳೆದ 2 ವರ್ಷಗಳಿಂದ ಈ ಚಿತ್ರಕ್ಕಾಗಿ ಶ್ರಮಿಸಿದೆ. ಸುಮಾರು 2.5 ಕೋಟಿ ರು. ವೆಚ್ಚದಲ್ಲಿ ಸಿನಿಮಾ ಮಾಡಿದ್ದೇವೆ. ಮೊದಲ ಸಲ ಸಿನಿಮಾ ನಿರ್ದೇಶಿಸಿದ್ದೇನೆ. ಕಿರುತೆರೆ ನಿರ್ದೇಶಕರಿಗೆ ಸಿನಿಮಾ ನಿರ್ದೇಶಕನಾಗುವಾಸೆ ಸಹಜ. ಈ ಚಿತ್ರವನ್ನು ಪ್ರೇಕ್ಷಕರು ಚಿತ್ರ ಮಂದಿರದಲ್ಲಿ ವೀಕ್ಷಿಸಿ, ಆಶೀರ್ವದಿಸುವಂತೆ ನಿರ್ದೇಶಕ ಹಯವದನ ಮನವಿ ಮಾಡಿದರು.

ಚಿತ್ರದ ನಾಯಕ ನಟ ಅಂಜನ್ ನಾಗೇಂದ್ರ, ನಾಯಕಿ ವೆನ್ಯಾರೈ, ದಾನಪ್ಪ ಇತರರು ಇದ್ದರು.