ಜೋಯಿಡಾ ತಹಸೀಲ್ದಾರರಿಗೆ ಸರ್ಕಾರಿ ವಾಹನ ಇಲ್ಲ!

| Published : Feb 09 2025, 01:17 AM IST

ಸಾರಾಂಶ

ಇಲ್ಲಿನ ತಹಸೀಲ್ದಾರರಿಗೆ ಕಳೆದ ೨ ವರ್ಷಗಳಿಂದ ಸರ್ಕಾರದ ವತಿಯಿಂದ ನೀಡುವ ಜೀಪ್ ವ್ಯವಸ್ಥೆ ಇಲ್ಲ. ಈ ಹಿಂದೆ ಬಳಕೆಯಲ್ಲಿದ್ದ ಜೀಪ್ ಸಂಪೂರ್ಣವಾಗಿ ಹಾಳಾಗಿದ್ದು, ಬಳಕೆಗೆ ಬರುತ್ತಿಲ್ಲ.

ಅನಂತ ದೇಸಾಯಿ

ಜೋಯಿಡಾ: ರಾಜ್ಯದ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಒಂದೆಂದು ಹಣೆಪಟ್ಟಿ ಕಟ್ಟಿಕೊಂಡಿರುವ ಜೋಯಿಡಾ ತಾಲೂಕಿನ ತಹಸೀಲ್ದಾರರಿಗೆ ಓಡಾಡಲು ಸರ್ಕಾರಿ ವಾಹನವೇ ಇಲ್ಲ! ಜಿಲ್ಲಾ ಹಾಗೂ ತಾಲೂಕು ಮಟ್ಟದ ಬಹುತೇಕ ಇಲಾಖೆಯ ಅಧಿಕಾರಿಗಳಿಗೆ ಸರ್ಕಾರಿ ವಾಹನವನ್ನು ನೀಡಲಾಗಿದೆ. ಆದರೆ ಪ್ರಮುಖ ಹುದ್ದೆಯಾಗಿರುವ ಇಲ್ಲಿನ ತಹಸೀಲ್ದಾರರಿಗೆ ಸರ್ಕಾರಿ ವಾಹನ ಇಲ್ಲ. ಅನಿವಾರ್ಯವಾಗಿ ಅವರು ಬಾಡಿಗೆ ವಾಹನದಲ್ಲಿ ತಾಲೂಕಿನ ವಿವಿಧ ಭಾಗಗಳಿಗೆ ತೆರಳುತ್ತಿದ್ದಾರೆ. ನೂರಾರು ಕಿಮೀ ದೂರದಲ್ಲಿರುವ ಜಿಲ್ಲಾ ಕೇಂದ್ರ ಕಾರವಾರಕ್ಕೆ ತೆರಳಬೇಕೆಂದರೂ ಬಾಡಿಗೆ ವಾಹನವನ್ನೇ ಆಶ್ರಯಿಸುತ್ತಾರೆ. ಇಲ್ಲಿನ ತಹಸೀಲ್ದಾರರಿಗೆ ಕಳೆದ ೨ ವರ್ಷಗಳಿಂದ ಸರ್ಕಾರದ ವತಿಯಿಂದ ನೀಡುವ ಜೀಪ್ ವ್ಯವಸ್ಥೆ ಇಲ್ಲ. ಈ ಹಿಂದೆ ಬಳಕೆಯಲ್ಲಿದ್ದ ಜೀಪ್ ಸಂಪೂರ್ಣವಾಗಿ ಹಾಳಾಗಿದ್ದು, ಬಳಕೆಗೆ ಬರುತ್ತಿಲ್ಲ. ನೂತನ ತಹಸೀಲ್ದಾರರ ಕಚೇರಿಯನ್ನು ಇತ್ತೀಚೆಗೆ ಉದ್ಘಾಟನೆಯಾಗಿದೆ. ಆದರೆ ಜಿಲ್ಲೆಯಲ್ಲಿಯೇ ದೊಡ್ಡ ತಾಲೂಕೆಂಬ ಹಿರಿಮೆ ಪಾತ್ರವಾಗಿರುವ ಜೋಯಿಡಾದ ತಹಸೀಲ್ದಾರರಿಗೆ ಸರ್ಕಾರಿ ವಾಹನ ಇಲ್ಲದಿರುವುದು ಅಚ್ಚರಿಯ ಸಂಗತಿ.

ವಾಹನ ಸಿಕ್ಕಿಲ್ಲ: ಸರ್ಕಾರಿ ವಾಹನ ಬೇಕೆಂದು ಹಲವು ಬಾರಿ ಜಿಲ್ಲಾಧಿಕಾರಿಗೆ ಪತ್ರ ಮುಖೇನ ತಿಳಿಸಲಾಗಿದೆ. ಆದರೂ ವಾಹನ ಸಿಕ್ಕಿಲ್ಲ. ಹಾಗಾಗಿ ಅನಿವಾರ್ಯವಾಗಿ ಬಾಡಿಗೆ ವಾಹನದಲ್ಲಿಯೇ ಸಂಚರಿಸುತ್ತಿದ್ದೇವೆ ಎಂದು ತಹಸೀಲ್ದಾರ್‌ ಮಂಜುನಾಥ ಮುನ್ನೊಳಿ ತಿಳಿಸಿದರು.

ಲಾರಿ ಮಾಲೀಕರ ಸಂಘದ ಅಧ್ಯಕ್ಷರಾಗಿ ಮಾಧವ ನಾಯಕ ಆಯ್ಕೆ

ಅಂಕೋಲಾ: ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷರಾಗಿ ಮಾಧವ ನಾಯಕ ಅವರನ್ನು ಸರ್ವಾನುಮತದಿಂದ ಆಯ್ಕೆಗೊಳಿಸಲಾಯಿತು.ಅವರ್ಸಾ ಲಕ್ಷ್ಮಿನಾರಾಯಣ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಸಂಘದ ಗೌರವಾಧ್ಯಕ್ಷರಾಗಿ ವಿಜಯನಗರ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಸ್. ಮಣಿ, ಹುಬ್ಬಳ್ಳಿ- ಧಾರವಾಡ ಜಿಲ್ಲೆಯ ಅಧ್ಯಕ್ಷ ಗಿರೀಶ್ ಮಲೆನಾಡು ಅವರನ್ನು ನೇಮಕಗೊಳಿಸಲಾಯಿತು.ಉಪಾಧ್ಯಕ್ಷರಾಗಿ ತುಳಸಿದಾಸ್ ಕಾಮತ್, ಮಂಜುನಾಥ್ ಕೆ. ನಾಯ್ಕ, ಸುಜಯ್ ಮರಾಠೆ,ಯಲ್ಲಾಪುರ, ಕಾರ್ಯದರ್ಶಿಯಾಗಿ ಆನಂದ್ ನಾಯ್ಕ, ಜಂಟಿ ಕಾರ್ಯದರ್ಶಿಯಾಗಿ ಅಮಿತ್ ನಾಯ್ಕ, ಸಂಘಟನಾ ಕಾರ್ಯದರ್ಶಿಯಾಗಿ ಕಿರಣ್ ಆನಂತ ನಾಯ್ಕ, ಖಜಾಂಚಿಯಾಗಿ ಸುಮಿತ್ ಅಸ್ನೋಟಿಕರ್ ಅವರನ್ನು ಆಯ್ಕೆ ಮಾಡಲಾಯಿತು.