ಸಮರ್ಪಕ ವಿದ್ಯುತ್‌ ಇಲ್ಲದೇ ನಲುಗಿದ ಜೋಯಿಡಾ

| Published : Jul 30 2024, 12:42 AM IST

ಸಾರಾಂಶ

ಮಳೆಗಾಲ ಆರಂಭವಾಯಿತೆಂದರೆ ಜೋಯಿಡಾ ತಾಲೂಕಿನಲ್ಲಿ ವಿದ್ಯುತ್‌ ಸಮಸ್ಯೆ ಆರಂಭವಾಗುತ್ತದೆ. ಸರ್ಕಾರ ಕಚೇರಿಗಳಲ್ಲಿ ಯಾವ ಕೆಲಸವೂ ಆಗುವುದೇ ಇಲ್ಲ. ಸಾಯಂಕಾಲ 4 ಗಂಟೆ ಆಗುತ್ತಿದ್ದಂತೆ ಕಚೇರಿಗಳೆಲ್ಲ ಭಣ ಭಣ ಎಂಬಂತಾಗುತ್ತದೆ.

ಜೋಯಿಡಾ: ತಾಲೂಕಿನಲ್ಲಿಯೇ ವಿದ್ಯುತ್ ಉತ್ಪಾದನೆ ಆದರೂ ಜನರಿಗೆ ವಿದ್ಯುತ್ ಪೂರೈಕೆ ಸರಿಯಾಗಿಲ್ಲ. ಪ್ರತಿವರ್ಷ ತಾಲೂಕಿನಲ್ಲಿ ಎಲ್ಲ ಹಳ್ಳಿಗಳಿಗೂ ವಿದ್ಯುತ್ ಕಂಬ, ತಂತಿ ಪದೇ ಪದೇ ಮಳೆಗಾಲದಲ್ಲಿ ಹಾಕುವ ಖರ್ಚು, ತಾಲೂಕಿಗೆ ಹೊಸದಾಗಿ ಲೈನ್ ಕೊಟ್ಟ ಖರ್ಚಿನಷ್ಟೇ ಆಗುತ್ತದೆ. ಆದರೂ ಇಲ್ಲಿನ ಹಳ್ಳಿಗಳಿಗೆ ಕೇಬಲ್ ಮೂಲಕ ವಿದ್ಯುತ್ ಕೊಡುತ್ತಿಲ್ಲ. ಒಮ್ಮೆ ಕೇಬಲ್ ಮೂಲಕ ವಿದ್ಯುತ್ ಪೂರೈಸಿದರೆ ಕೆಲಸವೇ ಇರುವುದಿಲ್ಲವೆಂದು ಇಲಾಖೆ ತಿಳಿದಿದೆಯೇನೋ, ಹಾಗಾಗಿ ಶಾಶ್ವತ ವ್ಯವಸ್ಥೆ ಮಾಡುತ್ತಿಲ್ಲ. ಇದರಿಂದಾಗಿ ತಾಲೂಕು ಕೇಂದ್ರದ ಎಲ್ಲ ಇಲಾಖೆಗಳ ಕಚೇರಿಗಳಲ್ಲಿ ಮಳೆಗಾಲವೆಲ್ಲ ಕತ್ತಲೆಯೇ ತುಂಬಿ, ಯಾವ ಕೆಲಸವೂ ನಡೆಯುತ್ತಿಲ್ಲ. ಈ ಸಮಸ್ಯೆ ಪರಿಹರಿಸಲು ಯಾರಿಗೂ ಆಸಕ್ತಿ ಕೂಡ ಇಲ್ಲ.ಸಾಯಂಕಾಲ 4 ಗಂಟೆ ಆಗುತ್ತಿದ್ದಂತೆ ಕಚೇರಿಗಳೆಲ್ಲ ಭಣ ಭಣ ಎಂಬಂತಾಗಿ, ಹಳಿಯಾಳ, ದಾಂಡೇಲಿ, ಧಾರವಾಡ, ಕಾರವಾರ ಎಂದು ಎಲ್ಲರೂ ಊರಿಗೆ ಹೋಗುತ್ತಾರೆ. ಜೋಯಿಡಾದಲ್ಲಿ ಬಾಡಿಗೆ ಮನೆಯಿಲ್ಲ. ವಿದ್ಯುತ್ ಇಲ್ಲ, ನಮ್ಮ ಮಕ್ಕಳ ಶಿಕ್ಷಣಕ್ಕೆ ವ್ಯವಸ್ಥೆ ಇಲ್ಲ ಎಂಬ ಕೊರಗು ಈ ಅಧಿಕಾರಿಗಳಿಗೆ. ಹೀಗಾಗಿ ಇಲ್ಲಿ ಕೋರ್ಟ್ ಇಲ್ಲ, ಸಬ್ ರಿಜಿಸ್ಟ್ರಾರ್ ಕಚೇರಿ ಇಲ್ಲ, ಬಸ್ ಘಟಕವಿಲ್ಲ, ಉದ್ಯೋಗ ಕೊಡುವ ಕೈಗಾರಿಕೆ ಇಲ್ಲ.

ನಮ್ಮ ಕಷ್ಟಕ್ಕೆ ಸ್ಪಂದಿಸುವವರೆ ಜನಪ್ರತಿನಿಧಿಗಳಾಗಬೇಕು. ಇಲ್ಲವಾದರೆ ತಾಲೂಕಿನ ಜನರು ಇನ್ನೂ ಕಷ್ಟ ಪಡುವ ದಿನ ದೂರವಿಲ್ಲ. ವಿದ್ಯುತ್ ಇಲ್ಲೇ ಉತ್ಪಾದನೆ ಆದರೂ ಈ ತಾಲೂಕಿನ ಜನತೆಗೆ ಕೇಬಲ್ ಮೂಲಕ ನೀಡಬೇಕೆಂಬ ಕನಿಷ್ಠ ಕಲ್ಪನೆಯೂ ಇಲ್ಲಿನ ವಿವಿಧ ಇಲಾಖೆ ಹಾಗೂ ಅರಣ್ಯ ಇಲಾಖೆ ಅವರಿಗಿಲ್ಲ. ಯಾವ ಸಮಸ್ಯೆಗೂ ಸ್ಪಂದಿಸುವವರೇ ಇಲ್ಲ.

ತಾಲೂಕಿನ ಜನರ ಕಷ್ಟ ಸುಖ ವಿಚಾರಿಸಲು ಯಾವ ಅಧಿಕಾರಿಗಳಿಗೂ ಆಸಕ್ತಿ ಇಲ್ಲ. ಮಾಧ್ಯಮಗಳಲ್ಲಿ ದೂರುಗಳು ಬಂದರೆ ಸಂಬಂಧಪಟ್ಟ ಇಲಾಖೆಯನ್ನು ವಿಚಾರಿಸುವವರೆ ಇಲ್ಲ. ಹಿಂದೆ ವಿಲಾಸ್ ನಾಯ್ಕ ಎಲ್ಲೇ ಯಾರಿಗೆ ಸಮಸ್ಯೆಯಾದರೂ ಕೂಡಲೇ ಸ್ಪಂದಿಸುತ್ತಿದ್ದರು. ಈಗಿನ ಜನಪ್ರತಿನಿಧಿಗಳು ತಮ್ಮ ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಜನತೆಗೆ ಕಷ್ಟಗಳು ಬಂದರೂ ತಮಗೆ ಸಂಬಂಧಪಟ್ಟಿದ್ದಲ್ಲ ಎಂಬ ವರ್ತನೆ ತೋರುತ್ತಿದ್ದಾರೆ ಎಂದು ಗ್ರಾಮಸ್ಥ ಗಜೇಂದ್ರ ಎನ್.ಆರ್. ಹೇಳುತ್ತಾರೆ.