ಮಹಿಳೆಯರು ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಬೇಕು. ಆ ಮೂಲಕ ಸುಸ್ಥಿರ ಜೀವನಶೈಲಿ ಹೊಂದಬೇಕು. ಭೂಮಿಯನ್ನು ಸಂರಕ್ಷಿಸಲು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಹೆಚ್ಚು ಮರ ಗಿಡಗಳನ್ನು ಬೆಳೆಸಬೇಕು. ವಿದ್ಯುತ್ ಮತ್ತು ನೀರನ್ನು ಮಿತವಾಗಿ ಬಳಸುವ ಕಾಯಕವನ್ನು ಮಾಡಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಜಾಗತಿಕ ತಾಪಮಾನ ನಿಯಂತ್ರಿಸಲು ಪರಿಸರ ಸಂರಕ್ಷಣೆಗೆ ಸಾಮೂಹಿಕವಾಗಿ ಜನತೆ ಕೈ ಜೋಡಿಸಬೇಕು ಎಂದು ವಲಯ ಅರಣ್ಯಾಧಿಕಾರಿ ಶೈಲಜಾ ತಿಳಿಸಿದರು.ನಗರದ ಮಿಮ್ಸ್‌ನ ಮಮತೆಯ ಮಡಿಲು ಆವರಣದಲ್ಲಿ ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯಿಂದ ವಿಶ್ವ ಭೂದಿನದ ನಿಮಿತ್ತ ನಡೆದ ಸಸಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಜೀವ ವೈವಿಧ್ಯತೆಯ ಉಳಿವಿಗೆ ಪ್ರಕೃತಿಯಲ್ಲಿ ಸಾಕಷ್ಟು ಹಸಿರು ಹೊದಿಸುವ ಕಾಯಕವನ್ನು ಜನರು ಮಾಡಬೇಕಾಗಿದೆ. ಆ ಮೂಲಕ ಜಾಗತಿಕ ತಾಪಮಾನ ನಿಯಂತ್ರಿಸಲು ಸಾಧ್ಯ ಎಂದರು.
ಮಹಿಳೆಯರು ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಬೇಕು. ಆ ಮೂಲಕ ಸುಸ್ಥಿರ ಜೀವನಶೈಲಿ ಹೊಂದಬೇಕು. ಭೂಮಿಯನ್ನು ಸಂರಕ್ಷಿಸಲು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಹೆಚ್ಚು ಮರ ಗಿಡಗಳನ್ನು ಬೆಳೆಸಬೇಕು. ವಿದ್ಯುತ್ ಮತ್ತು ನೀರನ್ನು ಮಿತವಾಗಿ ಬಳಸುವ ಕಾಯಕವನ್ನು ಮಾಡಬೇಕು. ಸರ್ಕಾರಿ ಅಥವಾ ಬೇರೆ ಜಾಗಗಳಲ್ಲಿ ಸಸಿ ನೆಡುವ ಹವ್ಯಾಸ ಮಹಿಳೆಯರು ಬೆಳೆಸಿಕೊಳ್ಳಬೇಕು ಎಂದರು.ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ವಿಶ್ವ ಭೂದಿನದ ಪ್ರತಿಜ್ಞಾವಿಧಿ ಬೋಧಿಸಿ 2026ರ ಘೋಷವಾಕ್ಯ ನಮ್ಮ ಶಕ್ತಿ ನಮ್ಮ ಆಗ್ರಹ ಎಂಬುದಾಗಿದೆ. ನವೀಕರಿಸಬಹುದಾದ ಇಂಧನ ಉತ್ಪಾದನೆ ಹೆಚ್ಚಳ ಮಾಡಿದರೆ ಪ್ರಕೃತಿಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬಹುದು. ಮಹಿಳೆಯರು ಮತ್ತು ಮಕ್ಕಳ ಮುಖಾಂತರ ಪರಿಸರ ಸಂರಕ್ಷಣಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ.ಹೂಗಾರ್, ಕೆಡಿಪಿ ಸದಸ್ಯ ಸಿ.ಎಂ.ದ್ಯಾವಪ್ಪ, ಸಾಮಾಜಿಕ ಕಾರ್ಯಕರ್ತ ಕೆ.ಪಿ.ಗುಣಶೇಖರ್, ಉಪ ವಲಯ ಅರಣ್ಯಾಧಿಕಾರಿ ಕುಮಾರ್ ಉಪಸ್ಥಿತರಿದ್ದರು. ಇದೇ ವೇಳೆ ಸಮುದಾಯ ಆರೋಗ್ಯ ವಿಭಾಗದಿಂದ ನಿರ್ಮಿಸುತ್ತಿರುವ ಔಷಧ ವನಕ್ಕೆ ಜಿಲ್ಲಾ ರಕ್ತನಿಧಿ ಕೇಂದ್ರಕ್ಕೆ ಹಾಗೂ ಈದಿನ ಜನ್ಮ ತಾಳಿದ ಮಕ್ಕಳ ಪೋಷಕರುಗಳಿಗೆ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.