ಕಸ ಮುಕ್ತ, ಸ್ವಚ್ಛ, ಸುಂದರ ನಗರಕ್ಕಾಗಿ ಕೈ ಜೋಡಿಸಿ: ಅಮಿತ್‌ ಸಿಂಹ

| Published : Jan 07 2024, 01:30 AM IST

ಕಸ ಮುಕ್ತ, ಸ್ವಚ್ಛ, ಸುಂದರ ನಗರಕ್ಕಾಗಿ ಕೈ ಜೋಡಿಸಿ: ಅಮಿತ್‌ ಸಿಂಹ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರು ನಗರಸಭೆ ಕಚೇರಿ ಸಭಾಂಗಣದಲ್ಲಿ ಕಸಮುಕ್ತ ನಗರದ ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಯಿತು. ಈ ವೇಳೆ ನಗರದಲ್ಲಿ ಸ್ವಚ್ಛತೆ ಕಾಪಾಡುವಂತೆ ಜಾಗೃತಿ ಮೂಡಿಸಲು ದೆಹಲಿ ಫೀಡ್ ಬ್ಯಾಕ್ ಫೌಂಡೇಷನ್ ನ ಮುಖ್ಯಸ್ಥ ಅಮಿತ್ ಸಿಂಹ ಅಧಿಕಾರಿಗಳಿಗೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಕಸ ಮುಕ್ತ ಹಾಗೂ ಸ್ವಚ್ಚ ಮತ್ತು ಸುಂದರ ನಗರಕ್ಕಾಗಿ ಕೈ ಜೋಡಿಸಬೇಕು ಎಂದು ದೆಹಲಿ ಫೀಡ್ ಬ್ಯಾಕ್ ಫೌಂಡೇಷನ್ ನ ಮುಖ್ಯಸ್ಥ ಅಮಿತ್ ಸಿಂಹ ಅವರು ಹೇಳಿದರು.

ಸ್ಥಳೀಯ ನಗರಸಭೆ ಕಚೇರಿ ಸಭಾಂಗಣದಲ್ಲಿ ಶನಿವಾರ ನಗರಸಭೆ ಹಾಗೂ ನಗರಾಭಿವೃದ್ಧಿ ಕೋಶ ಸಹಯೋಗದಲ್ಲಿ ನಗರಸಭೆ ಸದಸ್ಯರು ಹಾಗೂ ಸಾರ್ವಜನಿಕರು, ನಗರಸಭೆ ಸಿಬ್ಬಂದಿಯೊಂದಿಗೆ ನಡೆದ ರೀಬೂಟ್ ರಾಯಚೂರು ಕಸಮುಕ್ತ ನಗರದ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಚ್ಛ ಮತ್ತು ಸುಂದರ ನಗರವನ್ನಾಗಿ ಮಾಡುವುದು ಸಾರ್ವಜನಿಕರ ಕೈಯಲ್ಲಿದೆ. ಈಗಾಗಲೆ ಹೇಳಿದಂತೆ ಜನರು ತಮ್ಮ ಮನೆಯಲ್ಲಿಯೇ ಹಸಿ ಕಸ, ಒಣ ಕಸ, ಎಲೆಕ್ಟ್ರಾನಿಕ್ ವಸ್ತುಗಳು, ದಿನಬಳಕೆ ವಸ್ತುಗಳು, ಒಂದು ಸಾರಿ ಉಪಯೋಗಿಸುವ ವಸ್ತುಗಳು, ಪ್ಲಾಸ್ಟಿಕ್, ಗಾಜು ಸೇರಿದಂತೆ ವಿವಿಧ ವಸ್ತುಗಳನ್ನು ನಾವು ತಿಳಿಸಿದ ಜಾಗೃತಿಯಂತೆ ಬೇರ್ಪಡಿಸಿ ನಗರಸಭೆ ವಾಹನಕ್ಕೆ ನೀಡಿದಾಗ ನಗರ ಸಂಪೂರ್ಣ ಸ್ವಚ್ಛ ಮತ್ತು ಸುಂದರವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತ್ಯಾಜ್ಯ ವಸ್ತುಗಳನ್ನು ಬೇರ್ಪಡಿಸಿದಾಗ ಮರು ಬಳಕೆ ವಸ್ತುಗಳು ಮತ್ತೆ ತಯಾರಿಸಬಹುದು. ಹಸಿ ಕಸವನ್ನು ಗೊಬ್ಬರವನ್ನಾಗಿ ಮಾಡಬಹುದು. ಮರು ತಯಾರಿಸದ ವಸ್ತುಗಳನ್ನು ಬೇರೆಡೆಗೆ ವಿಲೇವಾರಿ ಮಾಡಬಹುದು. ವಸ್ತುಗಳನ್ನು ಬೇರ್ಪಡಿಸಿ ಮರು ತಯಾರಿಕಾ ಸಂಸ್ಥೆಗಳಿಗೆ ಮಾರಬಹುದು. ಇದರಿಂದ ನಗರಸಭೆಗೆ ಆದಾಯ ಬರಲಿದೆ ಎಂದು ತಿಳಿಸಿದರು.

ನಗರ ಯೋಜನಾ ಪ್ರಾಧಿಕಾರ ಕೋಶ ಯೋಜನಾಧಿಕಾರಿಗಳಾದ ಜಗದೀಶ ಗಂಗಣ್ಣನವರ್ ಹಾಗೂ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ ಮಾತನಾಡಿ, ನಗರಸಭೆಯಿಂದ ರಾಯಚೂರು ನಗರದ ಪ್ರತಿಯೊಂದು ಮನೆಗಳಿಗೆ ತ್ಯಾಜ್ಯ ವಿಲೇವಾರಿ ವಾಹನಗಳು, ತಳ್ಳುವ ಬಂಡಿಗಳು, ಪೌರಕಾರ್ಮಿಕರು ಬರಲಿದ್ದಾರೆ. ಅವರಿಗೆ ತಮ್ಮ ಮನೆಯಲ್ಲಿ ಬೇರ್ಪಡಿಸಿ ಶೇಖರಿಸಿದ ತ್ಯಾಜ್ಯ ವಸ್ತುಗಳನ್ನು ನೀಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪೌರಾಯುಕ್ತರಾದ ಗುರುಸಿದ್ದಯ್ಯ ಹಿರೇಮಠ್, ನಗರಾಭಿವೃದ್ದಿ ಕೋಶ ಯೋಜನಾಧಿಕಾರಿ ಯಾದವ ಜಗದೀಶ ಗಂಗಣ್ಣವರು, ನಗರಸಭೆ ಸದಸ್ಯರಾದ ಜಯಣ್ಣ, ಶ್ರೀನಿವಾಸ್ ರಡ್ಡಿ, ರವೀಂದ್ರ ಜಲ್ದಾರ್, ಲಲಿತಾ ಆಂಜನೇಯ್ಯ ಕಡಗೋಳ, ಸಿಎಂಸಿ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರು ಇದ್ದರು.