ಸಾರಾಂಶ
ಕಳೆದ ಏಳು ವರ್ಷಗಳಿಂದ ನಗರ ವ್ಯಾಪ್ತಿಯಲ್ಲಿ ಸರಿಯಾದ ಅಭಿವೃದ್ಧಿ ಆಗಿಲ್ಲ. ಸರ್ಕಾರದ ಹಂತದಲ್ಲಿ ಯಾವ ಕೆಲಸ ಆಗಬೇಕೋ ನಾನು ಮಾಡಿಸುತ್ತೇನೆ, ಎಲ್ಲರೂ ಕೂಡಿ ನಗರವನ್ನು ಅಭಿವೃದ್ಧಿಪಡಿಸೋಣ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಹೇಳಿದರು.
ಚನ್ನಪಟ್ಟಣ: ಕಳೆದ ಏಳು ವರ್ಷಗಳಿಂದ ನಗರ ವ್ಯಾಪ್ತಿಯಲ್ಲಿ ಸರಿಯಾದ ಅಭಿವೃದ್ಧಿ ಆಗಿಲ್ಲ. ಸರ್ಕಾರದ ಹಂತದಲ್ಲಿ ಯಾವ ಕೆಲಸ ಆಗಬೇಕೋ ನಾನು ಮಾಡಿಸುತ್ತೇನೆ, ಎಲ್ಲರೂ ಕೂಡಿ ನಗರವನ್ನು ಅಭಿವೃದ್ಧಿಪಡಿಸೋಣ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷ ವಾಸೀಲ್ ಅಲಿಖಾನ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ನಗರಸಭೆಯಲ್ಲಿ ನಾಮನಿರ್ದೇಶಿತ ಸದಸ್ಯರು ಸೇರಿದಂತೆ ೩೬ ಸದಸ್ಯರಿದ್ದು, ಎಲ್ಲರೂ ಸೇರಿ ನಗರದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.
ಯುಜಿಡಿ ವಿಳಂಬವೇಕೆ: ನಗರದ ಯುಜಿಡಿ ಕಾಮಗಾರಿಯಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ. ಆದಷ್ಟು ಬೇಗ ಇದಕ್ಕೆ ಮುಕ್ತಿ ಹಾಡಬೇಕಿದೆ. ಯುಜಿಡಿ ಕಾಮಗಾರಿಗೆ ಸಂಬಂಧಿಸಿದಂತೆ ಹೊಸ ಯೋಜನೆ ಸಿದ್ಧಪಡಿಸಿ ಸರ್ಕಾರದಿಂದ ಹೆಚ್ಚು ಅನುದಾನ ಕಲ್ಪಿಸಲು ಪ್ರಯತ್ನಿಸುತ್ತೇನೆ. ನಗರಕ್ಕೆ ಸರಬರಾಜಾಗುವ ಕುಡಿಯುವ ನೀರಿನ ಅಲೊಕೇಷನ್ ಅಗಿಲ್ಲ. ೨೬ ಎಂಎಲ್‌ಡಿ ನೀರಿನ ಅಗತ್ಯತೆ ಇದೆ. ಇನ್ನೇನು ಬೇಸಿಗೆ ಆರಂಭವಾಗಲಿದ್ದು, ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ ವಹಿಸಲು ಸೂಚಿಸಿದರು.
ಕಾಮಗಾರಿ ಗುಣಮಟ್ಟ ಕಾಣುತ್ತಿಲ್ಲ: ಗ್ರಾಮೀಣ ಭಾಗದಲ್ಲಿ ಜಲಜೀವನ್ ಮಿಷನ್ ಕಾಮಗಾರಿಯಿಂದ ರಸ್ತೆಗಳು ಹಾಳಾಗಿವೆ. ಅದೇ ರೀತಿ ನಗರದಲ್ಲೂ ಗುತ್ತಿಗೆದಾರರು ರಸ್ತೆ ಹಾಳು ಮಾಡುತ್ತಿದ್ದಾರೆ. ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ ಎಂದು ತಾಕೀತು ಮಾಡಿದರು.
ಗ್ಯಾಸ್‌ಪೈಪ್‌ಲೈನ್ ಮಾಹಿತಿ ನೀಡಿ: ನಗರ ಪ್ರದೇಶದಲ್ಲಿ ಗ್ಯಾಸ್ ಪೈಪ್ ಲೈನ್ ಅಳವಡಿಸುತ್ತಿದ್ದು, ಈ ಕುರಿತು ನಗರಸಭೆ ಸದಸ್ಯರಿಗೆ ಸರಿಯಾದ ಮಾಹಿತಿ ಇಲ್ಲದಂತಾಗಿದೆ. ಗ್ಯಾಸ್ ಪೈಪ್ ಲೈನ್ ಕಂಪನಿ ಇದರಿಂದ ಏನು ಪ್ರಯೋಜನ, ನಗರದ ೩೧ ವಾರ್ಡ್‌ಗಳಲ್ಲಿ ಗ್ಯಾಸ್ ಲೈನ್ ಎಲ್ಲಿ ಹೋಗುತ್ತದೆ ಎಂಬ ಮ್ಯಾಪ್ ತಯಾರಿಸಿ, ನಗರಸಭೆ ಸದಸ್ಯರಿಗೆ ಇದರ ಪ್ರಾಜೆಕ್ಟ್ ತೋರಿಸಿ. ಇಲಾಖೆ ಜತೆ ಸಮನ್ವಯ ಸಾಧಿಸಿ, ನಗರಕ್ಕೆ ತಕ್ಕಂತೆ ಯೋಜನೆ ಅನುಷ್ಠಾನಗೊಳಿಸಿ ಎಂದು ಸೂಚಿಸಿದರು.
ಇದಕ್ಕೆ ಉತ್ತರಿಸಿದ ಗ್ಯಾಸ್ ಏಜೆನ್ಸಿ ಅಧಿಕಾರಿ, ನಗರದ 1ರಿಂದ 8ನೇ ವಾರ್ಡ್ ವ್ಯಾಪ್ತಿಯಲ್ಲಿ ಗ್ಯಾಸ್ ಪೈಪ್ ಲೈನ್ ಅಳವಡಿಕೆ ಬಹುತೇಕ ಪೂರ್ಣಗೊಂಡಿದೆ. ಕೆಲ ಬಡಾವಣೆಗಳಲ್ಲಿ ಈಗಾಗಲೇ ಪೈಪ್‌ಲೈನ್ ಮೂಲಕ ಗ್ಯಾಸ್ ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಪೂರೈಕೆ ಸ್ಥಗಿತಗೊಳ್ಳಲಿದ್ದು, ಪೈಪ್‌ಲೈನ್ ಮೂಲಕವೇ ಗ್ಯಾಸ್ ಪೂರೈಸಲಾಗುವುದು. ಗ್ರಾಹಕರು ಎಷ್ಟು ಗ್ಯಾಸ್ ಬಳಸುವರೋ ಅಷ್ಟಕ್ಕೆ ಮಾತ್ರ ಹಣ ನೀಡಬೇಕಾಗುತ್ತದೆ. ಎಲ್ಲ ಸದಸ್ಯರು ಸಹಕರಿಸಿದರೆ ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದರು.
ಕೆಲವು ಪ್ರದೇಶದಲ್ಲಿ ರಾಜಾ ಕಾಲುವೆಗಳಲ್ಲಿ ಹೂಳು ತುಂಬಿದೆ. ಹೂಳು ಎತ್ತಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಅಧಿಕಾರಿಗಳು ಬರೀ ಸಬೂಬು ಹೇಳುತ್ತಾರೆಯೇ ಹೊರತು ಯಾವುದೇ ಕೆಲಸವನ್ನು ಮಾಡುತ್ತಿಲ್ಲ. ಬೀಡಿ ಕಾಲೋನಿ ಸೇರಿದಂತೆ ಹಲವು ಕಡೆ ಮನೆಗಳಿಗೆ ಮಳೆ ಬಂದರೆ ನೀರು ನುಗ್ಗುತ್ತದೆ ಎಂದು ಸದಸ್ಯರು ಆರೋಪಿಸಿದರು.
ನಗರ ಪ್ರದೇಶದ ಕನ್ಸರ್‌ವೆನ್ಸಿ ಗಲ್ಲಿಗಳು ಕಸ ಹಾಗೂ ಗಿಡಗಂಟಿಗಳಿಂದ ತುಂಬಿವೆ. ಇವುಗಳನ್ನು ಕಾಲಕಾಲಕ್ಕೆ ತೆರವು ಮಾಡುವ ಕೆಲಸ ಮಾಡಲಾಗುತ್ತಿಲ್ಲ. ಗಲ್ಲಿಗಳು ಕಸದ ಡಂಪ್ ಯಾರ್ಡ್ ಆಗಿವೆ. ಕನ್ಸ್‌ರ್ವೆನ್ಸಿಗಳನ್ನು ಸ್ವಚ್ಛಗೊಳಿಸಲು ಆದ್ಯತೆ ನೀಡುವಂತೆ ಸದಸ್ಯರು ಒತ್ತಾಯಿಸಿದರು.
ಪುಟ್‌ಪಾತ್ ವ್ಯಾಪಾರದಿಂದಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ, ಬೀದಿ ಬದಿ ವ್ಯಾಪಾರಿಗಳೇ ರಸ್ತೆಯನ್ನು ಅವರಿಸಿಕೊಂಡಿದ್ದಾರೆ. ಆದಷ್ಟು ಬೇಗ ಕರಬಲ ಮೈದಾನದಲ್ಲಿರುವ ಅಂಗಡಿ ಮಳಿಗೆಗೆ ಫುಟ್‌ಪಾತ್ ವ್ಯಾಪಾರಿಗಳನ್ನು ಸ್ಥಳಾಂತರಿಸಲು ಕ್ರಮ ವಹಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಪೌರಾಯುಕ್ತ ಮಹೇಂದ್ರ, ಉಪಾಧ್ಯಕ್ಷ ಶ್ರೀನಿವಾಸ್ ಮೂರ್ತಿ, ಸದಸ್ಯರಾದ ರಫೀಕ್, ಲಿಯಾಕತ್, ಸತೀಶ್‌ಬಾಬು, ಜಯಮಾಲ, ಕೋಟೆ ಚಂದ್ರು, ಸುಮಾ ರವೀಶ್, ಮಂಜುನಾಥ್, ಮಂಗಳಮ್ಮ ಇತರರಿದ್ದರು.
ಫೆ.3 ರಿಂದ ನಗರ ಪ್ರವಾಸ
ಚನ್ನಪಟ್ಟಣ ನಗರ ಪ್ರದೇಶದಲ್ಲಿನ ಸಮಸ್ಯೆಗಳನ್ನು ಅರಿತು ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಫೆ.೩ರಿಂದ ವಾರ್ಡ್ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಳ್ಳುವುದಾಗಿ ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು. ನಗರ ಪ್ರದೇಶದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಇದನ್ನು ಪರಿಹರಿಸಲು ವಾರ್ಡ್‌ಗಳಿಗೆ ಖುದ್ದು ಭೇಟ ನೀಡಲಾಗುವುದು. ಇದಕ್ಕೆ ಅಧಿಕಾರಿಗಳು ತಯಾರಿ ನಡೆಸುವಂತೆ ಸೂಚಿಸಿದರು.