ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾಶಿರಾ ತಾಲೂಕು ಕಲ್ಲುಕೋಟೆ ಸರ್ವೆ ಸರ್ವೆ ನಂ. 118 ರಲ್ಲಿರುವ 5 ಎಕರೆ 31 ಗುಂಟೆ ಜಮೀನನ್ನು 2017-18ರಲ್ಲಿಯೇ ನಿವೇಶನ ವಿಂಗಡಣೆಗೆ ಸರ್ಕಾರದಿಂದ ಆದೇಶವಾಗಿದ್ದು ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ನಗರಸಭೆ ಆಶ್ರಯ ಸಮಿತಿ ಸದಸ್ಯ ವಾಜರಹಳ್ಳಿ ರಮೇಶ್ ಹೇಳಿದರು.
ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಶಿರಾ ನಗರಸಭಾ ವ್ಯಾಪ್ತಿಯಲ್ಲಿ ನಿವೇಶನ ರಹಿತ ಬಡವರಿಗೆ ನಿವೇಶನ ನೀಡಲು ಶಾಸಕ ಟಿ.ಬಿ.ಜಯಚಂದ್ರ ಅವರು ಶ್ರಮಿಸುತ್ತಿದ್ದು, ಬಡವರಿಗೆ ನಿವೇಶನ ನೀಡುವ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಎಲ್ಲರೂ ನಮ್ಮ ಜೊತೆ ಕೈಜೋಡಿಸಬೇಕು. ನಗರಸಭೆಯ 5 ಕಿ.ಮೀ. ವ್ಯಾಪ್ತಿಯಲ್ಲಿ ಸಾಗುವಳಿ ಜಮೀನು ಕೊಡಲು ಬರುವುದಿಲ್ಲ ಎಂದು ಸರಕಾರದ ಆದೇಶ ಇದೆ. ಆದ್ದರಿಂದ ಧರಣಿ ನಡೆಸುತ್ತಿದ್ದವರಿಗೆ ನಿಮಗೆ ಬೇರೆಡೆ ಜಮೀನು ಕೊಡುವುದಾಗಿ ಮನವೊಲಿಸಲಾಗಿತ್ತು. ಆದರೆ ಇದರಲ್ಲಿ ರಾಜಕೀಯವಾಗಿ ಷಡ್ಯಂತ್ರ ಮಾಡಲಾಗಿದೆ. ಈ ಹಿಂದೆ ಕಳೆದ ವರ್ಷ ಬಡವರ ನಿವೇಶನ ನೀಡಲು ಆಶ್ರಯ ಸಮಿತಿ ಸಭೆ ಮಾಡಿ ತೀರ್ಮಾನ ಮಾಡಿದ್ದೇವೆ. ಈ ಸಭೆ ವಿಧಾನಪರಿಷತ್ ಸದಸ್ಯ ಚಿದಾನಂದ ಗೌಡ ಅವರ ಸಮ್ಮುಖದಲ್ಲಿಯೇ ನಡೆದಿದೆ. ನಿವೇಶನ ವಿಂಗಡಣೆಯ ನಕ್ಷೆ ಮಾಡಿ ಯೋಜನಾ ಪ್ರಾಧಿಕಾರಕ್ಕೆ ಕಳುಹಿಸಲಾಗಿತ್ತು. ಆದರೆ ನಿನ್ನೆ ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಅವರ ಹೇಳಿಕೆ ಸಮಂಜಸವಲ್ಲ. ಈ ಹಿಂದೆ ಇದ್ದ ಬಿಜೆಪಿ ಸರಕಾರದ ಅವಧಿಯಲ್ಲಿ ಬಡವರಿಗೆ ಏಕೆ ನಿವೇಶನ ನೀಡಲಿಲ್ಲ. ಈಗ ಏಕೆ ಅಡ್ಡ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ ಅವರು ಶಿರಾದಲ್ಲಿ ಹಲವು ವರ್ಷಗಳಿಂದ ನಿವೇಶನ ರಹಿತರು ನಿವೇಶನಕ್ಕಾಗಿ ಕಾದು ಕುಳಿತಿದ್ದಾರೆ ಅವರಿಗೆ ನಿವೇಶನ ನೀಡಲು ಎಲ್ಲರೂ ಕೈಜೋಡಿಸಿ ಎಂದರು.ಆಶ್ರಯ ಸಮಿತಿ ಸದಸ್ಯ ನೂರುದ್ದೀನ್ ಮಾತನಾಡಿ ಅಭಿವೃದ್ಧಿ ವಿಚಾರದಲ್ಲಿ ಯಾರು ಅಡ್ಡಿ ಬರಬಾರದು. ಶಾಸಕ ಟಿ.ಬಿ.ಜಯಚಂದ್ರ ಅವರು ಹಲವಾರು ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಬಡವರಿಗೆ ಮನೆ ಇಲ್ಲದವರಿಗೆ ವಸತಿ ಕಲ್ಪಿಸಲು ಶ್ರಮ ವಹಿಸುತ್ತಿದ್ದಾರೆ. ಅವರಿಗೆ ನಾವೆಲ್ಲರೂ ಸಹಕಾರ ನೀಡಬೇಕು ಎಂದರು. ಆಶ್ರಯ ಸಮಿತಿ ಸದಸ್ಯ ಮಂಜುನಾಥ್ ಮಾತನಾಡಿ ಕಳೆದ 20 ದಿನಗಳ ಹಿಂದೆಯೇ ಕಲ್ಲುಕೋಟೆ ಸರ್ವೆ ನಂ 118ರಲ್ಲಿ ಧರಣಿ ನಡೆಸುತ್ತಿದ್ದವರೊಂದಿಗೆ ನಾಲ್ಕರಿಂದ ಐದು ಬಾರಿ ಸಂಧಾನ ಮಾಡಲಾಗಿತ್ತು. ಇದಕ್ಕೆ ರಾಜಕೀಯ ಬಣ್ಣ ಹಚ್ಚುವುದು ಬೇಡ ಎಲ್ಲರೂ ಸೇರಿ ಕೆಲಸ ಮಾಡೋಣ. ಅಭಿವೃದ್ಧಿ ಕೆಲಸದಲ್ಲಿ ರಾಜಕೀಯ ಮಾಡಬೇಡಿ ಎಂದರು. ಪತ್ರಿಕಾಗೋಷ್ಠಿಯಲ್ಲಿ ಆಶ್ರಯ ಸಮಿತಿ ಸದಸ್ಯೆ ಜಯಲಕ್ಷ್ಮೀ, ನಗರಸಭೆ ಸದಸ್ಯ ರಾಧಾಕೃಷ್ಣ ಹಾಜರಿದ್ದರು.