ಸಾರಾಂಶ
ಅಂಬಾಗಿಲು ಬಳಿಯ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಧರ್ಮಪ್ರಾಂತ್ಯದ ಪಾಕ್ಷಿಕ ಪತ್ರಿಕೆ ಉಜ್ವಾಡ್‌ನ 11ನೇ ವಾರ್ಷಿಕೋತ್ಸವ ನಡೆಯಿತು. ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಇತರ ಭಾಷೆಗಳಿಗೆ ಪ್ರೊತ್ಸಾಹಿಸುವುದರೊಂದಿಗೆ ಮಾತೃ ಭಾಷೆ ಕೊಂಕಣಿಯ ಮೇಲೆ ಮಮತೆ ಮತ್ತು ಪ್ರೀತಿಯನ್ನು ಇರಿಸಿಕೊಂಡು ಪ್ರತಿನಿತ್ಯ ನಮ್ಮ ಮನೆಗಳಲ್ಲಿ ಅದನ್ನು ಕಡ್ಡಾಯವಾಗಿ ಮಾತನಾಡುವುದರ ಮೂಲಕ ಅದರ ಬೆಳವಣಿಗೆಗೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.ಅವರು ಭಾನುವಾರ ಅಂಬಾಗಿಲು ಬಳಿಯ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಧರ್ಮಪ್ರಾಂತ್ಯದ ಪಾಕ್ಷಿಕ ಪತ್ರಿಕೆ ಉಜ್ವಾಡ್‌ನ 11ನೇ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇಂದು ನಾವು ನಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸದಿಂದ ಇತರ ಭಾಷೆಗಳಿಗೆ ಅವಲಂಬಿತರಾಗಬೇಕಾಗಿದ್ದು ಅದರೊಂದಿಗೆ ಮನೆಗಳಲ್ಲಿ ಕೊಂಕಣಿ ಭಾಷೆಯ ಉಪಯೋಗವನ್ನು ಮಾಡುವುದರಿಂದ ಅದು ಜೀವಂತವಾಗಿರಲು ಸಾಧ್ಯವಿದೆ. ಇತರ ಭಾಷೆಯ ಪತ್ರಿಕೆಗಳಿಗೂ ಬೆಂಬಲ ನೀಡುವುದರೊಂದಿಗೆ ಪವಿತ್ರ ಧರ್ಮಸಭೆಯ ಧ್ಯೇಯ ಉದ್ದೇಶಗಳನ್ನು ಕೊಂಕಣಿ ಭಾಷಿಕರಾದ ನಮ್ಮ ಮಾತೃ ಭಾಷೆಯ ಪತ್ರಿಕೆಯಲ್ಲಿ ಪ್ರಚಾರ ಪಡಿಸುತ್ತಿದ್ದು, ಅದನ್ನು ಬೆಂಬಲಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಿದಾಗ ಭಾಷೆಯ ಉಳಿವು ಸಾಧ್ಯವಿದೆ ಎಂದರು.ಮುಖ್ಯ ಅತಿಥಿಯಾಗಿ ಆಗಮಿಸಿದ ಸಾಹಿತಿ ವಲೇರಿಯನ್ ಕ್ವಾಡ್ರಸ್ ಅಜೆಕಾರ್ ಮಾತನಾಡಿ, ಕೊಂಕಣಿ ಸಾಹಿತಿಗಳು ಕಷ್ಟದಲ್ಲಿದ್ದಾಗ ಅವರ ನೆರವಿಗೆ ಬರುವ ಕೆಲಸವನ್ನು ಸಮುದಾಯ ಮಾಡಿಕೊಂಡು ಬಂದಿದ್ದು ಅದು ಮುಂದುವರಿಯಬೇಕಾಗಿದೆ. ಈ ಮೂಲಕ ಕೊಂಕಣಿ ಸಾಹಿತಿಗಳು ಮುಂದೆಯೂ ಒಗ್ಗಟ್ಟಿನಿಂದ ಸಾಹಿತ್ಯದ ಸೇವೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ದೀಪಾ ಟ್ರಸ್ಟ್ ಪ್ರಕಾಶನದಲ್ಲಿ ಉಜ್ವಾಡ್ ಪತ್ರಿಕೆಯ ಸಂಪಾದಕ ಆಲ್ವಿನ್ ಸೆರಾವೊ ಇವರ ಜೆರಿಕೊಚೊ ಪಾಗೊರ್ ಹಾಗೂ ಯುವ ಸಾಹಿತಿ ಅನ್ಸಿಟಾ ಡಿಸೋಜಾ ಇವರ ತಾಳೊ ಪುಸ್ತಕಗಳನ್ನು ಧರ್ಮಾಧ್ಯಕ್ಷರು ಲೋಕಾರ್ಪಣೆಗೊಳಿಸಿದರು.ಉಜ್ವಾಡ್ ಪತ್ರಿಕೆಯ ಪ್ರಾಯೋಜಕತ್ವದಲ್ಲಿ ನಡೆದ ಸಾಹಿತ್ಯ ಸ್ಪರ್ಧೆಗಳು ಹಾಗೂ ಕ್ವಿಜ್ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಗೌರವಿಸಲಾಯಿತು.ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್ ಡೆಸಾ, ದಾಯ್ಜಿ ದುಬಾಯ್ ಸಂಘಟನೆಯ ಮಂಗಳೂರು ಸಂಚಾಲಕ ಪ್ರವೀಣ್ ತಾವ್ರೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.ದೀಪಾ ಟ್ರಸ್ಟ್ ಮುಖ್ಯಸ್ಥರು ಹಾಗೂ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ಉಜ್ವಾಡ್ ಪತ್ರಿಕೆಯ ಸಂಪಾದಕರಾದ ಆಲ್ವಿನ್ ಸೆರಾವೊ ವಂದಿಸಿದರು. ಡಾ. ವಿನ್ಸೆಂಟ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ಬಳಿಕ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಮಂಗಳೂರು ಇದರ ರಂಗ ಅಧ್ಯಯನ ಕೇಂದ್ರದ ಸದಸ್ಯರಿಂದ ಹ್ಯಾಂಗ್ ಆನ್ ಕೊಂಕಣಿ ನಾಟಕ ಪ್ರದರ್ಶನಗೊಂಡಿತು.