ಗ್ರೀನ್‌ ಸಿಟಿ ಸಂಕಲ್ಪಕ್ಕೆ ಕೈಜೋಡಿಸಿ: ಸತೀಶ ಸೈಲ್

| Published : Sep 18 2024, 01:50 AM IST

ಸಾರಾಂಶ

ಪ್ರತಿಯೊಬ್ಬನಾಗರಿಕರೂ ತಮ್ಮ ಮನೆಯಲ್ಲಿ ಮತ್ತು ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಶಾಸಕ ಸತೀಶ ಸೈಲ್ ಮನವಿ ಮಾಡಿದರು.

ಕಾರವಾರ: ಸ್ವಚ್ಛತೆಯೇ ಸೇವೆ- 2024ರ ಆಂದೋಲನದ ಅಂಗವಾಗಿ ನಗರದ ರವೀಂದ್ರನಾಥ್ ಟಾಗೋರ್ ಕಡಲತೀರದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ಕೆಎಸ್ಎಂಸಿಎ ಅಧ್ಯಕ್ಷ, ಶಾಸಕ ಸತೀಶ ಸೈಲ್ ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಯೊಬ್ಬನಾಗರಿಕರೂ ತಮ್ಮ ಮನೆಯಲ್ಲಿ ಮತ್ತು ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಬೇಕು. ಸ್ವಚ್ಛತಾ ಚಟುವಟಿಕೆಗಳಿಗಾಗಿ ನಿತ್ಯ ಕನಿಷ್ಠ ಸಮಯವನ್ನು ಮೀಸಲಿಡುವ ಮೂಲಕ ಸುತ್ತಲಿನ ಪರಿಸರವನ್ನು ಮಲಿನವಾಗದಂತೆ ತಡೆಯಬೇಕು. ಕಾರವಾರ ನಗರವನ್ನು ಗ್ರೀನ್ ಸಿಟಿ ಮಾಡುವ ಸಂಕಲ್ಪ ಪ್ರತಿಯೊಬ್ಬರದ್ದಾಗಬೇಕು ಎಂದರು.ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಲ್ಲೆಯಲ್ಲಿ ಇಂದಿನಿಂದ 15 ದಿನಗಳ ಕಾಲ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾದ್ಯಂತ ಈ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಮನೆ, ಶಾಲೆ, ಕಾಲೇಜು, ಕಚೇರಿಗಳಲ್ಲಿ ಸ್ವಚ್ಚತೆಯನ್ನು ಕಾಪಾಡಬೇಕು. ಜಿಲ್ಲೆಯಲ್ಲಿ ಈಗಾಗಲೇ ಮನೆ ಮನೆಯಿಂದ ಕಸ ಸಂಗ್ರಹಣೆ ಕಾರ್ಯ ನಡೆಯುತಿದ್ದು, ಹೀಗೆ ಸಂಗ್ರಹಿಸಲಾದ ಕಸವನ್ನು ಪರಿಸರಕ್ಕೆ ಹಾನಿಯಾಗದಂತೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದರ ಜತೆಗೆ ಅದನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸಲು ಎಂಆರ್‌ಎಫ್ ಘಟಕಗಳನ್ನು ಆರಂಭಿಸಲಾಗುತ್ತಿದೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಕಾರ್ಯಕ್ರಮಗಳ ಗುರಿ ಸಾಧನೆಗೆ, ಪ್ರತಿಯೊಬ್ಬರಿಗೂ ಶುದ್ಧ ನೀರು ಹಾಗೂ ಶುದ್ಧ ಪರಿಸರ ನಿರ್ಮಾಣ ಮಾಡುವ ಗುರಿಯೂ ಇದ್ದು, ಈ ಸಾಧನೆಗೆ ಪ್ರತಿಯೊಬ್ಬ ಸಾರ್ವಜನಿಕರೂ ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದರು.

ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ, ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೆಕರ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗಿಸ್ ಮತ್ತಿತರರು ಇದ್ದರು.

ಸ್ವಚ್ಛತಾ ಕಾರ್ಮಿಕರು ಹಾಗೂ ಕಸ ಸಂಗ್ರಹಣಾ ವಾಹನಗಳ ಚಾಲಕಿಯರನ್ನು ಸನ್ಮಾನಿಸಲಾಯಿತು. ಪರಿಸರ ಸ್ವಚ್ಛತೆ ಕಾಪಾಡುವ ಕುರಿತು ಪ್ರತಿಜ್ಞಾ ವಿಧಿ ಭೋದಿಸಲಾಯಿತು. ಸಹಿ ಸಂಗ್ರಹ ಅಭಿಯಾನ ನಡೆಯಿತು.