ಸಾರಾಂಶ
ಬಸವಣ್ಣವರ ಕುರಿತು ಅವಹೇಳನಕಾರಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ರಾಜ್ಯಾದ್ಯಂತ ಖಂಡನೆ ವ್ಯಕ್ತವಾಗಿತ್ತು. ಮಠಾಧೀಶರ ಮಾತು ಕೂಡ ಲೆಕ್ಕಿಸಲಿಲ್ಲ. ಕ್ಷಮೆ ಕೇಳದೆ, ಯತ್ನಾಳ್ ತಮ್ಮ ವರಸೆ ಮುಂದುರಿಸಿದ್ದನ್ನು ತೀವ್ರ ಖಂಡನೀಯ.
ಧಾರವಾಡ:
ನಾಡಿನ ಬಸವತತ್ವ, ವಿರಕ್ತ ಮಠಾಧೀಶರು, ಬಸವ ಸಂಘಟನೆಗಳು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಕೈಜೋಡಿಸಲು ನಿವೃತ್ತ ಐಎಎಸ್ ಅಧಿಕಾರಿ, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್. ಜಾಮದಾರ ಮನವಿ ಮಾಡಿದರು.ನಗರದ ಲಿಂಗಾಯತ ಭವನದಲ್ಲಿ ಶುಕ್ರವಾರ ಮುಚ್ಚಿದ ಬಾಗಿಲಿನಲ್ಲಿ ನಡೆದ ಜಾಗತಿಕ ಲಿಂಗಾಯತ ಮಹಾಸಭಾ ಪದಾಧಿಕಾರಿಗಳ ಮತ್ತು ವಿವಿಧ ಮಠಾಧೀಶರ ಸಭೆಯಲ್ಲಿ ಅವರು ಮಾತನಾಡಿ, ಲಿಂಗಾಯತ ಹೋರಾಟಕ್ಕೆ ಸರ್ವರೂ ಬೆಂಬಲಿಸುವಂತೆ ಮನವಿ ಮಾಡಿದರು.
ನಗರ, ಜಿಲ್ಲೆ ಹಾಗೂ ಗ್ರಾಮೀಣ ಮಟ್ಟದಲ್ಲಿ ಜಾಗತಿಕ ಲಿಂಗಾಯತ ಸಂಘಟನೆ, ಸದಸ್ಯತ್ವ ಹೆಚ್ಚಿಸಬೇಕು. ಲಿಂಗಾಯತರಲ್ಲಿ ಪ್ರತ್ಯೇಕ ಧರ್ಮ ಕುರಿತು ಜಾಗೃತಿ ಮೂಡಿಸುವ ಮೂಲಕ ಹೋರಾಟಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲು ಸಲಹೆ ನೀಡಿದರು.ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಚನಾನಂದ ಸ್ವಾಮೀಜಿ ವಿರುದ್ಧ ಆಕ್ರೋಶಗೊಂಡ ಲಿಂಗಾಯತ ಮುಖಂಡರು, ಬಸವಣ್ಣವರ ಕುರಿತು ಕೀಳಾಗಿ ಮಾತಾಡುವವರ ವಿರುದ್ಧ ಅನುಸರಿಸುವ ಕ್ರಮ ಕುರಿತು ಮಠಾಧೀಶರಿಗೆ ಸಲಹೆ ನೀಡಿದರು.
ಬಸವಣ್ಣವರ ಕುರಿತು ಅವಹೇಳನಕಾರಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ರಾಜ್ಯಾದ್ಯಂತ ಖಂಡನೆ ವ್ಯಕ್ತವಾಗಿತ್ತು. ಮಠಾಧೀಶರ ಮಾತು ಕೂಡ ಲೆಕ್ಕಿಸಲಿಲ್ಲ. ಕ್ಷಮೆ ಕೇಳದೆ, ಯತ್ನಾಳ್ ತಮ್ಮ ವರಸೆ ಮುಂದುರಿಸಿದ್ದನ್ನು ತೀವ್ರ ಖಂಡಿಸಿದರು. ಲಿಂಗಾಯತ ಮಠಾಧೀಶರು ಹಾಗೂ ನಾಯಕರು ಸುಮ್ಮನೆ ಕುಳಿತರೆ ಸಾಲದು. ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಮುಖಕ್ಕೆ ಹೊಡೆದಂತೆ ಉತ್ತರ ಕೊಡದಿದ್ದರೆ, ಅವರು ಹಳೆಯ ಚಾಳಿ ಮುಂದುವರಿಸಬಹುದು ಎಂದು ಎಚ್ಚರಿಕೆ ನೀಡಿದರು.ವಚನಾನಂದ ಶ್ರೀಗಳು ಸೇರಿದಂತೆ ಕೆಲವು ಮರಾಧೀಶರು ಲಿಂಗಾಯತ ಯುವ ಸಮುದಾಯವನ್ನು ದಾರಿ ತಪ್ಪಿಸುತ್ತಿದ್ದು, ಲಿಂಗಾಯತರು ಮಾತನಾಡದಂತೆ ಪರಿಸ್ಥಿತಿ ನಿರ್ಮಿಸುತ್ತಿದ್ದಾರೆ. ಇದನ್ನು ತಡೆಯಲು ಮಠಾಧೀಶರು, ಮುಖಂಡರಿಗೆ ಸಲಹೆ ನೀಡಿದರು.
ಸಾಣೇಹಳ್ಳಿ ಶ್ರೀಗಳ ಹೇಳಿಕೆಯಿಂದ ಅವರ ಮೇಲೂ ದಾಳಿಗೆ ಯತ್ನ ಆಗಿತ್ತು. ತತ್ವಧಾರಿತ ಮಾತು ಹೇಳಿದಾಗ ವಾಗ್ದಾಳಿ ಆಗುತ್ತಿದೆ. ಇದೆಲ್ಲ ಸೂಕ್ಷ್ಮ ವಿಚಾರ. ಆದಾಗ್ಯೂ ಲಿಂಗಾಯತರು ಸಾಂಘಿಕವಾಗಿ ಅವರ ಬೆನ್ನಿಗೆ ನಿಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ವಚನಗಳ ತತ್ವ-ಸಿದ್ಧಾಂತ ಆಧಾರಿತ ಮಾತು ಹೇಳಿದ ಸ್ವಾಮೀಜಿ ಮೇಲೆ ದಾಳಿ ನಡೆದಾಗ ಲಿಂಗಾಯತ ಮಠಾಧೀಶರು ಹಾಗೂ ಸಮಾಜದ ಮುಖಂಡರು ಆ ಸ್ವಾಮೀಜಿ ಬೆನ್ನಿಗೆ ನಿಲ್ಲುವ ಕೆಲಸ ಮಾಡಬೇಕು ಎಂದು ಸಭೆ ಒಕ್ಕೊರಲಿಂದ ಆಗ್ರಹಿಸಿತು.ಸಭೆಯಲ್ಲಿ ನಾಡಿನ ಲಿಂಗಾಯತ ವಿವಿಧ ಮಠಗಳ ಮಠಾಧೀಶರು ಹಾಗೂ ಮುಖಂಡರು ಪಾಲ್ಗೊಂಡಿದ್ದರು.