ಶತಮಾನೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿ: ಷಡಕ್ಷರಿ ಶ್ರೀ

| Published : Feb 19 2025, 12:45 AM IST

ಸಾರಾಂಶ

ಮಂಗಳವಾರ ಸಂಜೆ ಇಲ್ಲಿನ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಜೀವ ಸದಸ್ಯರ ಸಭೆ ನಡೆಯಿತು.

ಹುಬ್ಬಳ್ಳಿ: ಫೆ. 19ರಿಂದ ಸದ್ಗುರು ಸಿದ್ಧಾರೂಢರ 190ನೇ ಜಯಂತ್ಯುತ್ಸವ ಹಾಗೂ ಗುರುನಾಥರೂಢರ 115ನೇ ಜಯಂತ್ಯುತ್ಸವ, ಸಿದ್ಧಾರೂಢರ ಕಥಾಮೃತದ ಶತಮನೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗುತ್ತಿವೆ. ಭಕ್ತರೆಲ್ಲರೂ ಸೇರಿ ಯಾವುದೇ ಗೊಂದಲ- ಗಲಾಟೆಗೆ ಆಸ್ಪದೆ ನೀಡದೇ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸೋಣ ಎಂದು ನಗರದ ರಾಜವಿದ್ಯಾಶ್ರಮದ ಷಡಕ್ಷರಿ ಶ್ರೀಗಳು ಮನವಿ ಮಾಡಿದರು. ಈ ನಡುವೆ ಆಡಳಿತ ಮಂಡಳಿ ಕಾರ್ಯವೈಖರಿ ಬಗ್ಗೆ ಕೆಲ ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದು ಕಂಡು ಬಂತು.

ಮಂಗಳವಾರ ಸಂಜೆ ಇಲ್ಲಿನ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಜೀವ ಸದಸ್ಯರು, ಆಜೀವ ಪೋಷಕರು ಹಾಗೂ ಆಶ್ರಯದಾತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿಯಲ್ಲಿ ಏನಾದರೂ ಸಮಸ್ಯೆಗಳು ಕಂಡು ಬಂದಿದ್ದಲ್ಲಿ ಶಿವರಾತ್ರಿ ಮಹೋತ್ಸವ ಕಾರ್ಯಕ್ರಮದ ಬಳಿಕ ಎಲ್ಲರೂ ಸೇರಿ ಮತ್ತೊಮ್ಮೆ ಚರ್ಚಿಸಿ ಪರಿಹರಿಸುವ ಕಾರ್ಯ ಕೈಗೊಳ್ಳೋಣ ಎಂದರು.

ಸದಸ್ಯ ಬಸವಂತಪ್ಪ ಮಾತನಾಡಿ, ಶ್ರೀಮಠದ ನಿಯಾಮವಳಿಗಳ ಅನ್ವಯ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು. ದಿನದಿಂದ ದಿನಕ್ಕೆ ಶ್ರೀಮಠಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಮಠಕ್ಕೆ ಸಂಬಂಧಿಸಿದ ಜಾಗವನ್ನು ಗುರುತಿಸಿ, ಸಮರ್ಪಕವಾಗಿ ಬಳಸಿಕೊಳ್ಳುವ ಕಾರ್ಯವಾಗಬೇಕಿದೆ. ಹಾಗೇನಾದರೂ ಜಾಗದ ಕೊರತೆ ಇದ್ದಲ್ಲಿ ಅವಶ್ಯವಿರುವ ಜಾಗದ ಖರೀದಿಗೆ ಟ್ರಸ್ಟ್‌ ಠರಾವು ಪಾಸು ಮಾಡುವಂತೆ ಒತ್ತಾಯಿಸಿದರು.

ಸದ್ಗುರು ಎಂದು ಬದಲಿಸಿಸಭೆಯಲ್ಲಿ ಪಾಲ್ಗೊಂಡಿದ್ದ ಅಜೀವ ಸದಸ್ಯ ಗುರುನಾಥ ಉಳ್ಳಿಕಾಶಿ ಮಾತನಾಡಿ, ಶ್ರೀ ಸಿದ್ಧಾರೂಢ ಸ್ವಾಮೀಜಿಯನ್ನು ಸದ್ಗುರು ಎಂದು ಕರೆಯಲಾಗುತ್ತಿದೆ. ಆದರೆ, ಟ್ರಸ್ಟ್‌ನವರು ಜಾತ್ರೆಯ ಆಮಂತ್ರಣ ಪತ್ರಿಕೆಯಲ್ಲಿ ಜಗದ್ಗುರು ಎಂದು ಮುದ್ರಣ ಮಾಡಿರುವುದು ಸರಿಯಲ್ಲ. ಸದ್ಗುರು ಸಿದ್ಧಾರೂಢ ಸ್ವಾಮೀಜಿ ಎಂದೇ ಕರೆಯಬೇಕು. ಕೂಡಲೇ ಜಗದ್ಗುರು ಎಂಬ ಪದ ತೆಗೆದು ಹಾಕುವಂತೆ ಒತ್ತಾಯಿಸಿದರು.

ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿಗೆ ಸಂಬಂಧಿಸಿದ ಬ್ಯಾಂಕ್‌ಗಳ ಖಾತೆ, ತೆರೆದ ದಿನಾಂಕ ಹಾಗೂ ವಹಿವಾಟಿನ ವಿವರ, ಭಕ್ತರು ನೀಡಿದ ದೇಣಿಗೆ ಸಂಪೂರ್ಣವಾಗಿ ಪಾರದರ್ಶಕವಾಗಿರುವಂತೆ ನೋಡಿಕೊಳ್ಳುವಂತೆ ಮನವಿ ಮಾಡಿದರು.

ಸಮರ್ಪಕ ವಸತಿಗೆ ಕ್ರಮ ಕೈಗೊಳ್ಳಲಿ

ವಿಶ್ವ ವೇದಾಂತ ಪರಿಷತ್‌ ಕಾರ್ಯಕ್ರಮಕ್ಕೆ ನೂರಾರು ಮಠಾಧೀಶರು, ಶರಣರು ಹಾಗೂ ಗಣ್ಯರು ಆಗಮಿಸುತ್ತಿದ್ದಾರೆ. ಅವರೆಲ್ಲರಿಗೂ ಉಳಿದುಕೊಳ್ಳಲು ಬೇಕಾದ ವ್ಯವಸ್ಥೆಯನ್ನು ಶ್ರೀಮಠದ ಆವರಣದಲ್ಲಿ ಕಲ್ಪಿಸಬೇಕು. ಹೀಗೆ ಮಾಡುವುದರಿಂದ ಶ್ರೀಮಠದ ಹಣವು ಅನಗತ್ಯವಾಗಿ ಖರ್ಚು ಆಗವುದನ್ನು ತಪ್ಪಿಸಬಹುದು ಎಂದು ಉಳ್ಳಿಕಾಶಿ ಹಾಗೂ ಮಾರುತಿ ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ್, ಉಪಾಧ್ಯಕ್ಷ ಮಂಜುನಾಥ ಮುನವಳ್ಳಿ, ಧರ್ಮದರ್ಶಿಗಳಾದ ರಮೇಶ ಬೆಳಗಾವಿ, ಬಾಳು ಮಗಜಿಕೊಂಡಿ, ಶ್ಯಾಮಾನಂದ ಪೂಜೇರಿ, ಗೋವಿಂದ ಮಣ್ಣೂರ, ವಿನಾಯಕ ಘೋಡಕೆ, ಉದಯಕುಮಾರ ನಾಯ್ಕ, ಕೆ.ಎಲ್‌. ಪಾಟೀಲ, ಗೀತಾ ಕಲಬುರ್ಗಿ, ಸಿದ್ದನಗೌಡ ಪಾಟೀಲ ಸೇರಿದಂತೆ ಕಮಿಟಿಯ ಅಜೀವ ಸದಸ್ಯರು ಪಾಲ್ಗೊಂಡಿದ್ದರು.

ಸಭೆಯಲ್ಲಿ ಗದ್ದಲ, ಗೊಂದಲದ ವಾತಾವರಣ

ಸಭೆಯ ಆರಂಭವಾಗುತ್ತಿದ್ದಂತೆ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ ಮಂಡಿಸಿದ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿಯ ವಾರ್ಷಿಕ ವರದಿಗೆ ಕಮಿಟಿಯ ಹಲವು ಅಜೀವ ಸದಸ್ಯರು ತಕರಾರು ತೆಗೆದರು. ಈ ಸಭೆಯಲ್ಲಿ ಟ್ರಸ್ಟ್‌ನ ಅಧ್ಯಕ್ಷ ಡಿ.ಆರ್‌. ಪಾಟೀಲ ಹಾಗೂ ಉಪಾಧ್ಯಕ್ಷ ಬಿ.ಆರ್‌. ಬಾಗೇವಾಡಿ ಹಾಜರಿಲ್ಲ. ವಾರ್ಷಿಕ ವರದಿ, ಸಭೆ ಕುರಿತು ಅವರ ಅನುಮತಿ ಪಡೆಯಲಾಗಿದೆಯೇ ಎಂದು ಪ್ರಶ್ನಿಸಿದರು. ಇದರಿಂದಾಗಿ ಸಭೆಯಲ್ಲಿ ಕೆಲಕಾಲ ಗದ್ದಲ, ಗೊಂದಲದ ವಾತಾವರಣ ನಿರ್ಮಾಣವಾಯಿತು. ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು.