ಜಿಲ್ಲಾ ಸಾಹಿತ್ಯ ಸಮ್ಮೇಳನವು ಕನ್ನಡ ನಾಡು, ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಹಿರಿಮೆಯನ್ನು ಸಾರುವ ಮಹತ್ವದ ವೇದಿಕೆಯಾಗಿದೆ.

ಕಾರಟಗಿ: ಕೊಪ್ಪಳ ಜಿಲ್ಲಾ ೧೫ನೇ ಕನ್ನಡ ಸಾಹಿತ್ಯ ಸಮ್ಮೇಳನ ಪಟ್ಟಣದಲ್ಲಿ ನಡೆಯಲಿದ್ದು, ಎಲ್ಲರೂ ಸೇರಿ ನುಡಿಜಾತ್ರೆಯನ್ನು ಯಶಸ್ವಿಗೊಳಿಸೋಣ. ಎಲ್ಲ ಸಂಘ-ಸಂಸ್ಥೆಗಳು, ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಒಗ್ಗಟ್ಟಿನಿಂದ ಕೈಜೋಡಿಸಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್‌ಪಾಟೀಲ್ ಮತ್ತು ತಾಲೂಕು ಅಧ್ಯಕ್ಷ ಶರಣಪ್ಪ ಕೋಟ್ಯಾಳ ಮನವಿ ಮಾಡಿದರು.

ಇಲ್ಲಿನ ಕೆಪಿಎಸ್ ಪಬ್ಲಿಕ್ ಸ್ಕೂಲ್‌ನ ಸಿದ್ದೇಶ್ವರ ರಂಗಮಂದಿರದ ಬಳಿ ಇರುವ ಸಮ್ಮೇಳನ ಕಾರ್ಯಾಲಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲಾ ಸಾಹಿತ್ಯ ಸಮ್ಮೇಳನವು ಕನ್ನಡ ನಾಡು, ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಹಿರಿಮೆಯನ್ನು ಸಾರುವ ಮಹತ್ವದ ವೇದಿಕೆಯಾಗಿದೆ. ಪಟ್ಟಣದಲ್ಲಿ ನಡೆಯುತ್ತಿರುವ ಈ ಸಾಹಿತ್ಯ ಹಬ್ಬವನ್ನು ಎಲ್ಲರೂ ತಮ್ಮ ಮನೆಯ ಕಾರ್ಯಕ್ರಮವೆಂದು ಭಾವಿಸಿ, ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕು. ಸಮ್ಮೇಳನದ ಪ್ರತಿಯೊಂದು ಕಾರ್ಯದಲ್ಲೂ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದರು.

ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಕನ್ನಡಾಭಿಮಾನಿಗಳು ಸಮ್ಮೇಳನದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಒಕ್ಕೊರಲಿನಿಂದ ಬೆಂಬಲ ವ್ಯಕ್ತಪಡಿಸಿದರು.

ಹಳೇ ಬಾಕಿ ಪಾವತಿಸಿ: 21 ವರ್ಷಗಳ ಹಿಂದೆ ಕಾರಟಗಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೆಲವು ಬಿಲ್‌ಗಳಿಗೆ ಇನ್ನೂ ಹಣ ಪಾವತಿಸಿಲ್ಲ. ಶಾಮಿಯಾನ, ಸೌಂಡ್ ಸಿಸ್ಟಮ್‌, ಆಮಂತ್ರಣ ಮುದ್ರಣದ ಹಣ ನೀಡಿಲ್ಲ. ಇದಕ್ಕೆ ಯಾರು ಹೊಣೆ? ಪರಿಷತ್‌ಗೆ ಹಲವು ಬಾರಿ ತಿಳಿಸಿದರೂ ನಿರ್ಲಕ್ಷ್ಯ ಧೋರಣೆ ಅನುಸರಿಸಿದೆ. ಕನ್ನಡ ಪರಿಷತ್‌ನ ಜಿಲ್ಲಾ ಅಥವಾ ತಾಲೂಕು ಸಮಿತಿ ಈ ಕುರಿತ ಸಮಸ್ಯೆ ನಿವಾರಿಸಿ, ಇಲ್ಲವಾದರೆ ಈ ಸಮ್ಮೇಳನದ ಉದ್ಘಾಟನೆ ವೇಳೆ ಕಪ್ಪು ಬಾವುಟ ತೋರಿಸುವುದಾಗಿ ತಾಲೂಕು ರಚನೆ ಹೋರಾಟ ಸಮಿತಿ ಕಾರ್ಯದರ್ಶಿ ಪ್ರಹ್ಲಾದ ಜೋಷಿ ಎಚ್ಚರಿಸಿದರು.

೨೧ ವರ್ಷಗಳ ಹಿಂದೆ ಪಟ್ಟಣದಲ್ಲಿ ನಡೆದ ಜಿಲ್ಲಾ ಸಮ್ಮೇಳನದಲ್ಲಿ ಇನ್ನೂ ಕೆಲ ಬಿಲ್‌ಗಳಿಗೆ ಹಣ ಪಾವತಿಸಿಲ್ಲ. ಈ ಸಮ್ಮೇಳನಕ್ಕಾಗಿ ಅಂದು ಅಧ್ಯಕ್ಷರು ಜಿಲ್ಲೆಯ ಬೇರೆ ಬೇರೆ ಕಡೆ ವಂತಿಗೆ ಸಂಗ್ರಹಿಸಿದ್ದಾರೆ ಎಂದರು.

ಹಣ ಖರ್ಚಾಗಿದೆ: ೨೧ ವರ್ಷಗಳ ಹಿಂದೆ ಕಾರಟಗಿಯಲ್ಲಿ ನಡೆದ ಜಿಲ್ಲಾ ಸಮ್ಮೇಳನದ ವೇಳೆ ಪರಿಷತ್‌ಗೆ ಗಂಗಾವತಿ ತಾಲೂಕು ಅಧ್ಯಕ್ಷನಾಗಿ ನಾವು ಸರಿಸುಮಾರು ₹೧.೫೦ ಲಕ್ಷ ವೆಚ್ಚ ಮಾಡಿದೆ. ಆ ಹಣವೂ ನನಗೆ ಯಾರೂ ಭರಿಸಿಲ್ಲ ಎಂದು ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಅಮರೇಶ ಮೈಲಾಪುರ ಹೇಳಿದರು.

ಸಮ್ಮೇಳನಗಳನ್ನು ನಡೆಸಿ, ಸಾರ್ವಜನಿಕ ವಂತಿಗೆ ಸಂಗ್ರಹಿಸಿ, ಲೆಕ್ಕಪತ್ರಗಳನ್ನು ಕೊಡದೆ ಹೋಗುವುದು ಸರಿಯಾದ ಕ್ರಮವಲ್ಲ. ಈ ಬಾರಿ ಸಮ್ಮೇಳನ ಮುಗಿದ ಒಂದು ತಿಂಗಳೊಳಗೆ ಎಲ್ಲ ಲೆಕ್ಕಪತ್ರಗಳನ್ನು ನಿಖರವಾಗಿ ಸಾರ್ವಜನಿಕರಿಗೆ ಅರ್ಪಿಸುವುದಾಗಿ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್‌ಪಾಟೀಲ್ ಹೇಳಿದರು.

ರುದ್ರೇಶ್ ಆರಾಳ, ಚನ್ನಬಸಪ್ಪ ವಕ್ಕಳದ, ಹಿರೇಮಠದ ಮರುಳಸಿದ್ದಯ್ಯ ಸ್ವಾಮಿ, ಬಸವರಾಜ ಪಗಡದಿನ್ನಿ, ಬಸವರಾಜ ಶೆಟ್ಟರ್, ಹನುಮಂತಪ್ಪ ತೊಂಡಿಹಾಳ, ಪಾಲಾಕ್ಷಪ್ಪ ಕೆಂಡದ, ಅಣ್ಣಪ್ಪ ಸಂಗನಾಳ, ಮರಿಯಪ್ಪ ಸಾಲೋಣಿ, ಯಲ್ಲಪ್ಪ ಕಟ್ಟಿಮನಿ, ವಿಜಯಲಕ್ಷ್ಮಿ ಮೇಲಿನಮನಿ, ಡಾ. ಶಿಲ್ಪಾ ದಿವಟರ್, ಶಿವಲೀಲಾ ಅಯೋಧ್ಯ, ಶಿಲ್ಪಾ ಮರದ, ನೇತ್ರಾ ಪ್ರಭು, ಸುಮಾ ಅರಳಿ, ಶರಣಪ್ಪ ಉಪನಾಳ, ಸಿದ್ದಯ್ಯ ಸ್ವಾಮಿ ಮಳಿಮಠ, ಸುರೇಶ ಗೋನಾಳ, ರೇವಣಸಿದ್ಧಪ್ಪ ಕೊಲ್ಕಾರ್, ರಮೇಶ್ ಬನ್ನಿಕೊಪ್ಪ, ಮಹಿಬೂಬ್ ಕಿಲ್ಲೆದಾರ್, ಮಂಜುನಾಥ ಚಿಕೇನಕೊಪ್ಪ, ಬಸವರಾಜ ವಡಕಣ್ಣನವರ್, ಮಲ್ಲಿಕಾರ್ಜುನ ಯತ್ನಟ್ಟಿ, ಅಲಿ ಹುಸೇನ್, ಹುಲಗಪ್ಪ ದಿಡ್ಡಿಮನಿ, ಖಾಜಾವಲಿ, ರಾಮು ನಾಯಕ ಉಪಸ್ಥಿತರಿದ್ದರು.