ಸುಂದರ, ಸ್ವಚ್ಛ ಕಂಪ್ಲಿ ನಿರ್ಮಾಣಕ್ಕೆ ಕೈ ಜೋಡಿಸಿ: ಭಟ್ಟ ಪ್ರಸಾದ್

| Published : Aug 04 2025, 12:30 AM IST

ಸಾರಾಂಶ

ಸುಂದರ ಹಾಗೂ ಸ್ವಚ್ಛ ಕಂಪ್ಲಿ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ

ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಪುರಸಭೆ ಅಧ್ಯಕ್ಷ ಚಾಲನೆ

ಕನ್ನಡಪ್ರಭ ವಾರ್ತೆ ಕಂಪ್ಲಿಸುಂದರ ಹಾಗೂ ಸ್ವಚ್ಛ ಕಂಪ್ಲಿ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ತಿಳಿಸಿದರು.ಪಟ್ಟಣದ ಸತ್ಯನಾರಾಯಣಪೇಟೆ, ಚಪ್ಪಗಸಿ ಮಾರೆಮ್ಮ ಗುಡಿ ಬಳಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ತಿಪ್ಪೆ ಕಸ ಹಾಕುವುದನ್ನು ತಪ್ಪಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಎಲ್ಲಿ ಬೇಕೆಂದರಲ್ಲಿ ಕಸ ಬಿಸಾಡುವುದರಿಂದ ಪಟ್ಟಣದ ಸೌಂದರ್ಯ ಹದೆಗೆಡುತ್ತಿದೆ. ಅಲ್ಲದೇ ನಾನಾ ಕಾಯಿಲೆಗಳನ್ನು ಹರಡುವ ಕೀಟಾಣುಗಳಿಗೆ ಪೂರಕ ವಾತಾವರಣ ಒದಗಿಸುತ್ತದೆ. ಇದರಿಂದ ಜನತೆಯ ಆರೋಗ್ಯ ಹದೆಗೆಡುವ ಸಾಧ್ಯತೆ ಇದೆ. ಪಟ್ಟಣದಲ್ಲಿ ಉತ್ತಮ ವಾತಾವರಣ ಕಾಪಾಡಲು ಹಾಗೂ ಯಾವುದೇ ರೋಗ ರುಜಿನೆಗಳು ಬಾರದಂತೆ ತಡೆಗಟ್ಟಲು ಸ್ವಚ್ಛತೆ ಅತಿ ಮುಖ್ಯ. ಹೀಗಾಗಿ ಕಂಪ್ಲಿಯನ್ನು ತಿಪ್ಪೆಕಸ ಮುಕ್ತ ಪಟ್ಟಣವನ್ನಾಗಿ ರೂಪಿಸಲು ಸಾರ್ವಜನಿಕರು ಕೈಜೋಡಿಸಿ ಸಹಕರಿಸಬೇಕು ಎಂದರು.

ಪ್ರಭಾರ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಮಾತನಾಡಿ, ಪಟ್ಟಣದ 14 ಕಡೆಗಳಲ್ಲಿ ಸಾರ್ವಜನಿಕರು ತಿಪ್ಪೆಕಸ ಎಸೆಯುತ್ತಿದ್ದು ಇದರಿಂದಾಗಿ ಪಟ್ಟಣದ ಸೌಂದರ್ಯ ದಿನದಿಂದ ದಿನಕ್ಕೆ ಹದೆಗೆಡುತ್ತಿದೆ. ಮನೆಯಲ್ಲಿಯೇ ಹಸಿ ಕಸ, ಒಣ ಕಸವನ್ನು ಬೇರ್ಪಡಿಸಿ, ಕಸ ಸಂಗ್ರಹಿಸುವ ಬರುವ ವಾಹನದಲ್ಲಿಯೇ ಹಾಕಬೇಕು. ತಿಪ್ಪೆಗೆ ಕಸ ಹಾಕಬಾರದು. ಎಲ್ಲೆಂದರಲ್ಲೆ ಕಸ ಎಸೆಯುವವರಿಗೆ, ತಿಪ್ಪೆಗೆ ಕಸ ಹಾಕುವವರಿಗೆ ದಂಡ ಹಾಕಲಾಗುವುದು. ತಿಪ್ಪೆಗೆ ಕಸ ಹಾಕುವುದನ್ನು ತಪ್ಪಿಸಲು ತಿಪ್ಪೆಸ್ಥಳವನ್ನು ಸೆಗಣಿಯಿಂದ ಸಾರಿಸಿ ರಂಗೋಲಿ ಹಾಕಿ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುತ್ತಿದೆ ಎಂದರು.ಈ ಸಂದರ್ಭ ಪುರಸಭೆ ಸದಸ್ಯ ಟಿ.ವಿ. ಸುದರ್ಶನರೆಡ್ಡಿ, ವೀರಾಂಜನೇಯಲು, ಪ್ರಮುಖರಾದ ವಿ.ವಿದ್ಯಾಧರ, ಜಿ.ಸುಧಾಕರ, ಕೆ.ವಿಷ್ಣು, ಸತ್ಯನಾರಾಯಣಶ್ರೇಷ್ಠಿ, ಸ್ವಸಹಾಯ ಗುಂಪಿನ ಸದಸ್ಯೆಯರಿದ್ದರು.