ಹೊಸಪೇಟೆ: ಬಾಲ ಕಾರ್ಮಿಕ ಮುಕ್ತ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಹೇಳಿದರು.

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಬಡತನವಿದ್ದರೂ ಅದನ್ನು ಹೋಗಲಾಡಿಸಲು ಸರ್ಕಾರ ಪಂಚ ಗ್ಯಾರಂಟಿ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೆ ತಂದಿದೆ. ಹೀಗಿದ್ದೂ ಬಡತನದ ನೆಪವೊಡ್ಡಿ ಮಕ್ಕಳನ್ನು ಶಾಲೆಗೆ ಕಳುಹಿಸದೇ ಬಾಲಕಾರ್ಮಿಕರನ್ನಾಗಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಪ್ರತಿಯೊಬ್ಬರು ಕೈಜೋಡಿಸಿದರೆ ಮಾತ್ರ ಬಾಲಕಾರ್ಮಿಕ ಮುಕ್ತ ಸಮಾಜ ರೂಪಿಸಲು ಸಾಧ್ಯವಾಗಲಿದೆ ಎಂದರು.

ದೇಶದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ 1986 ರಲ್ಲೇ ಬಾಲಕಾರ್ಮಿಕ ವಿರೋಧಿ ಕಾಯ್ದೆ ತರಲಾಗಿದ್ದು, ಕಾಲಕಾಲಕ್ಕೆ ತಿದ್ದುಪಡಿಗಳ ಮೂಲಕ ಇದನ್ನು ಮತ್ತಷ್ಟು ಬಲಪಡಿಸಲಾಗಿದೆ. ಕಾಯ್ದೆಯನ್ವಯ ಮಕ್ಕಳನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಮೊದಲ ಬಾರಿಗೆ ಅಪರಾಧ ಎಸಗಿದರೆ 6 ತಿಂಗಳಿಂದ 2 ವರ್ಷಗಳವರೆಗೆ ಜೈಲು ವಾಸ. ಅದೇ ತಪ್ಪನ್ನು ಪುನರಾವರ್ತಿಸಿದರೆ 2 ವರ್ಷದಿಂದ 3 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದರು.

ಈ ವರ್ಷದ ಘೋಷವಾಕ್ಯವಾದ “ಮಕ್ಕಳ ಕಾರ್ಮಿಕತೆಗೆ ರೆಡ್ ಕಾರ್ಡ್ ತೋರಿಸಿ, ಮಕ್ಕಳಿಗೆ ನ್ಯಾಯಯುತ ಬಾಲ್ಯ, ವಯಸ್ಕರಿಗೆ ಘನತೆಯ ಉದ್ಯೋಗ” ಎಂಬುದನ್ನು ಕೇವಲ ಮಾತಿಗೆ ಸೀಮಿತಗೊಳಿಸದೆ, ಪ್ರಾಯೋಗಿಕವಾಗಿ ಜಾರಿಗೆ ತರಬೇಕಿದೆ. ಯಾವುದೇ ಅಪಾಯಕಾರಿ ಉದ್ಯಮ, ಹೋಟೆಲ್ ಅಥವಾ ಸಂಸ್ಥೆಗಳು ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳಬಾರದು. ಮಕ್ಕಳ ಭವಿಷ್ಯ ರೂಪಿಸಲು ಶಿಕ್ಷಣವೇ ಏಕೈಕ ಅಸ್ತ್ರ. ನಾವೆಲ್ಲರೂ ಬಾಲ್ಯದಲ್ಲಿದ್ದಾಗ ನಮ್ಮೊಂದಿಗೆ ಓದಬೇಕಿದ್ದ ಎಷ್ಟೋ ಗೆಳೆಯರು ಶಿಕ್ಷಣದಿಂದ ವಂಚಿತರಾಗಿ ಬಾಲಕಾರ್ಮಿಕರಾಗಿರುವುದು ಕಂಡಿದ್ದೇವೆ. ಅಂತಹ ಪರಿಸ್ಥಿತಿ ಇಂದಿನ ಮಕ್ಕಳಿಗೆ ಬರಬಾರದು ಎಂದು ಆಶಯ ವ್ಯಕ್ತಪಡಿಸಿದ ಅವರು, ಮಕ್ಕಳ ಹಕ್ಕುಗಳ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸುವುದು ಮತ್ತು ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಹೇಳಿದರು.

ತಮ್ಮ ವ್ಯಾಪ್ತಿಯಲ್ಲಿನ ಹೋಟೆಲ್, ಗ್ಯಾರೇಜ್ ಅಥವಾ ಇನ್ಯಾವುದೇ ಕಡೆಗಳಲ್ಲಿ ಮಕ್ಕಳು ಕಾರ್ಮಿಕರಾಗಿ ಕೆಲಸ ಮಾಡುತ್ತಿರುವುದು ಕಂಡುಬಂದಲ್ಲಿ ತಕ್ಷಣವೇ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಕರೆ ಮಾಡಿ ಮಾಹಿತಿ ನೀಡಬಹುದು. ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುವುದು ಮತ್ತು ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ಮಕ್ಕಳಿಗೆ ಸೂಕ್ತ ಪುನರ್ವಸತಿ ಕಲ್ಪಿಸಲಿದ್ದಾರೆ ಎಂದು ಹೇಳಿದರು.


ಬಾಲ ಕಾರ್ಮಿಕ ಮುಕ್ತ ಸಮಾಜ ಕೇವಲ ಸರ್ಕಾರದ ವ್ಯವಸ್ಥೆಯಿಂದ ಮಾತ್ರ ತಡೆಯಲು ಸಾಧ್ಯವಿಲ್ಲ. ಮಕ್ಕಳ ಭವಿಷ್ಯವನ್ನು ಕತ್ತಲೆಗೆ ತಳ್ಳುತ್ತಿರುವ ಬಾಲಕಾರ್ಮಿಕ ಪದ್ಧತಿ ಹೋಗಲಾಡಿಸಲು ಪಾಲಕರು, ಅಧಿಕಾರಿಗಳು, ನ್ಯಾಯಾಂಗ ವ್ಯವಸ್ಥೆ, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು. ಜಾಗೃತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಇಡೀ ಸಮಾಜ ಒಟ್ಟಾಗಿ ನಿಂತು ಬಾಲಕಾರ್ಮಿಕ ಪದ್ಧತಿಗೆ ರೆಡ್ ಕಾರ್ಡ್ ತೋರಿಸುವ ಮೂಲಕ ಆ ಮುಗ್ಧ ಮಕ್ಕಳ ಉಜ್ವಲ ಭವಿಷ್ಯಕ್ಕೆ ಮುನ್ನುಡಿ ಬರೆಯಬೇಕಿದೆ ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಸೂರ್ಯಪ್ಪ ಡೊಂಬರಮತ್ತೂರ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.

ಈ ವೇಳೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಗಂಗಪ್ಪ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಸುದೀಪ್ ಕುಮಾರ್ ಉಂಕಿ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾಪತಿ, ಕಾರ್ಮಿಕ ನಿರೀಕ್ಷಕರಾದ ಜಿ.ಬಿ.ದೂಪದ್, ಶಿವಶಂಕರ್ ಬಿ ತಳವಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.