ಸಾರಾಂಶ
ಹೊಸಪೇಟೆ: ದೇವದಾಸಿ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕು. ವಿಜಯನಗರ ಜಿಲ್ಲೆಯಲ್ಲೇ 10 ಸಾವಿರ ದೇವದಾಸಿ ತಾಯಂದಿರು ಇದ್ದಾರೆ ಎಂಬ ಮಾಹಿತಿ ಕೇಳಿ ನಾನು ದಿಗ್ಭ್ರಮೆಗೊಂಡಿರುವೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.ನಗರದ ಕ್ರೀಡಾಂಗಣ ಸಭಾಂಗಣದಲ್ಲಿ ಬುಧವಾರ ನಡೆದ ಸಖಿ ಟ್ರಸ್ ಆಯೋಜಿಸಿದ್ದ ದೇವದಾಸಿ ತಾಯಂದಿರ ಮತ್ತು ಮಕ್ಕಳ ಘನತೆ ಮತ್ತು ಸುಸ್ಥಿರತೆಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ದೇವದಾಸಿ ತಾಯಂದಿರು ಸಾಕ್ಷರತೆಯಲ್ಲಿ ತೀರಾ ಹಿಂದುಳಿದಿದ್ದಾರೆ. ದೇಶದಲ್ಲಿ ಹೆಣ್ಣುಮಕ್ಕಳನ್ನು ಗೌರವದಿಂದ ಕಾಣಬೇಕು. ಸಖಿ ಸಂಸ್ಥೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ದೇವದಾಸಿ ಮಕ್ಕಳು ಅವಮಾನಕ್ಕೆ ಹಿಂಜರಿಯದೆ ಮುನ್ನುಗ್ಗಿ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಮೀಸಲಾತಿ ಸೌಲಭ್ಯ ಪಡೆದುಕೊಂಡು ಉದ್ಯೋಗ ಪಡೆದು, ಬದಲಾವಣೆ ಕಾಣಬೇಕು. ಇದಕ್ಕೆ ಜಿಲ್ಲಾಡಳಿತ ಬೆಂಬಲವಾಗಿ ನಿಲ್ಲುತ್ತದೆ ಎಂದರು.
ಎಸ್ಪಿ ಬಿ.ಎಲ್. ಶ್ರೀಹರಿಬಾಬು ಮಾತನಾಡಿ, ದೇವದಾಸಿ ಪದ್ದತಿ ಇನ್ನು ಜೀವಂತವಾಗಿದೆ. ಕೆಲ ಇಲಾಖೆಗಳ ನಿರ್ಲಕ್ಷ್ಯವೇ ಎದ್ದುಕಾಣುತ್ತದೆ. ದೇವದಾಸಿಯರಿಗೆ ಕಾನೂನು ನೆರವು ಬೇಕು. ಇಂತಹ ಕಾರ್ಯಕ್ರಮಗಳು ನಡೆಸಿ ದೇವದಾಸಿ ಅನಿಷ್ಟ ಪದ್ದತಿ ಎಂದು ಜಾಗೃತಿ ಮೂಡಿಸಬೇಕಿದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳು ಎಲ್ಲಾ ತಾಯಂದಿರಿಗೂ ಮತ್ತು ಮಕ್ಕಳಿಗೆ ಸಿಗಬೇಕು. ಪೊಲೀಸ್ ಇಲಾಖೆಯಿಂದ ನೆರವು ನೀಡಲಾಗುವುದು ಎಂದರು.ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್‌ನ ಡಾ. ಆರ್.ವಿ. ಚಂದ್ರಶೇಖರ ಮಾತನಾಡಿ, ದೇವದಾಸಿ ಪದ್ಧತಿ ನಿರ್ಮೂಲನೆ ಮಾಡಲು ಮೊದಲು ನಾವು ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜೊತೆಗೆ ಬೇರೆಯವರನ್ನು ಪಾಲ್ಗೊಳ್ಳುವಂತೆ ಮಾಡುವುದು ತುಂಬ ಮುಖ್ಯ. ದೇವದಾಸಿ ಪದ್ಧತಿ ನಿರ್ಮೂಲನೆಗೆ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ನಾವು ದೇವರು, ಪೂಜೆ ಎಂದು ಹಲವಾರು ಕಾರ್ಯಕ್ರಮಗಳಿಗೆ ಹಣವನ್ನು ಖರ್ಚು ಮಾಡುತ್ತಿದ್ದೇವೆ. ಹಾಗಾಗಿ ಇಂತಹ ಕಾರ್ಯಕ್ರಮಗಳಿಗೆ ಹಣವನ್ನು ಬಳಸದೆ ಮಕ್ಕಳ ಶಿಕ್ಷಣಕ್ಕೆ ಹಣವನ್ನು ಖರ್ಚು ಮಾಡುವುದು ಅಮೂಲ್ಯವಾದುದಾಗಿದೆ. ದೇವದಾಸಿ ತಾಯಂದಿರ ಮಕ್ಕಳು ಶಿಕ್ಷಣ ಪಡೆದು, ಕೌಶಲ್ಯ ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿಆರು ತಾಲೂಕಿನ ದೇವದಾಸಿ ತಾಯಂದಿರ ಮತ್ತು ಮಕ್ಕಳಿಗೆ ಹೊಲಿಗೆ ತರಬೇತಿ ಯಂತ್ರ ಮತ್ತು ಸರ್ಟಿಫಿಕೇಟ್ ಹಾಗೂ ಯುವಜನರಿಗೆ ಶೈಕ್ಷಣಿಕ ಧನಸಹಾಯ ಚೆಕ್ ವಿತರಿಸಲಾಯಿತು.ನಿರ್ದೇಶಕಿ ಡಾ.ಎಂ.ಭಾಗ್ಯಲಕ್ಷ್ಮಿ, ಶಿಕ್ಷಕಿ ಅಂಜಿನಮ್ಮ, ಕಾಮಾಕ್ಷಿ, ಮಂಜುಳಾ ಮಾಳಗಿ, ಗಂಗಮ್ಮಇತರರಿದ್ದರು.ಹೊಸಪೇಟೆಯ ಕ್ರೀಡಾಂಗಣ ಸಭಾಂಗಣದಲ್ಲಿ ಬುಧವಾರ ನಡೆದ ದೇವದಾಸಿ ತಾಯಂದಿರ ಮತ್ತು ಮಕ್ಕಳ ಘನತೆ ಮತ್ತು ಸುಸ್ಥಿರತೆಯ ಸಮಾವೇಶ ಉದ್ಘಾಟಿಸಿ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮಾತನಾಡಿದರು.