ಸಾರಾಂಶ
ಕಂಪ್ಲಿಯಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯಲ್ಲಿ ಜೂಗಲ ಮಂಜುನಾಯಕ
ಕನ್ನಡಪ್ರಭ ವಾರ್ತೆ ಕಂಪ್ಲಿಸಮಾಜದ ಅನಿಷ್ಟ ಪದ್ಧತಿಗಳಾಗಿರುವ ಬಾಲಕಾರ್ಮಿಕ ಹಾಗೂ ಬಾಲ್ಯವಿವಾಹವನ್ನು ತಳಮಟ್ಟದಿಂದಲೇ ನಿರ್ಮೂಲನೆ ಮಾಡಲು ಪ್ರತಿಯೊಬ್ಬ ನಾಗರಿಕ ಕೈಜೋಡಿಸಬೇಕು ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ಹೇಳಿದರು.
ಪಟ್ಟಣದ ವಿಜಯನಗರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಭಾಂಗಣದಲ್ಲಿ ತಾಲೂಕು ಆಡಳಿತ, ಬಾಲಕಾರ್ಮಿಕ ಸೇರಿ ನಾನಾ ಇಲಾಖೆಗಳ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಸಮಾಜದಲ್ಲಿ ಬಾಲಕಾರ್ಮಿಕ ಪದ್ಧತಿ ಹಾಗೂ ಬಾಲ್ಯವಿವಾಹವು ಅನಿಷ್ಟ ಪದ್ಧತಿಯಾಗಿದೆ. ಅದರಿಂದ ಮಕ್ಕಳು ಬಾಲ್ಯಾವಸ್ಥೆ ಸವಿಯುವುದರಿಂದ ವಂಚಿತರಾಗುವ ಜತೆಗೆ ಶಿಕ್ಷಣದಿಂದಲೂ ವಂಚಿತರಾಗುತ್ತಾರೆ. ಒತ್ತಾಯಪೂರ್ವಕವಾಗಿ ಮಕ್ಕಳು ದುಡಿಮೆಗಳಲ್ಲಿ ತೊಡಗಿಕೊಳ್ಳುವುದರಿಂದ ಅವರ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಕುಂಠಿತವಾಗುವ ಜತೆಗೆ ಮಗು ಅನೇಕ ಪರಿಣಾಮವನ್ನು ಎದುರಿಸಿ, ಮುಂದೆ ಸಮಾಜಘಾತುಕ ವ್ಯಕ್ತಿಯಾಗಿ ಬದಲಾಗುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ಇದಕ್ಕೆ ಅವಕಾಶ ಕಲ್ಪಿಸಬಾರದು ಎಂದರು.ಹದಿನಾಲ್ಕು ವರ್ಷದೊಳಗಿನ ಮಕ್ಕಳನ್ನು ಯಾವುದೇ ಕೆಲಸದಲ್ಲಿ ನೇಮಿಸಿಕೊಳ್ಳುವಂತಿಲ್ಲ. 14ರಿಂದ 18 ವರ್ಷದೊಳಗಿನ ಕಿಶೋರ ಕಾರ್ಮಿಕರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ತೊಡಗಿಸಿಕೊಳ್ಳುವಂತಿಲ್ಲ ಎಂದು ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆಯಲ್ಲಿ ನಿಯಮವಿದೆ. ಇದನ್ನು ಗಮನಿಸದೆ ಕೆಲವರು ಮಕ್ಕಳನ್ನು ನಿಯೋಜಿಸಿಕೊಳ್ಳುತ್ತಾರೆ. ಇಂಥ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಮಾಲೀಕರನ್ನು ಹಾಗೂ ಮಕ್ಕಳ ಪೋಷಕರನ್ನು ಸಹ ಶಿಕ್ಷಿಸಲು ಕಾನೂನಿನಲ್ಲಿ ಅವಕಾಶಗಳಿವೆ. ಇದನ್ನು ಅರಿತು ಪ್ರತಿಯೊಬ್ಬರೂ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಹಕರಿಸಬೇಕು ಎಂದರು.
ವಿಜಯನಗರ ಆಂಗ್ಲಮಾಧ್ಯಮ ಪ್ರೌಢಶಾಲೆ ಶಿಕ್ಷಕ ಸುನೀಲ್ ಮಾಲಿಪಾಟೀಲ್ ಬಾಲ ಕಾರ್ಮಿಕತೆ ಕುರಿತು ಮಾತನಾಡಿ, 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಅಪರಾಧವಾಗಿದೆ. 18 ವರ್ಷದೊಳಗಿನ ಮಕ್ಕಳು ಶಾಲೆಯಲ್ಲಿರಬೇಕು. ಮಕ್ಕಳಿಗೆ ಬದುಕುವ, ರಕ್ಷಣೆ, ಭಾಗವಹಿಸುವಿಕೆ ಹಾಗೂ ವಿಕಾಸದ ಹಕ್ಕು ನೀಡಲಾಗಿದೆ. ಮಕ್ಕಳಿಗೆ ಎಲ್ಲ ಹಕ್ಕುಗಳು ದೊರೆತಾಗ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ. ಮಕ್ಕಳ ಮೇಲೆ ದೌರ್ಜನ್ಯ ನಡೆದಾಗ, ಕಾಣೆಯಾದ ಹಾಗೂ ಶಾಲೆಯಿಂದ ಹೊರಗಳಿದ ಮಕ್ಕಳು ಕಂಡುಬಂದಲ್ಲಿ ಕೂಡಲೇ ಮಕ್ಕಳ ಸಹಾಯವಾಣಿ ಸಂಖ್ಯೆ 1098ಗೆ ಕರೆಮಾಡಿ ಮಾಹಿತಿ ನೀಡಿದರೆ, ಅಂತಹ ಮಕ್ಕಳ ಸಮಸ್ಯೆ ಪರಿಹರಿಸುವ ಮೂಲಕ ಪುನರ್ವಸತಿ ಕಲ್ಪಿಸಲು ಅಧಿಕಾರಿಗಳು ಮುಂದಾಗುತ್ತಾರೆ. ಮಕ್ಕಳ ಸಹಾಯವಾಣಿ ದಿನದ 24 ಗಂಟೆಯು ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು. ಅಲ್ಲದೇ ಮಕ್ಕಳ ಹಕ್ಕುಗಳ ಕುರಿತು ಸಮಗ್ರ ಮಾಹಿತಿ ನೀಡಿದರು.ತಾಪಂ ಇಒ ಆರ್.ಕೆ. ಶ್ರೀಕುಮಾರ ಸಮಾರಂಭಕ್ಕೆ ಚಾಲನೆ ನೀಡಿದರು. ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ, ಅಧಿಕಾರಿಗಳಾದ ಅನಿಲ್‌ಕುಮಾರ್, ಗಂಗಣ್ಣ, ಟಿ.ಎಂ. ಬಸವರಾಜ, ಆರ್.ಪಿ. ಕಟ್ಟಿಮನಿ, ಪಿ. ಬಸವರಾಜ, ಅನುದೀಪ್ ಪೂಜಾರ್, ಕೆಎಸ್‌ಎಸ್‌ವಿಬಿ ಸುಬ್ಬಾರಾವ್, ಲತೀಫಾಬೇಗಂ, ಕೆ. ಶೋಭಾ, ವೈ.ಎಂ. ಜಗದೀಶ ಸೇರಿ ಇತರರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))