ಯಲ್ಲಾಪುರ ತಾಲೂಕಿನ ಘಂಟೆ ಗಣಪತಿ ದೇವಸ್ಥಾನದ ಕ್ರಾಸ್ ಬಳಿ ಇರುವ ಕರಡಿಪಾಲ ಬಳಿ ಮಾಗೋಡಿನ ಇಬ್ಬನಿ ಫೌಂಡೇಷನ್ ಹಾಗೂ ಕಂಚನಳ್ಳಿಯ ಜನಪ್ರಿಯ ಟ್ರಸ್ಟ್ ಸಹಯೋಗದಲ್ಲಿ ಯಕ್ಷ ವೃಕ್ಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಯಲ್ಲಾಪುರ: ಕಲಾ ಸಂಘಟನೆಗಳನ್ನು ಪ್ರೋತ್ಸಾಹಿಸಿ, ಬೆಳೆಸಲು ಎಲ್ಲರೂ ಕೈಜೋಡಿಸಬೇಕು. ಕಲಾಭಿಮಾನಿಗಳು ತಮ್ಮ ದುಡಿಮೆಯಲ್ಲಿ ಸ್ವಲ್ಪ ಭಾಗವನ್ನಾದರೂ ಕಲಾ ಸೇವೆಗೆ ಮೀಸಲಿಟ್ಟರೆ ಕಲೆಯ ಉಳಿವು ಸಾಧ್ಯ ಎಂದು ಹಿರಿಯ ಸಹಕಾರಿ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.

ತಾಲೂಕಿನ ಘಂಟೆ ಗಣಪತಿ ದೇವಸ್ಥಾನದ ಕ್ರಾಸ್ ಬಳಿ ಇರುವ ಕರಡಿಪಾಲ ಬಳಿ ಮಾಗೋಡಿನ ಇಬ್ಬನಿ ಫೌಂಡೇಷನ್ ಹಾಗೂ ಕಂಚನಳ್ಳಿಯ ಜನಪ್ರಿಯ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಯಕ್ಷ ವೃಕ್ಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಬ್ಬನಿ ಮತ್ತು ಜನಪ್ರಿಯ ಸಂಸ್ಥೆಯ ಪ್ರಮುಖರು ವಿವಿಧ ಕಾರಣಗಳಿಗಾಗಿ ಊರಿನಿಂದ ಹೊರಗಿದ್ದರೂ, ಊರ ಮೇಲಿನ ಪ್ರೀತಿ, ಕಲೆಯ ಮೇಲಿನ ಅಭಿಮಾನದಿಂದ ಕಲಾ ಸಂಘಟನೆ ಮಾಡುತ್ತಿರುವುದು ಮಾದರಿಯ ಸಂಗತಿ ಎಂದರು.

ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಸಂಘಟನೆ ಸುಲಭವಲ್ಲ. ಹೊರ ಊರಿನಲ್ಲಿ ನೆಲೆಸಿದ್ದರೂ, ಹುಟ್ಟೂರನ್ನು ಮರೆಯದೇ ಎಲ್ಲರನ್ನೂ ಜೋಡಿಸಿಕೊಂಡು ನಿರಂತರವಾಗಿ ಕಾರ್ಯಕ್ರಮ ಸಂಘಟಿಸುತ್ತಿರುವುದು ಶ್ಲಾಘನೀಯ ಎಂದರು.

ಎಲ್.ಎಸ್.ಎಂ.ಪಿ. ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಭಾಗವತ, ಯಕ್ಷ ಕವಿ ಅನಂತ ಹೆಗಡೆ ದಂತಳಿಗೆ ಹಾಗೂ ಯಕ್ಷಾಭಿಮಾನಿ ಮಹಾಬಲೇಶ್ವರ ಭಟ್ಟ ಹಲಸಿನಬೀಳು ಅವರನ್ನು ಸನ್ಮಾನಿಸಲಾಯಿತು. ಅರ್ಥಧಾರಿ ನರಸಿಂಹ ಭಟ್ಟ ಕುಂಕಿಮನೆ ಅಭಿನಂದನಾ ನುಡಿಗಳನ್ನಾಡಿದರು.

ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಆರ್.ಎಸ್. ಭಟ್ಟ, ಗ್ರಾಪಂ ಸದಸ್ಯ ಟಿ.ಆರ್. ಹೆಗಡೆ, ಪಿಡಿಒ ಪ್ರಭಾಕರ ಭಟ್ಟ, ಪ್ರಮುಖರಾದ ಲಕ್ಷ್ಮೀನಾರಾಯಣ ಭಟ್ಟ ತಾರೀಮಕ್ಕಿ, ವೆಂಕಟರಮಣ ಭಟ್ಟ ಕಿರಕುಂಭತ್ತಿ, ಗಣೇಶ ಭಟ್ಟ ಚಂದಗುಳಿ, ನರಸಿಂಹ ಸಾತೊಡ್ಡಿ, ಇಬ್ಬನಿ ಫೌಂಡೇಷನ್ ಗೌರವಾಧ್ಯಕ್ಷ ನರಸಿಂಹ ಹೆಗಡೆ ಹಾದಿಮನೆ, ಸದಸ್ಯರಾದ ಶ್ರೀನಿವಾಸ ಕೋಡ್ನಗುಡ್ಡೆ, ಗಜಾನನ ಕೋಣೆಮನೆ ಉಪಸ್ಥಿತರಿದ್ದರು.

ಜನಪ್ರಿಯ ಟ್ರಸ್ಟ್ ಅಧ್ಯಕ್ಷ ಮಹೇಶ ಭಟ್ಟ ಕಂಚನಳ್ಳಿ ಸ್ವಾಗತಿಸಿದರು. ಇಬ್ಬನಿ ಫೌಂಡೇಷನ್ ಅಧ್ಯಕ್ಷ ವಿ.ಎನ್. ಹೆಗಡೆ ಹಾದಿಮನೆ ಪ್ರಾಸ್ತಾವಿಕ ಮಾತನಾಡಿದರು. ಸುಬ್ಬಣ್ಣ ಕಂಚಗಲ್, ಶಿವರಾಮ ಭಾಗ್ವತ, ಮಂಜುನಾಥ ಜೋಶಿ ನಿರ್ವಹಿಸಿದರು.

ಆನಂತರ ಪ್ರಸಿದ್ಧ ಕಲಾವಿದರಿಂದ ಶರಸೇತು ಬಂಧನ ಹಾಗೂ ಕಾರ್ತವೀರ್ಯಾರ್ಜುನ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಅನಂತ ಹೆಗಡೆ ದಂತಳಿಗೆ, ರಾಮಕೃಷ್ಣ ಹೆಗಡೆ ಹಿಲ್ಲೂರು, ಪರಮೇಶ್ವರ ಭಂಡಾರಿ ಕರ್ಕಿ, ನರಸಿಂಹ ಭಟ್ಟ ಹಂಡ್ರಮನೆ, ಪ್ರಮೋದ ಹೆಗಡೆ ಕಬ್ಬಿನಗದ್ದೆ, ಗಜಾನನ ಸಾಂತೂರು ಭಾಗವಹಿಸಿದ್ದರು.

ಸುಬ್ರಹ್ಮಣ್ಯ ಚಿಟ್ಟಾಣಿ, ವಿದ್ಯಾಧರ ಜಲವಳ್ಳಿ, ಕೆ.ಜಿ. ಮಂಜುನಾಥ ಪುರಪ್ಪೆಮನೆ, ಸದಾಶಿವ ಭಟ್ಟ ಮಲವಳ್ಳಿ, ನಾಗೇಂದ್ರ ಭಟ್ಟ ಮೂರೂರು, ವಿನಯ ಭಟ್ಟ ಬೇರೊಳ್ಳಿ, ದೀಪಕ ಭಟ್ಟ ಕುಂಕಿ, ಶಿವರಾಮ ಭಾಗ್ವತ ಮಣ್ಕುಳಿ, ಶ್ರೀಧರ ಭಟ್ಟ ಅಣಲಗಾರ, ವೆಂಕಟರಮಣ ಕವಡಿಕೆರೆ ಪಾತ್ರ ನಿರ್ವಹಿಸಿದರು.