ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ 120 ಮೈಕ್ರಾನ್ ಗಿಂತ ಕಡಿಮೆ ಗಾತ್ರದ ಎಲ್ಲಾ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಮಾರಾಟ, ಸಂಗ್ರಹಣೆ, ವಿತರಣೆ ಮತ್ತು ಬಳಕೆಯನ್ನು ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ನಿಷೇಧಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕುಶಾಲನಗರ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ತಿಳಿಸಿದ್ದಾರೆ. ಅವರು ಕುಶಾಲನಗರ ಪುರಸಭೆ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಅ. 2 ರಿಂದ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಪ್ಲಾಸ್ಟಿಕ್ ತ್ಯಜಿಸುವುದರೊಂದಿಗೆ ಕುಶಾಲನಗರ ಪಟ್ಟಣವನ್ನು ಸ್ವಚ್ಛ ಪಟ್ಟಣವಾಗಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು. ಈ ಸಂದರ್ಭ ಮಾತನಾಡಿದ ಪುರಸಭೆ ಮುಖ್ಯ ಅಧಿಕಾರಿ ಟಿ ಎಸ್ ಗಿರೀಶ್, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧಿಸುವ ಕುರಿತು ಈಗಾಗಲೇ ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗಿದ್ದು ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಜಾಗೃತಿ ಮೂಡಿಸುವ ಕೆಲಸ ನಡೆಯಲಿದೆ. ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವ ನಿಟ್ಟಿನಲ್ಲಿ ಸ್ಥಳೀಯ ವರ್ತಕರು ಮತ್ತು ಗ್ರಾಹಕರು ಸಂಪೂರ್ಣ ಸಹಕರಿಸಬೇಕು ಎಂದು ಕೋರಿದರು. ಪರ್ಯಾಯವಾಗಿ ಬಟ್ಟೆ ಬ್ಯಾಗ್ ಬಳಸುವ ಮೂಲಕ ನದಿ ಪರಿಸರ ಮಾಲಿನ್ಯ ತಡೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು. ಎರಡು ಲೀಟರ್ ಗಾತ್ರದ ಪ್ಲಾಸ್ಟಿಕ್ ಬಾಟಲ್ ಗಿಂತ ಕಡಿಮೆ ಪ್ರಮಾಣದ ನೀರಿನ ಬಾಟಲ್ ನಿಷೇಧಕ್ಕೆ ಚಿಂತನೆ ಹರಿಸಲಾಗಿದೆ, ಈ ಮೂಲಕ ತ್ಯಾಜ್ಯ ಪ್ರಮಾಣ ಕಡಿಮೆ ಆಗಲು ಸಾಧ್ಯ ಎಂದು ಹೇಳಿದರು. ನಿಷೇಧಿತ ಪ್ಲಾಸ್ಟಿಕ್ ಸಾಮಗ್ರಿಗಳ ಅಕ್ರಮ ಮಾರಾಟ ದಾಸ್ತಾನು ಸಂಗ್ರಹಣೆ ಮತ್ತು ಬಳಕೆ ಕುರಿತಂತೆ ಕಂಡುಬಂದಲ್ಲಿ ದಂಡ ವಿಧಿಸಲಾಗುವುದು. ಅಪರಾಧಗಳು ಮರುಕಳಿಸಿದಲ್ಲಿ ಉದ್ದಿಮೆ ಪರವಾನಿಗೆಯನ್ನು ರದ್ದುಗೊಳಿಸುವುದು ಮತ್ತು ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ ಬಿ ಸುರೇಶ್ ಮಾತನಾಡಿ ಪ್ಲಾಸ್ಟಿಕ್ ಮುಕ್ತ ಪಟ್ಟಣಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು. ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಕೆ ಎಸ್ ನಾಗೇಶ್ ಪುರಸಭೆಯ ಈ ನಿರ್ಧಾರ ಸ್ವಾಗತ ಎಂದರಲ್ಲದೆ ಪ್ರತಿಯೊಬ್ಬರು ಸ್ವಯಂಪ್ರೇರಿತರಾಗಿ ನಿಯಮ ಪಾಲಿಸಬೇಕು ಎಂದರು.ಸಭೆ ಸಮಾರಂಭ ಕಾರ್ಯಕ್ರಮಗಳಲ್ಲಿ ಬಾಟಲಿ ನೀರು ಬಳಸದಂತೆ ಪ್ರತಿಯೊಬ್ಬರು ಜಾಗೃತಿ ವಹಿಸುವಂತೆ ಅವರು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಚೇಂಬರ್ ಆಫ್ ಕಾಮರ್ಸ್ ಕಾರ್ಯದರ್ಶಿ ಚಿತ್ರ, ಪುರಸಭೆ ನಾಮ ನಿರ್ದೇಶಕ ಸದಸ್ಯರಾದ ಪದ್ಮ, ಹಿರಿಯ ಆರೋಗ್ಯ ಅಧಿಕಾರಿ ಉದಯಕುಮಾರ್ ಇದ್ದರು.