ಮೋದಿ ಮತ್ತೆ ಪ್ರಧಾನಿಯಾಗಲು ಕೈಜೋಡಿಸಿ: ರಾಘವೇಂದ್ರ

| Published : Apr 14 2024, 01:58 AM IST / Updated: Apr 14 2024, 10:45 AM IST

ಸಾರಾಂಶ

ದೇಶದಲ್ಲಿ ಪ್ರಧಾನಿ ಮೋದಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ಕೊಟ್ಟಿದ್ದಾರೆ. ಈ ಬಾರಿ ಮಹಿಳಾ ಮತದಾರರು ಬಿಜೆಪಿಗೆ ಬೆಂಬಲ ನೀಡುವ ಮೂಲಕ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಶಿವಮೊಗ್ಗ : ದೇಶದಲ್ಲಿ ಪ್ರಧಾನಿ ಮೋದಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ಕೊಟ್ಟಿದ್ದಾರೆ. ಈ ಬಾರಿ ಮಹಿಳಾ ಮತದಾರರು ಬಿಜೆಪಿಗೆ ಬೆಂಬಲ ನೀಡುವ ಮೂಲಕ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಇಲ್ಲಿನ ಗೋಪಾಳ ಬಡಾವಣೆಯಲ್ಲಿರುವ ಬಂಟರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ನಗರ ಮಹಿಳಾ ಮೋರ್ಚಾದ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ, ಭಾಗ್ಯಲಕ್ಷ್ಮೀ ಬಾಂಡ್ ಯೋಜನೆ ಜಾರಿಗೆ ತರಲಾಗಿತ್ತು. 1.25 ಲಕ್ಷ ಮಕ್ಕಳ ಖಾತೆಗೆ ಹಣ ಜಮಾ ಆಗಿತ್ತು. ಸುಕನ್ಯ ಸಮೃದ್ಧಿ ಯೋಜನೆ ಹಣವನ್ನು ಅಂಚೆ ಇಲಾಖೆಯಲ್ಲಿ ಠೇವಣಿ ಇಟ್ಟರೆ ಶೇ.7.5ರಷ್ಟು ಬಡ್ಡಿ ನೀಡಲಾಗುತ್ತಿತ್ತು. ಕಾಂಗ್ರೆಸ್ ನೀಡಿರುವುದು ಗೊಂದಲದ ಗ್ಯಾರಂಟಿ. ಆದರೆ, ಬಿಜೆಪಿದು ನಂಬಿಕೆಯ ಗ್ಯಾರಂಟಿ ಎಂದರು.

ಕಾಂಗ್ರೆಸ್ ಗ್ಯಾರಂಟಿ ಮೂಲಕ ಅವಕಾಶ ಕೋರುತ್ತಿದೆ. 5 ಕೆ.ಜಿ.ಅಕ್ಕಿ ಕೊಡುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ. ಕೇಂದ್ರದ ಅಕ್ಕಿಗೆ ಸಿದ್ದರಾಮಯ್ಯ ಫೋಟೋ ಹಾಕಿದ್ದಾರೆ. ಶಕ್ತಿ ಯೋಜನೆ ಜಾರಿ ಬಳಿಕ ಗ್ರಾಮೀಣ ಭಾಗದಲ್ಲಿ ಬಸ್‌ಗಳು ಸಿಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ ಎಂದರು.

ಈಶ್ವರಪ್ಪನವರ ನಾಮಪತ್ರ ಸಲ್ಲಿಕೆಗೆ ಬಿಜೆಪಿಯ ಕಾರ್ಯಕರ್ತರು ಪಾಲ್ಗೊಂಡಿರುವುದು ಬೆಳಕಿಗೆ ಬಂದಿದ್ದು, ಇನ್ನು ಮುಂದೆ ಅಲ್ಲಿಗೆ ಹೋಗಬಾರದು. ಈಶ್ವರರಪ್ಪನವರ ನಾಮಪತ್ರ ಸಲ್ಲಿಕೆಗೆ ಎಷ್ಟು ಜನ ಪಾಲ್ಗೊಂಡಿದ್ದೀರಿ ಎಂದು ಮಹಿಳೆಯರನ್ನು ಪ್ರಶ್ನಿಸಿದರು. ಆಗ ಸಭೆಯಲ್ಲಿ ಭಾಗವಹಿಸಿದ್ದ ಕೆಲ ಮಹಿಳೆಯರು ಕೈ ಎತ್ತಿದಾಗ ನೀವು ಪ್ರಾಮಾಣಿಕರಾಗಿ ಒಪ್ಪಿಕೊಂಡಿದ್ದೀರಿ. ಇನ್ನೊಮ್ಮೆ ಈ ತಪ್ಪು ಮಾಡದಂತೆ ಮನವಿ ಮಾಡಿದರು.

ಏ.18ರಂದು ಬೆಳಗ್ಗೆ 9.45ಕ್ಕೆ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತಿದ್ದೇನೆ. ಈ ವೇಳೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಬಿ.ವೈ.ಯಡಿಯೂರಪ್ಪನವರು ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಂಡರು.

ಶಾಸಕ ಎಸ್.ಎನ್. ಚನ್ನಬಸಪ್ಪ, ಪ್ರಮುಖರಾದ ಎಂ.ಬಿ.ಭಾನುಪ್ರಕಾಶ್, ಮೋಹನ್ ರೆಡ್ಡಿ, ಜ್ಞಾನೇಶ್ವರ್, ಗಾಯತ್ರಿ ದೇವಿ, ಸುರೇಖಾ ಮುರುಳಿಧರ್, ಎನ್.ಕೆ.ಜಗದೀಶ್ ಸೇರಿದಂತೆ ಹಲವು ಉಪಸ್ಥಿತರಿದ್ದರು.