ಸಾರಾಂಶ
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಪ್ರತಿಯೊಂದು ಅಪರಾಧ ವರದಿ ಮಾಡಬೇಕು. 18 ವರ್ಷದೊಳಗೆ ಹೆಣ್ಣು ಮಕ್ಕಳಿಗೆ ವಿವಾಹ ಮಾಡಬಾರದು
ನರಗುಂದ: ಸಮಾಜದಲ್ಲಿ ಬಾಲ್ಯ ವಿವಾಹ ಮಾಡಿಕೊಂಡ ಹೆಣ್ಣು ಮಕ್ಕಳು ಹಲವಾರು ಸಮಸ್ಯೆ ಎದುರಿಸುತ್ತಿದ್ದು, ಆದರಿಂದ ಬಾಲ್ಯ ವಿವಾಹ ತಡೆಗೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಕವಿತಾ ಹುಲಕೋಟಿ ಹೇಳಿದರು.
ಅವರು ಶುಕ್ರವಾರ ತಾಲೂಕಿನ ಹುಣಸಿಕಟ್ಟಿ ಗ್ರಾಮದ ರಾಮಪ್ಪ ಫಕೀರಪ್ಪ ಯಡಹಳ್ಳಿ ಸರ್ಕಾರಿ ಪ್ರೌಢಶಾಲೆ, ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಡೆದ ಬಾಲ್ಯವಿವಾಹ ಮುಕ್ತ ಭಾರತ ಕುರಿತ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿ, ನಿಮ್ಮ ಸುತ್ತಮುತ್ತ ಬಾಲ್ಯ ವಿವಾಹವಾಗುತ್ತಿದ್ದರೆ 1098ರ ಸಹಾಯವಾಣಿಗೆ ಕರೆ ಮಾಡಿ, ಕರೆ ಮಾಡಿದ ವ್ಯಕ್ತಿಯ ಹೆಸರನ್ನು ಗೌಪ್ಯವಾಗಿಡಲಾಗುವುದು. ದೇಶದಲ್ಲಿ ಪ್ರತಿಯೊಬ್ಬರು ಬಾಲ್ಯ ವಿವಾಹ ತಡೆಯಲು ಕೈ ಜೋಡಿಸಿದರೆ ಮಾತ್ರ ಈ ಪದ್ಧತಿ ತಡೆಯಲು ಸಾಧ್ಯ ಎಂದರು.ನ್ಯಾಯವಾದಿ ಆರ್.ಆರ್. ನಾಯ್ಕರ ಮಾತನಾಡಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಪ್ರತಿಯೊಂದು ಅಪರಾಧ ವರದಿ ಮಾಡಬೇಕು. 18 ವರ್ಷದೊಳಗೆ ಹೆಣ್ಣು ಮಕ್ಕಳಿಗೆ ವಿವಾಹ ಮಾಡಬಾರದು, ಅಧಿಕಾರಿಗಳು ಬಾಲ್ಯ ವಿವಾಹ ತಡೆಗೆ ಸಮಾಜ ಸೇವಾ ದೃಷ್ಠಿಯಿಂದ ತನಗೆ ಸರಿ ಎನಿಸಿದ ಕ್ರಮ ವಹಿಸಬಹುದು. ಹೀಗೆ ಮಾಡುವಾಗ ಸಮುದಾಯದ ಗೌರವಾನ್ವಿತ ಸದಸ್ಯರ ಸಹಾಯ ಪಡೆಯಬಹುದು. ಇದಲ್ಲದೆ ಸೆಕ್ಷನ್ 3, 4, 5 ಹಾಗೂ 13 ರ ಅಡಿಯಲ್ಲಿ ಆಜ್ಞೆ ಹೊರಡಿಸಲು ನ್ಯಾಯಾಲಯಕ್ಕೆ ಸಂವೇದನೆ ಮಾಡುವ ಅಧಿಕಾರ ಹೊಂದಿರುತ್ತಾರೆ ಎಂದು ತಿಳಿಸಿದರು.
ಮುಖ್ಯಗುರುಗಳಾದ ಎಂ.ಎಚ್. ಆಲಕನೂರ, ನ್ಯಾಯವಾದಿ ಜೆ.ಸಿ.ಬೋಗಾರ, ಡಿ.ಬಿ. ಯಲಿಗಾರ, ಎಂ.ಎನ್. ಬೇಪಾರಿ, ಕೆ. ಆರ್. ಶಿರಸಗಿ, ಸವಿತಾ ನಾಯ್ಕರ ಹಾಗೂ ವಿದ್ಯಾರ್ಥಿಗಳು ಇದ್ದರು.