ಜಿಲ್ಲೆಯಲ್ಲಿ ಈಗಾಗಲೇ ೨೪ ಆಸ್ಪತ್ರೆಗಳು ಎಬಿ-ಆರ್‌ಕೆ ಯೋಜನೆಯಡಿ ಹಾಗೂ ಇದರಲ್ಲಿ ೨೦ ಆಸ್ಪತ್ರೆಗಳು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಲ್ಲಿಯೂ ನೋಂದಣಿ ಆಗಿವೆ.
ಧಾರವಾಡ:
ಜಿಲ್ಲೆಯಲ್ಲಿ ಈಗಾಗಲೇ ೨೪ ಆಸ್ಪತ್ರೆಗಳು ಎಬಿ-ಆರ್‌ಕೆ ಯೋಜನೆಯಡಿ ಹಾಗೂ ಇದರಲ್ಲಿ ೨೦ ಆಸ್ಪತ್ರೆಗಳು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಲ್ಲಿಯೂ ನೋಂದಣಿ ಆಗಿವೆ. ಉಳಿದ ನಾಲ್ಕು ಆಸ್ಪತ್ರೆಗಳು ನೋಂದಣಿ ಆಗಬೇಕಿದ್ದು, ಅರ್ಹತೆ ಹೊಂದಿರುವ ಇತರೆ ಆಸ್ಪತ್ರೆಗಳು ಯೋಜನೆಯಡಿ ಸೇರ್ಪಡೆಯಾಗಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದರು.ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸುವರ್ಣ ಆರೋಗ್ಯ ಟ್ರಸ್ಟ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಕುರಿತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಹಿಂದೆ ಯೋಜನೆಯಡಿ ನಿಗದಿಯಾಗಿದ್ದ ದರ ಹಾಗೂ ಪಾವತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳಿದ್ದ ಕಾರಣ ಆಸ್ಪತ್ರೆಗಳು ಯೋಜನೆಯಡಿ ನೋಂದಣಿ ಆಗಲು ಹಿಂದೇಟು ಹಾಕುತ್ತಿದ್ದವು. ಇದೀಗ ಯೋಜನೆಯಲ್ಲಿ ಉದ್ಯೋಗದಾತರ ಜತೆಗೆ ಉದ್ಯೋಗಿಗಳ ಕೊಡುಗೆಯೂ ಇರುವುದರಿಂದ, ಸರ್ಕಾರಿ ನೌಕರರು ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಪಡೆಯಲು ಹೆಚ್ಚಿನ ಅವಕಾಶ ದೊರೆಯಲಿದೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ೧೫ ಸಾವಿರಕ್ಕೂ ಹೆಚ್ಚು ಸರ್ಕಾರಿ ನೌಕರರಿದ್ದು ನೆರೆಯ ಜಿಲ್ಲೆಗಳಿಂದಲೂ ಹಲವು ಸರ್ಕಾರಿ ನೌಕರರು ಚಿಕಿತ್ಸೆಗಾಗಿ ಧಾರವಾಡದ ಆಸ್ಪತ್ರೆ ಅವಲಂಬಿಸಿದ್ದಾರೆ ಎಂದರು.
ಹುಬ್ಬಳ್ಳಿ ಭಾರತೀಯ ವೈದ್ಯಕೀಯ ಸಂಘದ ಡಾ. ಬಸವರಾಜ ಸರ್ಜನ ಮಾತನಾಡಿ, ಈ ಹಿಂದೆ ದರಗಳಲ್ಲಿ ವ್ಯತ್ಯಾಸವಿದ್ದ ಕಾರಣ ಹಲವು ನರ್ಸಿಂಗ್ ಹೋಂಗಳು ಯೋಜನೆಯಡಿ ನೋಂದಣಿಗೆ ಆಸಕ್ತಿ ತೋರಿರಲಿಲ್ಲ. ಇದೀಗ ಚಿಕಿತ್ಸಾ ದರ ಪರಿಷ್ಕರಿಸಿದ್ದು ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಮಾದರಿಯಲ್ಲಿ ವ್ಯವಸ್ಥೆ ಉತ್ತಮಗೊಂಡಿದೆ. ಜೊತೆಗೆ ಚಿಕಿತ್ಸಾ ವೆಚ್ಚದ ಮರುಪಾವತಿ ವ್ಯವಸ್ಥೆಯೂ ಸುಧಾರಿಸಿದೆ ಎಂದರು.ಹುಬ್ಬಳ್ಳಿಯಲ್ಲಿ ೧೮ ನರ್ಸಿಂಗ್ ಹೋಮ್‌ಗಳು ಸೂಪರ್ ಸ್ಪೆಷಾಲಿಟಿ ಹಾಗೂ ಸ್ಪೆಷಾಲಿಟಿ ಚಿಕಿತ್ಸಾ ಸೌಲಭ್ಯಗಳನ್ನು ಹೊಂದಿವೆ. ಇದರೊಂದಿಗೆ ಎರಡು ವೈದ್ಯಕೀಯ ಕಾಲೇಜುಗಳೂ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ರೀತಿಯ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವ ಸಾಮರ್ಥ್ಯ ಹೊಂದಿವೆ ಎಂದು ಹೇಳಿದರು.ಆರೋಗ್ಯ ಸಂಜೀವಿನಿ ಯೋಜನೆಯ ಪರಿಷ್ಕೃತ ದರ ಮತ್ತು ಸುಧಾರಿತ ಮರುಪಾವತಿ ವ್ಯವಸ್ಥೆಯ ಕುರಿತು ವೈದ್ಯಕೀಯ ಸಂಸ್ಥೆಗಳಿಗೆ ಸೂಕ್ತ ಮಾಹಿತಿ ನೀಡಿ, ಅವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯಡಿ ಸೇರ್ಪಡೆಗೊಳಿಸಬೇಕು. ಸರ್ಕಾರಿ ನೌಕರರು ಹಾಗೂ ಸಿಬ್ಬಂದಿಗೆ ಅನಾರೋಗ್ಯ ಉಂಟಾದ ಸಂದರ್ಭದಲ್ಲಿ ಅಗತ್ಯವಿರುವ ಉತ್ತಮ ವೈದ್ಯಕೀಯ ಸೇವೆ ದೊರೆಯುವಂತೆ ಹುಬ್ಬಳ್ಳಿ ಐಎಂಎ ಹಾಗೂ ಧಾರವಾಡದ ವೈದ್ಯಕೀಯ ಸಮುದಾಯ ಸಂಪೂರ್ಣ ಸಹಕಾರ ನೀಡಲಿದೆ. ಸೇವಾ ಮನೋಭಾವದಿಂದ ಸರ್ಕಾರಿ ನೌಕರರಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸಲು ವೈದ್ಯರು ಸಿದ್ಧರಿದ್ದಾರೆ ಎಂದು ತಿಳಿಸಿದರು.ಕಾರ್ಯಾಗಾರದಲ್ಲಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ನೋಡಲ್ ಆಫೀಸರ್ ಡಾ. ಶಶಿಧರ ಕಳಸನೂರಮಠ, ಕಾರ್ಯಾಗಾರದ ಮುಖ್ಯ ಅಂಶಗಳ ಕುರಿತು ವಿವರಿಸಿದರು.ಕಾರ್ಯಾಗಾರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪರಶುರಾಮ ಎಫ್.ಕೆ., ಜಿಲ್ಲಾ ನೌಕರ ಸಂಘದ ಅಧ್ಯಕ್ಷ ಡಾ. ಸಿದ್ದನಗೌಡ ಪಾಟೀಲ್, ಮಲ್ಲಿಕಾರ್ಜುನ ಸೊಲಗಿ, ರಮೇಶ ಲಿಂಗದಾಳ, ಪ್ರೈವೇಟ್ ಮೆಡಿಕಲ್ ಆಫೀಸರ್ ಡಾ. ವೈ.ಎಸ್. ಚಿತ್ತರಗಿ, ಧಾರವಾಡ ಭಾರತೀಯ ವೈದ್ಯಕೀಯ ಸಂಘದ ಆಫೀಸರ್ ಡಾ. ಜಗದೀಶ ನಿರಡಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಜಿಲ್ಲಾಧಿಕಾರಿ ಕಚೇರಿ ಸಹಾಯಕ ಪ್ರಕಾಶ ಹೊಳೆಪ್ಪಗೋಳ, ನೌಕರರ ಸಂಘದ ಪದಾಧಿಕಾರಿಗಳಾದ ಪ್ರಕಾಶ ಹಳಪೇಟೆ, ದೇವಿದಾಸ ಶಾಂತಿಕರ, ರಾಜಶೇಖರ ಹೊನ್ನಪ್ಪನವರ, ರಾಜೇಶ ಕೋನರೆಡ್ಡಿ, ಗಿರೀಶ ಚೌಡಕಿ, ಜಗದೀಶ ವಿರಕ್ತಮಠ, ಫಿರೋಜ ಗುಡೇನಕಟ್ಟಿ, ಉಮೇಶ ಕುರುಬರ, ಪ್ರಶಾಂತ ನವಲಿ ಹಾಗೂ ಆರೋಗ್ಯ ಮಿತ್ರರು ಉಪಸ್ಥಿತರಿದ್ದರು.