ಕನ್ನಡಪ್ರಭ ವಾರ್ತೆ ಮಧುಗಿರಿ

ಶ್ರೀಕೃಷ್ಣ ದೇವಸ್ಥಾನ ಕಟ್ಟಿಸುವ ಜೊತೆಗೆ ಐತಿಹಾಸಿಕ ಹಿನ್ನಲೆಯುಳ್ಳ ಶ್ರೀಮ್ಲಲೇಶ್ವರ ಮತ್ತು ಶ್ರೀವೆಂಕಟರಮಣಸ್ವಾಮಿ ದೇವಸ್ಥಾನಗಳ ಸಮಗ್ರ ಅಭಿವೃದ್ಧಿಗೂ ಕೈ ಜೋಡಿಸುವಂತೆ ವಿಧಾನ ಪರಿಷತ್‌ ಸದಸ್ಯ ಆರ್. ರಾಜೇಂದ್ರ ತಿಳಿಸಿದರು.

ಪಟ್ಟಣದಲ್ಲಿ ವಿಪ್ರ ಸೇವಾ ಟ್ರಸ್ಟ್ ಸಭಾಂಗಣದಲ್ಲಿ ಪೇಜಾವರಮಠ ಕೃಷ್ಣಮಂದಿರ ಸ್ಥಳದ ಇ-ಸ್ವತ್ತು ಖಾತೆ ದಾಖಲೆಯನ್ನು ತಾಲೂಕು ಬ್ರಾಹ್ಮಣ ಸಭಾ ಪದಾಧಿಕಾರಿಗಳಿಗೆ ಹಸ್ತಾಂತರಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪಟ್ಟಣದ ಹೃದಯ ಭಾಗದಲ್ಲಿರುವ ಎರೆಡು ದೇಗುಲಗಳನ್ನು ಕೃಷ್ಣ ದೇವಸ್ಥಾನ ಕಟ್ಟಿಸುವಾಗ ಅಭಿವೃದ್ಧಿ ಪಡಿಸುವಂತೆ ವಿಪ್ರ ಸಮುದಾಯದವರಲ್ಲಿ ಮನವಿ ಮಾಡಿದರು.

ಕ್ಷೇತ್ರದ ಶಾಸಕ ಕೆ.ಎನ್.ರಾಜಣ್ಣನವರು ತಮ್ಮ ಅಧಿಕಾರ ಅವಧಿಯಲ್ಲಿ ವಿಪ್ರ ಸಮುದಾಯಕ್ಕೂ ರಾಜಕೀಯ ಅಧಿಕಾರ ನೀಡಿದ್ದು,ಕ್ಷೇತ್ರದ ಎಲ್ಲ ಸಮುದಾಯಗಳ ಸಮಗ್ರ ಬೆಳವಣಿಗೆಗೆ ಶಾಸಕರು ಅನುದಾನ ನೀಡಿದ್ದು,ಮುಂಬರುವ ದಿನಗಳಲ್ಲಿ ಇಡೀ ಜಿ್ಲಲೆ ಜನತೆ ಮಧುಗಿರಿಯತ್ತ ತಿರುಗಿ ನೋಡುವಂತೆ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುತ್ತಿದ್ದು, ನಂತರ ಪಟ್ಟಣದಲ್ಲಿರುವ ಶಂಕರ ಮಠಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಿಕೊಡಲು ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು. ಬ್ರಾಹ್ಮಣ ಸಮುದಾಯದ ಬಹಳ ವರ್ಷಗಳ ಬೇಡಿಕೆ ಈದಿನ ಈಡೇರಿಸಿದ್ದು ನಿಮ್ಮಿಂದ ಸಮಾಜಕ್ಕೆ ಅನುಕೂಲವಾಗಲಿ ಎಂದರು.

ತಾಲೂಕು ಬ್ರಾಹ್ಮಣ ಸಭಾಧ್ಯಕ್ಷ ಪಿ.ದತ್ತಾತ್ರೇಯ ಮಾತನಾಡಿ, ನಮ್ಮ ಬ್ರಾಹ್ಮಣ ಸಭಾ ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸಮುದಾಯ ಭವನ ನಿರ್ಮಿಸಲು 2 ಎಕರೆ ಜಾಗ ಕೊಡಿಸುವಂತೆ ಮನವಿ ಮಾಡಿದರು.


ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಕೆ.ನಂಜುಂಡರಾಜು,ಲಾಲಪೇಟೆ ಮಂಜುನಾಥ್, ಮಾಜಿ ಸದಸ್ಯ ಕೆಯನಾರಾಯಣ್, ಬ್ರಾಹ್ಮಣ ಸಭಾ ಪದಾಧಿಕಾರಿಗಳಾದ ಕೆ.ನಾಗರಾಜಶಾಸ್ತ್ರಿ, ಎಸ್.ಎ.ಶ್ಯಾಮನಾಥ್, ಶ್ರೀಶಂಕರ ಸೇವಾ ಸಮಿತಿ ಅಧ್ಯಕ್ಷ ಬಿ.ಆರ್.ಸತ್ಯನಾರಾಯಣ್ , ಎಸ್‌.ವಿ.ಸೂರ್ಯನಾರಾಯಣ್ ರಾವ್‌, ಮಾಜಿ ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ, ಹಾಗೂ ವಿಪ್ರ ಬಂಧುಗಳು ಇದ್ದರು.