ಸಾರಾಂಶ
-ಶಹಾಪುರ ನಗರದ ಪೊಲೀಸ್ ಠಾಣೆಗೆ ಜ್ಞಾನ ಗಂಗಾ ಶಾಲಾ ಮಕ್ಕಳು ಭೇಟಿ
-----ಕನ್ನಡಪ್ರಭವಾರ್ತೆ ಶಹಾಪುರ
ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಮತ್ತು ಸಾರ್ವಜನಿಕರ ಮಧ್ಯೆ ಉತ್ತಮ ಬಾಂಧವ್ಯವಿದ್ದಾಗ ಮಾತ್ರ ವ್ಯಾಜ್ಯರಹಿತ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಾರ್ಯೋನ್ಮುಖವಾಗಿದೆ ಎಂದು ಪಿಎಸ್ಐ ಶ್ಯಾಮಸುಂದರ ನಾಯಕ ಹೇಳಿದರು.ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ವೇಳೆ, ಜ್ಞಾನಗಂಗಾ ಶಾಲಾ ಮಕ್ಕಳಿಗೆ ಹಮ್ಮಿಕೊಂಡಿದ್ದ ಪೊಲೀಸರ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡುವ ತೆರೆದ ಮನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪೊಲೀಸ್ ಇಲಾಖೆಯು ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಕೆಲಸ ಮಾಡುತ್ತಿದೆ. ತಪ್ಪು ಮಾಡುವವರು ಮಾತ್ರ ಪೊಲೀಸರಿಗೆ ಹೆದರಬೇಕು. ಇಲಾಖೆಯು ಜನಸ್ನೇಹಿಯಾಗಿ ಕೆಲಸ ಮಾಡುತ್ತಿದೆ. ಪೊಲೀಸರ ಮೇಲಿರುವ ಭಯವನ್ನು ಬಿಟ್ಟು ಗೌರವವನ್ನಿಡಬೇಕೆಂದು ಸಲಹೆ ನೀಡಿದರು.
ಪಿಎಸ್ಐ ಸೋಮಲಿಂಗಪ್ಪ ಚಟ್ನಳ್ಳಿ ಮಾತನಾಡಿ, ಉತ್ತಮ ಬಾಂಧವ್ಯ ವೃದ್ಧಿಗಾಗಿ ಶಾಲಾ ಹಂತದಲ್ಲಿ ಮಕ್ಕಳಿಗೆ ಕಾನೂನಿನ ಬಗ್ಗೆ ತಿಳುವಳಿಕೆ ಮತ್ತು ಪೊಲೀಸ್ ವ್ಯವಸ್ಥೆ ಬಗ್ಗೆ ಅರಿವು ಮೂಡಿಸಿದರೆ ಉತ್ತಮ ನಾಗರಿಕರನ್ನಾಗಿ ರೂಪಿಸಬಹುದು ಎನ್ನುವುದು ಕಾರ್ಯಕ್ರಮದ ಮೂಲ ಉದ್ದೇಶ ಶಾಲಾ ಮಕ್ಕಳನ್ನು ಪೊಲೀಸ್ ಠಾಣೆಗೆ ಕರೆತಂದು ಮಾಹಿತಿ ಕೊಡಿಸಿರುವುದಕ್ಕೆ ಶಾಲಾ ಶಿಕ್ಷಕರಿಗೆ ಅಭಿನಂದನೆಗಳು ತಿಳಿಸಿದರು.ಜ್ಞಾನಗಂಗಾ ಶಾಲೆಯ ಮುಖ್ಯಸ್ಥ ಸುಧಾಕರ್ ಕುಲಕರ್ಣಿ ಮಾತನಾಡಿ, ಸಮಾಜದಲ್ಲಿ ಪೊಲೀಸರ ಸಹವಾಸವೇ ಬೇಡ ಎಂಬ ಧೋರಣೆ ಬದಲಾಗಬೇಕಾಗಿದ್ದು, ಉತ್ತಮ ಮಾನವೀಯ ನೆಲೆಯ ಜನಸೇವೆಯ ಸಾಮಾಜಿಕ ಕಳಕಳಿಯ ಜನಸ್ನೇಹಿ ಪೊಲೀಸ್ ವ್ಯವಸ್ಥೆ ನಿರ್ಮಿಸುವುದು ಇಂದಿನ ಅಗ ತ್ಯವಾಗಿದೆ ಎಂದರು. ಶಾಲೆಯ ಮುಖ್ಯಗುರು ರಾಹುಲ್ ಕುಮಾರ, ಶಿಕ್ಷಕರಾದ ಮಾಳಪ್ಪ, ಮಲ್ಲು, ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಇದ್ದರು.
-----ಫೋಟೊ: ಶಹಾಪುರ ನಗರದ ಪೊಲೀಸ್ ಠಾಣೆಗೆ ಜ್ಞಾನ ಗಂಗಾ ಶಾಲಾ ಮಕ್ಕಳು ಭೇಟಿ ನೀಡಿ, ಪೊಲೀಸರ ಕರ್ತವ್ಯ, ಜವಾಬ್ದಾರಿ ಹಾಗೂ ಕಾನೂನಿನ ಅರಿವು ಪಡೆದರು.