ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ ಮಧ್ಯರಾತ್ರಿ ನಿಲ್ಲಿಸಿದ್ದ ಆಟೋವನ್ನು 4 ಮಂದಿ ಕಳ್ಳರು ಕಳವಿಗೂ ಮುನ್ನ ಆ ರಸ್ತೆಯಲ್ಲಿರುವ ಸಿಸಿ ಟಿವಿ ಕ್ಯಾಮೆರಾದ ವೈರನ್ನು ಕಡಿತಗೊಳಿಸಿ ತಮ್ಮ ಕೈಚಳಕ ತೋರಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹೀಗಿದ್ದರೂ ಮಾಂಬಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಮೀನಮೇಷ ಎಣಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.ಕುಣಗಳ್ಳಿ ಗ್ರಾಮದ ವೆಂಕಟೆಶೆಟ್ಟಿ ಪುತ್ರ ರಾಜು ಎಂಬವರ ಪ್ಯಾಸೆಂಜರ್ ಆಟೋ 2024ರ ಡಿ.21ರ ಮಧ್ಯರಾತ್ರಿ 1.40ರ ಸುಮಾರಿಗೆ ಕಳವಾಗಿದೆ. ಕಳ್ಳತನಕ್ಕೆ ಹೊಂಚು ಹಾಕಿದ್ದ ಆರೋಪಿಗಳು ಮೊದಲು ಆಟೋ ನಿಲ್ಲಿಸಿದ್ದ ಸ್ಥಳ (ಉಪ್ಪಾರ ಬೀದಿಯ ಮುಖ್ಯರಸ್ತೆ) ಕ್ಕೆ 1ಬೈಕ್ ನಲ್ಲಿ ನಾಲ್ಕು ಮಂದಿ ಬಂದಿದ್ದು ಎಂದು ಹೇಳಲಾಗಿದ್ದು, ಮೊದಲಿಗೆ ಕಳ್ಳರ ಪೈಕಿ ಒಬ್ಬ ಮುಸುಕುಧಾರಿಯಾಗಿದ್ದು ಆತ ಸಿಸಿ ಟಿವಿ ಕ್ಯಾಮೆರಾದ (ಹೆಸರು ಸದ್ದಾಂ ಎಂದು ಹೇಳಲಾಗಿದೆ) ವೈರ್ ಕಡಿತಗೊಳಿಸುತ್ತಾನೆ, ಬಳಿಕ ಆತನ ಜೊತೆ ಟೋಪಿ ಹಾಕಿ ಮುಖ ಮುಚ್ಚಿಕೊಂಡು ಬಂದವ, ಬಳಿಕ ಬಂದ ಮತ್ತೋರ್ವ ತನ್ನ ಟೀಶರ್ಟ್ ಅನ್ನು ಮುಖಕ್ಕೆ ಮರೆಮಾಚಿರುತ್ತಾನೆ. ಹೀಗೆ 4 ಮಂದಿ ಹೊಂಚು ಹಾಕಿ ಒಗ್ಗೂಡಿ ಆಟೋ ಕಳುವು ಮಾಡಿದ್ದಾರೆ. ಈ ಸಂಬಂಧ ಆಟೋ ಮಾಲೀಕ ಸಿಸಿ ಟಿವಿ ದೃಶ್ಯದ ಜೊತೆ ಮಾಂಬಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿ ಆಟೋ ಪತ್ತೆಗೆ ಮನವಿ ಮಾಡಿದ್ದಾರೆ.
ಕುಣಗಳ್ಳಿ ಗ್ರಾಮದಲ್ಲಿ ಕಳವಾದ ಆಟೋ ಮೈಸೂರಿನ ಕೆ.ಆರ್.ಆಸ್ಪತ್ರೆಯ ಪಾರ್ಕಿಂಗ್‌ನಲ್ಲಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಹಲವು ದಿನಗಳ ಕಾಲ ಇತ್ತು ಎಂದು ಹೇಳಲಾಗಿದೆ. ಮೈಸೂರಿನಲ್ಲಿ ಆಟೋ ಇದ್ದ ಕುರಿತು ಸಿಸಿ ಟಿವಿ ದೃಶ್ಯಾವಳಿಗಳಲ್ಲೂ ಸೆರೆಯಾಗಿದೆ. ಆಟೋ ಕದ್ದ ಆರೋಪಿಗಳು ಡಿ.21ರ ಬಳಿಕ 10ದಿನಗಳಲ್ಲಿ ಮೈಸೂರಿನಲ್ಲೂ ಕೆಲ ದಿನಗಳ ಕಾಲ ಸಂಚರಿಸಿದ್ದಾರೆ ಎಂದು ಉನ್ನತ ಮೂಲಗಳು ಪತ್ರಿಕೆಗೆ ಖಚಿತಪಡಿಸಿವೆ.ಪತ್ತೆ ಹಚ್ಚುವಲ್ಲಿ ವಿಫಲ:ಆಟೋ ಕಳವಾಗಿ 40ದಿನಗಳಾಗಿದ್ದರೂ ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮವಹಿಸಿಲ್ಲ, ಕಳವು ಆರೋಪಿಗಳ ಬಗ್ಗೆ ಸಾಕಷ್ಟು ಮಾಹಿತಿ ಪೊಲೀಸ್ ಇಲಾಖೆಗಿದ್ದರೂ ಬಂಧಿಸುವಲ್ಲಿ ಮಾಂಬಳ್ಳಿ ಪೊಲೀಸರು ಮೀನಮೇಷ ಎಣಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕುಣಗಳ್ಳಿಯಲ್ಲಿ ಆಟೋ ಕಳವು ಮಾಡಿದ ಆರೋಪಿಗಳು ಕಳೆದ ತಿಂಗಳಷ್ಟೆ ಪ್ರಕರಣವೊಂದರಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆಂದು ಹೇಳಲಾಗಿದೆ. ಪುನಃ ಕಳವು ಕೃತ್ಯದಲ್ಲಿ ಸದ್ದಾಂ ಮತ್ತು ತಂಡ ಪಾಲ್ಗೊಂಡಿರುವುದು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆ ಸಿಕ್ಕಿದೆ. ಇನ್ನಾದರೂ ಕಳವಾಗಿರುವ ಆಟೋ ಪತ್ತೆ ಹಚ್ಚುವಲ್ಲಿ ಇಲಾಖೆ ಗಮನಹರಿಸುವಂತೆ ಹಾಗೂ ಕಳ್ಳತನ ಹೆಚ್ಚಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಇಲಾಖಾಧಿಕಾರಿಗಳು ದಿಟ್ಟಕ್ರಮಕೈಗೊಂಡು ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಕ್ರಮವಹಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.