18ರಂದು ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಭಾಗವಹಿಸಿ

| Published : Dec 15 2024, 02:02 AM IST

ಸಾರಾಂಶ

ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರು ಹಾಗೂ ಅತಿಥಿ ಶಿಕ್ಷಕರ ನೌಕರರು ಡಿ.18ರಂದು ಬೆಳಗಾವಿಯಲ್ಲಿ ನಡೆಯುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ತಪ್ಪದೇ ಭಾಗವಹಿಸಬೇಕು ಎಂದು ರಾಜ್ಯ ಜಂಟಿ ಕಾರ್ಯದರ್ಶಿ ಹಾಗೂ ಜಿಲ್ಲಾಧ್ಯಕ್ಷ ಶಿವಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಜ್ಜಂಪುರ

ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರು ಹಾಗೂ ಅತಿಥಿ ಶಿಕ್ಷಕರ ನೌಕರರು ಡಿ.18ರಂದು ಬೆಳಗಾವಿಯಲ್ಲಿ ನಡೆಯುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ತಪ್ಪದೇ ಭಾಗವಹಿಸಬೇಕು ಎಂದು ರಾಜ್ಯ ಜಂಟಿ ಕಾರ್ಯದರ್ಶಿ ಹಾಗೂ ಜಿಲ್ಲಾಧ್ಯಕ್ಷ ಶಿವಮೂರ್ತಿ ಹೇಳಿದರು.

ರಾಜ್ಯದಿಂದ ಸುಮಾರು 5000ಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರು ಮತ್ತು ಅತಿಥಿ ಶಿಕ್ಷಕರು ಭಾಗವಹಿಸುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯಿಂದ ಸುಮಾರು 150 - 200 ಜನ ಹೊರಗುತ್ತಿಗೆ ನೌಕರರು ಹಾಗೂ ಅತಿಥಿ ಶಿಕ್ಷಕರು ಭಾಗವಹಿಸುತ್ತಿರುವರು. ಸರ್ಕಾರದಿಂದ ಸಮಾಜ ಕಲ್ಯಾಣ ಇಲಾಖೆ ಪ್ಯಾಪ್ತಿಯ ಡಾ. ಬಿಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಹತ್ತಾರು ವರ್ಷಗಳಿಂದ ಕಡಿಮೆ ವೇತನ ಪಡೆದು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಸದ್ಯಕ್ಕೆ 8ರಿಂದ 8500 ವೇತನ ಸಿಗುತ್ತಿದ್ದು, ಇ.ಪಿ.ಎಫ್, ಇ.ಎಸ್.ಐ ಯಾವುದು ಸಿಗುತ್ತಿಲ್ಲ. ಏಜೆನ್ಸಿ ಹಾಗೂ ಸರ್ಕಾರ ಕನಿಷ್ಠ ವೇತನವನ್ನು ನೀಡದ ಕಾರಣ ಹಲವಾರು ಬೇಡಿಕೆಗಳನ್ನಿಟ್ಟುಕೊಂಡು ಹಾಗೂ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಹಲವಾರು ವರ್ಷಗಳ ನಿರಂತರ ಬೇಡಿಕೆಗಾಗಿ ಈ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸರ್ಕಾರದಿಂದ ನೇರವಾಗಿ ಇಲಾಖೆಯಿಂದ ವೇತನ ಕೊಡುವುದು, ಹತ್ತು ವರ್ಷ ಸೇವೆ ಸಲ್ಲಿಸಿರುವವರನ್ನು ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮದ ಅಡಿಯಲ್ಲಿ ಜಾರಿತರುವುದು, ಕನಿಷ್ಠವೇತನ 31,000 ಕೊಡುವುದು, ಅಧಿಕಾರಿಗಳ ಕಿರುಕುಳ ಹಾಗೂ ಏಕಾಏಕಿ ಕೆಲಸದಿಂದ ತೆಗೆಯದಂತೆ ಆಗ್ರಹಿಸಿ ಈ ಹೋರಾಟ ರೂಪುಗೊಳ್ಳುತ್ತದೆ ಎಂದರು.

ಸೇವಾ ಭದ್ರತೆ ಸಮಾನ ಕೆಲಸಕ್ಕೆ ಸಮಾನ ವೇತನ, ಬೀದರ್ ಜಿಲ್ಲೆಯ ಮಾದರಿಯಲ್ಲಿ ಜಿಲ್ಲಾ ಕಾರ್ಮಿಕ ಸಂಸ್ಥೆಗಳ ವಿವಿದೋದ್ದೇಶ ಸಹಕಾರ ಸಂಘವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ವಿಸ್ತರಿಸುವುದು, ನಿವೃತ್ತಿ ನಂತರ 10 ಲಕ್ಷ ಪರಿಹಾರ ಕೊಡುವುದು, ಹೀಗೆ ಹಲವಾರು ಬೇಡಿಕೆಗಳನ್ನು ಇಟ್ಟುಕೊಂಡು ಸಂಘಟನೆ ಪ್ರತಿಭಟನೆ ಮಾಡುತ್ತಿದ್ದು, ಸರ್ಕಾರ ನಮ್ಮಗಳ ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.