ಕ್ಷೇತ್ರದ ಪ್ರಗತಿಗೆ ಕೈಜೋಡಿಸಿ: ಶಾಸಕ ಟಿ.ರಘುಮೂರ್ತಿ

| Published : Jun 22 2024, 12:54 AM IST

ಕ್ಷೇತ್ರದ ಪ್ರಗತಿಗೆ ಕೈಜೋಡಿಸಿ: ಶಾಸಕ ಟಿ.ರಘುಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆಯ ಅಮಲಿನಿಂದ ಹೊರಬಂದು ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ತಾಲೂಕು ಮಟ್ಟದ ಅಧಿಕಾರಿಗಳು ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಬೇಕು. ಜನರ ಸಮಸ್ಯೆ ನಿವಾರಣೆಯಾದಲ್ಲಿ ಮಾತ್ರ ಒಳ್ಳೆ ಆಡಳಿತ ನೀಡಿದ ಹೆಮ್ಮೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸಲ್ಲುತ್ತದೆ ಎಂದು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ, ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಟಿ. ರಘುಮೂರ್ತಿ ಹೇಳಿದ್ದಾರೆ.

- ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ

- ಪಾರದರ್ಶಕ ಆಡಳಿತ ನೀಡುವಂತೆ ಅಧಿಕಾರಿಗಳಿಗೆ ಸೂಚನೆಕನ್ನಡಪ್ರಭ ವಾರ್ತೆ ಚಳ್ಳಕೆರೆ

ಲೋಕಸಭಾ ಚುನಾವಣೆಯ ಅಮಲಿನಿಂದ ಹೊರಬಂದು ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ತಾಲೂಕು ಮಟ್ಟದ ಅಧಿಕಾರಿಗಳು ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಬೇಕು. ಜನರ ಸಮಸ್ಯೆ ನಿವಾರಣೆಯಾದಲ್ಲಿ ಮಾತ್ರ ಒಳ್ಳೆ ಆಡಳಿತ ನೀಡಿದ ಹೆಮ್ಮೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸಲ್ಲುತ್ತದೆ ಎಂದು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ, ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಟಿ. ರಘುಮೂರ್ತಿ ಹೇಳಿದರು.

ನಂತರ ಕೃಷಿ ಇಲಾಖೆ ಮಾಹಿತಿ ನೀಡಿದ ಸಹಾಯಕ ಕೃಷಿ ನಿರ್ದೇಶಕ ಜೆ. ಅಶೋಕ್, ತಾಲೂಕಿನಾದ್ಯಂತ 138 ಮಿ.ಮೀ. ಮಳೆಯಾಗಿದೆ. ಕಸಬಾ ಹೋಬಳಿಯೂ ಸೇರಿ ಎಲ್ಲೆಡೆ ಕೃಷಿ ಚಟುವಟಿಕೆ ಆರಂಭವಾಗಿದೆ. ತಾಲೂಕಿನಲ್ಲಿ ಶೇ.90 ಭಾಗ ಶೇಂಗಾ ಬೆಳೆಯಲಾಗುತ್ತದೆ. ತಾಲೂಕಿನಲ್ಲಿ ಕಳೆದ ಬಾರಿ 36,000 ರೈತರು ಬೆಳೆವಿಮೆ ಮಾಡಿಸಿದ್ದು ಇದು ಜಿಲ್ಲೆಯಲ್ಲೇ ಅಧಿಕವೆಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮಾಹಿತಿ ನೀಡಿ, ತಾಲೂಕಿನಲ್ಲಿ ೧೦೦ಕ್ಕೂ ಹೆಚ್ಚು ಪ್ರೌಢಶಾಲೆ, 380 ಪ್ರಾಥಮಿಕ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ, 45 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಈ ಬಾರಿ ಎಸ್‌.ಎಸ್‌.ಎಲ್‌.ಸಿ ಫಲಿತಾಂಶ ನಿರೀಕ್ಷೆ ಮಟ್ಟದಲ್ಲಿ ದಾಖಲಾಗಿಲ್ಲ. ಆದ್ದರಿಂದ ಇದರ ಬಗ್ಗೆ ಹೆಚ್ಚು ಗಮನಹರಿಸಲು ತಾಲೂಕು ಮಟ್ಟದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆ ಆಯೋಜಿಸಲಾಗಿದೆ ಎಂದರು.

ತೋಟಗಾರಿಕೆ, ಪಶುವೈದ್ಯ, ರೇಷ್ಮೆ ಅಧಿಕಾರಿಗಳಿಗೆ, ತಮ್ಮ ವ್ಯಾಪ್ತಿಯಲ್ಲಿರುವ ರೈತರ ಸಮೂಹಕ್ಕೆ ಉಪಯುಕ್ತ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ಸೂಚಿಸಿದ ಶಾಸಕರು, ಎನ್‌.ಆರ್‌.ಇ.ಜಿ ಯೋಜನೆಯಡಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದರು. ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಎನ್.ಕಾವ್ಯ ಮಾಹಿತಿ ನೀಡಿ, ಕ್ಷೇತ್ರದ ಒಟ್ಟು 52 ರಸ್ತೆಗಳನ್ನು ಆಯ್ಕೆ ಮಾಡಿ ಸುಮಾರು 11.90 ಲಕ್ಷ ವೆಚ್ಚದಲ್ಲಿ ರಸ್ತೆಯ ಎರಡೂ ಭಾಗದ ಜಾಲಿಗಿಡಗಳನ್ನು ತೆರವುಗೊಳಿಸಲಾಗಿದೆ ಎಂದರು.

ಕೆ.ಎಸ್‌.ಆರ್‌.ಟಿ.ಸಿ ಡಿಸಿ ಶ್ರೀನಿವಾಸ್ ಮಾತನಾಡಿ, ಚಳ್ಳಕೆರೆ ಡಿಪೋಗೆ 7 ಬಸ್‌ಗಳನ್ನು ನೀಡಿದ್ದು ಗ್ರಾಮಾಂತರ ಪ್ರದೇಶಕ್ಕೆ ಹೆಚ್ಚಿನ ಸಾರಿಗೆ ಸೌಲಭ್ಯ ನೀಡಲಾಗುವುದು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಕಾಶಿ ಮಾಹಿತಿ ನೀಡಿ, ಯಾವುದೇ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು. ಸಮಾಜ ಕಲ್ಯಾಣಾಧಿಕಾರಿ ದೇವ್ಲಾನಾಯ್ಕ, ಎಸ್ಸಿ, ಎಸ್ಟಿ, ಮತ್ತು ಬಿಸಿಎಂ ಹಾಸ್ಟಲ್‌ಗಳ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಮಟ್ಟದ ಸರ್ಕಾರಿ ಅಧಿಕಾರಿಗಳು ಯಾವುದೇ ರಾಜಕೀಯ ವ್ಯಕ್ತಿಗಳ ಮಾತು ಕೇಳದೆ ಕಾನೂನಿನ ಅಡಿಯಲ್ಲಿ ಕೆಲಸ ನಿರ್ವಹಿಸಿ ಎಂದು ಶಾಸಕ ಟಿ.ರಘುಮೂರ್ತಿ ನೈತಿಕ ಪಾಠ ಮಾಡಿದರು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ, ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ ಮಂಜುನಾಥ, ಡಿವೈಎಸ್ಪಿ ರಾಜಣ್ಣ, ತಹಸೀಲ್ದಾರ್‌ ರೇಹಾನ್‌ಪಾಷ, ಚಿತ್ರದುರ್ಗ ತಹಸೀಲ್ದಾರ್ ನಾಗವೇಣಿ, ಪೌರಾಯುಕ್ತ ಕೆ. ಜೀವನ್‌ ಕಟ್ಟಿಮನಿ, ಕೆಎಸ್‌ಆರ್‌ಟಿಸಿ ಡಿಸಿ ಶ್ರೀನಿವಾಸ್ ಮುಂತಾದವರು ಭಾಗವಹಿಸಿದ್ದರು.----

೨೧ಸಿಎಲ್‌ಕೆ೧

ಚಳ್ಳಕೆರೆ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಸಭೆಯಲ್ಲಿ ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ೨೧ಸಿಎಲ್‌ಕೆ೦೧

ತ್ರೈಮಾಸಿಕ ಸಭೆಯಲ್ಲಿ ಪಾಲ್ಗೊಂಡಿದ್ದ ತಾಲ್ಲೂಕು ಮಟ್ಟದ ಅಧಿಕಾರಿಗಳು.