ಸಾರಾಂಶ
ಇತ್ತೀಚೆಗೆ ಪ್ರಧಾನಿ ಮೋದಿ ಅವರು ಒಂದು ರಾಷ್ಟ್ರ ಒಂದು ಚುನಾವಣೆ ಎಂಬ ಕ್ರಾಂತಿಕಾರಿ ಬೆಳವಣಿಗೆಗೆ ಅಡಿಪಾಯ ಹಾಕಿದ್ದು ಇದರಿಂದ ದೇಶದ ಅಭಿವೃದ್ಧಿಗೆ ವೇಗ ಬರಲಿದೆ
ಕನ್ನಡಪ್ರಭ ವಾರ್ತೆ ಮೈಸೂರು
ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ವರುಣ ಕ್ಷೇತ್ರದ ಅಳಗಂಚಿ, ಅಳಗಂಚಿಪುರ, ಇಮ್ಮಾವು, ಇಮ್ಮಾವು ಹುಂಡಿ, ಏಚಗಳ್ಳಿ ಮುಂತಾದ ಗ್ರಾಮಗಳಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಸದಸ್ಯತ್ವ ಅಭಿಯಾನ ನಡೆಸಿದರು.ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಮಂದಿ ಯುವಕರು ಬಿಜೆಪಿಗೆ ಸೇರ್ಪಡೆಯಾದರು.ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಇಡೀ ರಾಜ್ಯದಲ್ಲಿ ಬಿಜೆಪಿ ಸದಸ್ಯತ್ವ ನೋಂದಣಿ ಚುರುಕಾಗಿ ನಡೆಯುತ್ತಿದೆ. ಇದರ ನೇತೃತ್ವ ವಹಿಸಿರುವ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು, ಪ್ರತಿ ಜಿಲ್ಲೆಗೂ ತೆರಳಿ ಕಾರ್ಯಕರ್ತ ಮಿತ್ರರೊಂದಿಗೆ ಹಾಗೂ ಪಕ್ಷದ ಪದಾಧಿಕಾರಿಗಳೊಡನೆ ಪಕ್ಷ ಸಂಘಟಿಸಿ ಪ್ರತೀ ಜಿಲ್ಲೆಯಲ್ಲೂ ಸದಸ್ಯತ್ವ ನೋಂದಣಿ ಮಾಡಿಸುತ್ತಿದ್ದು ಇದರಿಂದ ಮುಂದಿನ ದಿನಗಳಲ್ಲಿ ಪಕ್ಷ ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎಂದರು.ಇತ್ತೀಚೆಗೆ ಪ್ರಧಾನಿ ಮೋದಿ ಅವರು ಒಂದು ರಾಷ್ಟ್ರ ಒಂದು ಚುನಾವಣೆ ಎಂಬ ಕ್ರಾಂತಿಕಾರಿ ಬೆಳವಣಿಗೆಗೆ ಅಡಿಪಾಯ ಹಾಕಿದ್ದು ಇದರಿಂದ ದೇಶದ ಅಭಿವೃದ್ಧಿಗೆ ವೇಗ ಬರಲಿದೆ ಎಂದು ಅವರು ಹೇಳಿದರು.ಒಂದು ರಾಷ್ಟ್ರ ಒಂದು ಚುನಾವಣೆ ಆಗುವುದರಿಂದ ಕಡಿಮೆ ಖರ್ಚಿನಲ್ಲಿ ಚುನಾವಣೆ ಮುಗಿಯಲಿದೆ ಹಾಗೂ ಒಂದು ರಾಷ್ಟ್ರ ಒಂದು ಚುನಾವಣೆಯು ದೊಡ್ಡ ಪ್ರಮಾಣದ ಹಣವನ್ನು ಉಳಿಸಲು ಸಹಾಯ ಮಾಡುತ್ತದೆ. 31 ರಾಜ್ಯಗಳಲ್ಲಿ ಸರಿಸುಮಾರು 4120 ಶಾಸಕರಿದ್ದಾರೆ. ಪ್ರತ್ಯೇಕವಾಗಿ ಚುನಾವಣೆ ನಡೆಸಲು ಪ್ರತಿ ಬಾರಿ ನೂರಾರು ಕೋಟಿ ವೆಚ್ಚವಾಗುತ್ತದೆ. ವ್ಯವಸ್ಥೆಗಳು, ವೇತನ ಮತ್ತು ಭದ್ರತೆಗಾಗಿ ಗಣನೀಯ ಪ್ರಮಾಣದ ಹಣ ಖರ್ಚು ಮಾಡಲಾಗುತ್ತದೆ. ವರ್ಷದಿಂದ ವರ್ಷಕ್ಕೆ ಚುನಾವಣೆಯ ಮೇಲೆ ಹೆಚ್ಚುತ್ತಿರುವ ವೆಚ್ಚ ಹೆಚ್ಚುತ್ತಿರುವುದನ್ನು ನಕ್ಷೆಯಲ್ಲಿ ತೋರಿಸಲಾಗಿದೆ ಎಂದರು.ಇದೆಲ್ಲವನ್ನು ಸರಿದೂಗಿಸಲು ಹಾಗೂ ದೇಶದ ಅಭಿವೃದ್ಧಿ ಗೆ ಆರ್ಥಿಕ ಹೊಡೆತ ಬೀಳದಿರುವಂತೆ ಈ ಒಂದು ನಿರ್ಧಾರ ಪರಿಣಾಮಕಾರಿ ಆಗಿದೆ. ಚುನಾವಣಾ ಅವಧಿಯಲ್ಲಿ ನೀತಿ ಸಂಹಿತೆ ಹೇರಲಾಗುತ್ತದೆ ಮತ್ತು ಅದು ಒಂದಲ್ಲ ಒಂದು ರಾಜ್ಯದಲ್ಲಿ ಆಗೊಮ್ಮೆ ಈಗೊಮ್ಮೆ ನಡೆಯುತ್ತದೆ. ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಜನಕಲ್ಯಾಣಕ್ಕಾಗಿ ಹೊಸ ಯೋಜನೆ ಆರಂಭಿಸಲು ಸಾಧ್ಯವಿಲ್ಲ. ಅದರಂತೆ ಒಂದು ಬಾರಿಯ ಚುನಾವಣೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳು, ಯೋಜನೆಗಳು ಮತ್ತು ಕಾರ್ಯಕ್ರಮಗಳಲ್ಲಿ ನಿರಂತರತೆಯನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು.ಐದು ವರ್ಷಗಳಿಗೊಮ್ಮೆ ಚುನಾವಣೆ ನಡೆಯುವುದಾದರೆ, ಆಡಳಿತ ಪಕ್ಷಗಳು ತಮ್ಮ ಸಮಯವನ್ನು ಮತದಾರರಿಂದ ಕಡ್ಡಾಯವಾಗಿ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಡಬಹುದು. ಅಲ್ಲದೆ ಸರ್ಕಾರವು ಲಾಭದಾಯಕ ಯೋಜನೆಗಳ ಮೂಲಕ ಸಾರ್ವಜನಿಕರನ್ನು ಓಲೈಸುವ ಅಗತ್ಯವಿಲ್ಲ ಮತ್ತು ಜಾತಿ ಮತ್ತು ಧರ್ಮ ಆಧಾರಿತ ಕಾರ್ಯಕ್ರಮಗಳನ್ನು ಮಾಡಬೇಕಾಗಿಲ್ಲ ಎಂದು ಅವರು ವಿವರಿಸಿದರು.ಒಬಿಸಿ ಜಿಲ್ಲಾಧ್ಯಕ್ಷ ಬಾಲಚಂದ್ರು ಮಾತನಾಡಿ, ಈಗಾಗಲೇ ದೇಶದಾದ್ಯಂತ ಬಿರುಸಾಗಿ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು, ನಮ್ಮ ಬಿಜೆಪಿ ತತ್ತ್ವ ಸಿದ್ದಾಂತ ಒಪ್ಪಿ ಹಲವಾರು ನಾಗರೀಕರು, ಯುವಕರು, ತಾಯಂದಿರು ಸದಸ್ಯತ್ವ ಪಡೆಯುತ್ತಿದ್ದು, ಇದರಿಂದ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ವೇಗ ದೊರೆಯುತ್ತದೆ ಎಂದರು.ವರುಣ ಕ್ಷೇತ್ರದ ಸಂಚಾಲಕ ನಗರ್ಲೆ ಮಹದೇವಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಮಾತನಾಡಿದರು.ಈ ವೇಳೆ ಇಮ್ಮಾವು ಮನು, ಇಮ್ಮಾವುಹುಂಡಿ ಮಹೇಶ್, ನಾಗೇಶ್ ಶೆಟ್ಟರು, ಅಳಗಂಚಿ ಶಿವಯ್ಯ, ತಾಪಂ ಸದಸ್ಯ ಅಳಗಂಚಿ ರಾಜೇಂದ್ರ, ಗುರುಸ್ವಾಮಿ, ಮಹದೇವಸ್ವಾಮಿ, ಸಂದೀಪ್, ನಿರಂಜನ್, ಸಿದ್ದಶೆಟ್ಟಿ, ಶಂಕರ, ಏಚಗಳ್ಳಿ ದಿನೇಶ್, ಶಿವಕುಮಾರ್ ಮೊದಲಾದವರು ಇದ್ದರು.