ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಪರಿಸರ ಉಳಿಸಲು ಸಾರ್ವಜನಿಕರು, ಸಂಘ ಸಂಸ್ಥೆಗಳು ಅರಣ್ಯ ಇಲಾಖೆಯ ಜೊತೆ ಕೈಜೋಡಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಹುಣಸೂರು ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಎ.ಸೀಮಾ ಹೇಳಿದರು.ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆಯು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿವಿ ಸಂಜೆ ಕಾಲೇಜು ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಗಿಡನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ಉಳಿಸುವುದು, ಗಿಡನೆಟ್ಟು ಪೋಷಿಸುವುದು ಕೇವಲ ಅರಣ್ಯ ಇಲಾಖೆಯ ಕೆಲಸವಲ್ಲ. ಇದು ಪ್ರತಿಯೊಬ್ಬರಿಗೂ ಸೇರಿದ್ದು. ಎಲ್ಲರ ಸಹಕಾರದಿಂದ ಮಾತ್ರ ಉತ್ತಮ ಪರಿಸರ ನಿರ್ಮಾಣ ಸಾಧ್ಯ. ಮರ- ಗಿಡೆಗಳನ್ನು ಬೆಳೆಸದಿದ್ದಲ್ಲಿ ಮಳೆಯಾಗುವುದಿಲ್ಲ. ಮಳೆಯಾಗದಿದ್ದಲ್ಲಿ ಬರಗಾಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು.
ಮೈಸೂರು ವಿವಿ ಕ್ಯಾಂಪಸ್ನಲ್ಲಿ ಮರ- ಗಿಡಗಳನ್ನು ಬೆಳೆಸಿ, ಹಸಿರುಮಯ ವಾತಾವರಣ ನಿರ್ಮಾಣ ಮಾಡಿರುವುದಕ್ಕೆ ಅವರು ಹರ್ಷ ವ್ಯಕ್ತಪಡಿಸಿದರು.ಗಾಂಧಿ ಭವನ ಹಾಗೂ ಪ್ರಾಚ್ಯವಿದ್ಯಾ ಸಂಶೋಧನಾಲಯದ ವಿಶ್ರಾಂತ ನಿರ್ದೇಶಕ ಪ್ರೊ.ಎಸ್. ಶಿವರಾಜಪ್ಪ ಮಾತನಾಡಿ, ಹಸಿರೇ ಉಸಿರು ಎಂಬ ಮಾತಿದೆ. ಪ್ರತಿಯೊಬ್ಬರೂ ಉಸಿರಾಡಲು ಶುದ್ಧ ಗಾಳಿಬೇಕು.ಇದಕ್ಕಾಗಿ ಮರಗಿಡಗಳನ್ನು ಬೆಳೆಸಬೇಕು ಎಂದು ಕರೆ ನೀಡಿದರು.
ಪರಿಸರ ಸಂರಕ್ಷಣೆಯ ವಿಷಯ ಇಂದು- ನಿನ್ನೆಯದಲ್ಲ. ತುಂಬಾ ಹಿಂದಿನಿಂದಲೂ ಪರಿಸರದ ವಿಷಯ ಪ್ರಸ್ತಾಪವಾಗಿದೆ. ಪರಿಸರ ಇದ್ದರೆ ನಾವು ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದರು.ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ. ನಿಂಗರಾಜ್ ಗೌಡ ಮಾತನಾಡಿ, ಹುಟ್ಟುಹಬ್ಬ ಮತ್ತಿತರ ಸಂದರ್ಭಗಳಲ್ಲಿ ಕೇಕ್ ಕತ್ತರಿಸುವುದರ ಜೊತೆಗೆ ಒಂದೊಂದು ಗಿಡ ನೆಡುವುದು ಉತ್ತಮ. ನಾನು ಮಾನಸ ಗಂಗೋತ್ರಿಯ ಸಿಸ್ಟ್ನಲ್ಲಿ ಕೆಲಸ ಮಾಡುವಾಗ ವಿದ್ಯಾರ್ಥಿಗಳ ಹುಟ್ಟುಹಬ್ಬದಂದು ಗಿಡ ನೆಡಸುತ್ತಿದ್ದೆ. ಇದರಿಂದಾಗಿಯೇ ಸೆನೆಟ್ ಭವನದ ಆವರಣ ಹಸಿರಾಗಿದೆ ಎಂದರು.
ವಿವಿ ಕ್ಯಾಂಪಸ್ ಹಸಿರಾಗಿರಲು ತೋಟಗಾರಿಕೆ ವಿಭಾಗದ ಸಹಾಯಕ ನಿರ್ದೇಶಕ ಎಸ್.ಕೆ. ಮುಜಾವರ್ ಅವರ ಶ್ರಮವೂ ಕಾರಣ ಎಂದ ಅವರು, ಗಿಡ ನೆಟ್ಟ ನಂತರ ಪೋಷಣೆಯೂ ಮುಖ್ಯ. ಆಕಸ್ಮಿಕವಾಗಿ ಗಿಡ ಹಾಳಾದರೇ ಅದೇ ಜಾಗದಲ್ಲಿ ಮತ್ತೊಂದು ಗಿಡ ನೆಡಿ. ಗಿಡ ನೆಟ್ಟವರು ಹೆಸರಿನ ಫಲಕ ಹಾಕಿ. ಇದರಿಂದ ನೆಟ್ಟವರು ಆ ಕಡೆ ಬಂದು ನೋಡಿಕೊಳ್ಳುವ ಹೊಣೆಗಾರಿಕೆ ಬೆಳೆಯುತ್ತದೆ ಎಂದರು.ಆರ್ಎಫ್ಒ ರಶ್ಮಿ ಮಾತನಾಡಿ, ಗಿಡ ನೆಟ್ಟು ಭೂಮಿ ಉಳಿಸಿ ಎಂಬ ಧ್ಯೇಯದೊಂದಿಗೆ ಅರಣ್ಯ ಇಲಾಖೆ ಕೆಲಸ ಮಾಡುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಬೇಕು. ಶುದ್ಧವಾಗ ಆಮ್ಲಜನಕ ಬೇಕಾದರೆ ಮರಗಿಡಗಳನ್ನು ಬೆಳೆಸಲೇಬೇಕು ಎಂದರು.
ಅರಣ್ಯ ಇಲಾಖೆ ಪತ್ರಾಂಕಿತ ವ್ಯವಸ್ಥಾಪಕಿ ಬಿ. ಪ್ರಮೀಳಾ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಡಿಸಿಆರ್ಬಿ ಇನ್ಸ್ಪೆಕ್ಟರ್ ರಾಮಕುಮಾರ್, ಪ್ರಾಂಶುಪಾಲರಾದ ಮಹಾರಾಜ ಕಾಲೇಜಿನ ಪ್ರೊ.ಎಚ್. ಸೋಮಶೇಖರಪ್ಪ, ಯುವರಾಜ ಕಾಲೇಜಿನ ಪ್ರೊ.ಎಂ.ಕೆ. ಮಹೇಶ್, ಸಂಜೆ ಕಾಲೇಜಿನ ಪ್ರೊ.ಎಸ್. ಮಹದೇವಮೂರ್ತಿ, ಮಾನಸ ಗಂಗೋತ್ರಿ ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕಿ ಡಾ.ಎಚ್.ಪಿ. ಜ್ಯೋತಿ, ಮೈವಿವಿ ತೋಟಗಾರಿಕೆ ವಿಭಾಗದ ಸಹಾಯಕ ನಿರ್ದೇಶಕ ಎಸ್.ಕೆ. ಮುಜಾವರ್, ವಿಶ್ವಮಾನವ ವಿವಿ ನೌಕರರ ವೇದಿಕೆ ಅಧ್ಯಕ್ಷ ಆರ್. ವಾಸುದೇವ, ನಿರ್ದೇಶಕಿ ಚೆಲುವಾಂಬಿಕೆ, ಭಾಸ್ಕರ್, ವಿನೋದ್, ಯೋಗೇಶ್, ವಿವೇಕ್, ಗಣೇಶ್ ಮೊದಲಾದವರು ಇದ್ದರು.