ಸಾರಾಂಶ
ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ದಿ. 21 ರ ಸೋಮವಾರದಂದು ಹೋರಾಟ ನಡೆಸಲಿವೆ ಎಂದು ಮಾಜಿ ಶಾಸಕ ಮಸಾಲಾ ಜಯರಾಮ್ ಹೇಳಿದರು.
ಕನ್ನಡಪ್ರಭವಾರ್ತೆ, ತುರುವೇಕೆರೆ
ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ದಿ. 21 ರ ಸೋಮವಾರದಂದು ಹೋರಾಟ ನಡೆಸಲಿವೆ ಎಂದು ಮಾಜಿ ಶಾಸಕ ಮಸಾಲಾ ಜಯರಾಮ್ ಹೇಳಿದರು. ತಮ್ಮ ಫಾರಂ ಹೌಸ್ ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರದ ದುರಾಡಳಿತ ಮಿತಿ ಮೀರಿದೆ. ಪ್ರತಿಯೊಂದು ವಸ್ತುವಿನ ಬೆಲೆಯೂ ಹೆಚ್ಚಾಗಿದೆ. ಜನ ಸಾಮಾನ್ಯರು ಬದುಕುವುದೇ ದುಸ್ತರವಾಗಿದೆ. ಜನ ಸಾಮಾನ್ಯರು ಈ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು. ಕಾಂಗ್ರೆಸ್ ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಅಧಿಕಾರಕ್ಕೆ ಬಂತು. ತದ ನಂತರ ಜನ ಸಾಮಾನ್ಯರನ್ನು ಶೋಷಿಸುತ್ತಲೇ ಬಂದಿದೆ. ಪ್ರಯಾಣ ದರ ಏರಿಕೆ, ಪೆಟ್ರೋಲ್, ಡೀಸೆಲ್ ದರ ಏರಿಕೆ, ವಿದ್ಯುತ್ ದರ ಏರಿಕೆ, ಲಿಕ್ಕರ್ ಬೆಲೆ ಏರಿಕೆ, ನೋಂದಣಿ ಶುಲ್ಕ ಏರಿಕೆ, ಹಾಲಿನ ದರ ಏರಿಕೆ ಸೇರಿದಂತೆ ಹಲವಾರು ವಸ್ತುಗಳ ಬೆಲೆಯನ್ನು ಮನಸಾ ಇಚ್ಚೆ ಏರಿಸಿದೆ. ಗ್ಯಾರಂಟಿ ಯೋಜನೆ ಕೊಡುವುದಾಗಿ ನಂಬಿಸಿ ಜನರನ್ನು ಮೋಸ ಮಾಡಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣರಾಗಿದ್ದ ಜನರೇ ಈಗ ಕಾಂಗ್ರೆಸ್ ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಮಸಾಲಾ ಜಯರಾಮ್ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ದ ಬಿಜೆಪಿ ಮತ್ತು ಜೆಡಿಎಸ್ ಸಮರಕ್ಕೆ ಇಳಿದಿವೆ. ಹಿಂದೆ ಆಡಳಿತ ನಡೆಸಿದ್ದ ಬಿಜೆಪಿ ವಿರುದ್ಧ 40 ಪರ್ಸೆಂಟ್ ಸರ್ಕಾರ ಎಂದು ಆಧಾರ ರಹಿತ ಆರೋಪ ಮಾಡಿದ್ದ ಕಾಂಗ್ರೆಸ್ ಸರ್ಕಾರ ಈಗ 60 ರಿಂದ 80 ಪರ್ಸೆಂಟ್ ಸರ್ಕಾರವಾಗಿದೆ. ಈ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ವಿರೋಧ ಪಕ್ಷಗಳು ಕಾಂಗ್ರೆಸ್ ಸರ್ಕಾರವನ್ನು ಖಂಡಿಸುವುದೇನೂ ಹೊಸದಲ್ಲ. ಆದರೆ ಕಾಂಗ್ರೆಸ್ ಪಕ್ಷದ ಶಾಸಕರೇ ಈ ಸರ್ಕಾರದ ಧೋರಣೆ ವಿರುದ್ದ ಕಿಡಿಕಾರುತ್ತಿದ್ದಾರೆಂದು ಮಸಾಲಾ ಜಯರಾಮ್ ಹೇಳಿದರು. ಈ ಕಾಂಗ್ರೆಸ್ ಸರ್ಕಾರ ಒಂದೇ ಒಂದು ಸಮುದಾಯದ ಓಲೈಕೆಯಲ್ಲಿ ತೊಡಗಿದೆ ಎಂಬುದು ಇತ್ತೀಚಿನ ಅದರ ನಡವಳಿಕೆಯಿಂದ ಗೊತ್ತಾಗುತ್ತಿದೆ. ಮುಸ್ಲಿಂ ಸಮುದಾಯದ ಓಲೈಕೆಗಾಗಿ ಇಲ್ಲದ ಕಸರತ್ತು ಮಾಡುತ್ತಿದೆ. ಈ ಕಾಂಗ್ರೆಸ್ ಸರ್ಕಾರ ಕೇವಲ ಮುಸ್ಲಿಮರ ಏಳ್ಗೆಗಾಗೇ ಇದೆಯೇನೋ ಎಂಬ ಭಾವನ ಜನಸಾಮಾನ್ಯರಲ್ಲಿ ಮೂಡಿದೆ ಎಂದರು. ಜೆಡಿಎಸ್ ಮತ್ತು ಬಿಜೆಪಿ ನೇತೃತ್ವದಲ್ಲಿ 21 ರ ಸೋಮವಾರದಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಎರಡೂ ಪಕ್ಷಗಳ ಸುಮಾರು 10 ಸಾವಿರ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ತಾಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳು, ಆಟೋ ಚಾಲಕರು, ಮಾಲೀಕರು, ಜನ ಸಾಮಾನ್ಯರೂ ಸಹ ಈ ಪ್ರತಿಭಟನೆಯಲ್ಲಿ ಸ್ವ ಇಚ್ಚೆಯಿಂದ ಪಾಲ್ಗೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು. ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆಯವರು ಬಿಜೆಪಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಹವಣಿಸುತ್ತಿದೆ ಎಂದು ದೂರಿದ್ದಾರೆ. ಆದರೆ ಅದು ಸುಳ್ಳು. ಕಾಂಗ್ರೆಸ್ ಸರ್ಕಾರವನ್ನು ಕಾಂಗ್ರೆಸ್ ನ ಶಾಸಕರೇ ಉರುಳಿಸುತ್ತಾರೆ. ಸರ್ಕಾರದ ಕೆಟ್ಟ ಆಡಳಿತದಿಂದ ಬೇಸತ್ತಿರುವ ಕಾಂಗ್ರೆಸ್ ಪಕ್ಷದ ಶಾಸಕರೇ ಈ ಭಂಡ ಸರ್ಕಾರವನ್ನು ಶೀಘ್ರದಲ್ಲೇ ಬೀಳಿಸಲಿದ್ದಾರೆಂದು ಮಾಜಿ ಶಾಸಕ ಮಸಾಲಾ ಜಯರಾಮ್ ಭವಿಷ್ಯ ನುಡಿದರು. ಜಾತಿ ಗಣತಿ ಬಗ್ಗೆ ಎಲ್ಲಾ ಪಕ್ಷಗಳ ವಿರೋಧವಿದೆ. ಕಾಂಗ್ರೆಸ್ ಪಕ್ಷದ ಹಲವಾರು ಶಾಸಕರು ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರಲ್ಲೂ ಸಹ ಮುಸ್ಲಿಂ ಸಮುದಾಯವನ್ನು ಮಂಚೂಣಿಗೆ ತರುವ ಹುನ್ನಾರವನ್ನು ಈ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಇದು ಸಮಾಜವನ್ನು ಒಡೆದು ಆಡುವ ನೀತಿ. ಮುಂಬರುವ ದಿನಗಳಲ್ಲಿ ಜನರು ಈ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಶಾಸ್ತಿ ಮಾಡಲಿದ್ದಾರೆಂದು ಹೇಳಿದರು. ರಾಜ್ಯದಲ್ಲಿ ಯಾರ ಮನೆಗೆ ಸಮೀಕ್ಷೆ ಬಂದಿದ್ದಾರೆ ಹೇಳಿ. ಯಾರ ಮನೆಗೂ ಸಮೀಕ್ಷೆ ಮಾಡಲು ಬಂದಿಲ್ಲ. ಕೂತಲ್ಲೇ ಸಮೀಕ್ಷೆ ನಡೆಸಿದ್ದಾರೆ. ಇದೊಂದು ಅವೈಜ್ಞಾನಿಕ ಸಮೀಕ್ಷೆ ಎಂದು ಕಿಡಿಕಾರಿದರು. ಈ ಸಂದರ್ಭದಲ್ಲಿ ತುರುವೇಕೆರೆ ಮಂಡಲ ಅಧ್ಯಕ್ಷರಾದ ಕಲ್ಕೆರೆ ಮೃತ್ಯುಂಜಯ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸ್ವಪ್ನ ನಟೇಶ್, ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಚಿದಾನಂದ್, ಆಂಜನಪ್ಪ, ಪ್ರಭಾಕರ್, ಆಶಾ ರಾಜಶೇಖರ್, ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ಸೋಮಶೇಖರ್, ಮಾಚೇನಹಳ್ಳಿ ರಾಮಣ್ಣ, ಅರಳೀಕೆರೆ ಶಿವಯ್ಯ, ದಬ್ಬೇಘಟ್ಟ ಮಹೇಶ್, ಹರಿಕಾರನಹಳ್ಳಿ ಪ್ರಸಾದ್, ಸಿದ್ದಪ್ಪಾಜಿ, ಜಗದೀಶ್, ಜಿಲ್ಲಾ ಮಹಿಳಾ ಘಟಕದ ಪದಾದಿಕಾರಿಗಳಾದ ಅನಿತಾ ನಂಜುಂಡಸ್ವಾಮಿ, ಉಮಾರಾಜ್, ಯುವ ಮೋರ್ಚಾ ಅಧ್ಯಕ್ಷ ಗೌರೀಶ್, ಭರತ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.