ಬರಗಾಲದ ನಡುವೆ ಪಟ್ಟಣ ಸೇರಿದಂತೆ ತಾಲೂಕಿನ ಹಳ್ಳಿಗಳಲ್ಲಿ ಮನೆ-ಮನೆಗೆ ಜೋಕುಮಾರನ ಆಗಮನವಾಗಿದ್ದು, ಇನ್ನಾದರೂ ಮಳೆ ಸುರಿದೀತೇ? ಎಂದು ಜನ ಬಾನಿನತ್ತ ಕತ್ತೆತ್ತಿ ನೋಡುತ್ತಿದ್ದಾರೆ.
ಬಿಂದುಮಾಧವ ಮಣ್ಣೂರ
ಕನ್ನಡಪ್ರಭ ವಾರ್ತೆ ಅಫಜಲಪುರಬರಗಾಲದ ನಡುವೆ ಪಟ್ಟಣ ಸೇರಿದಂತೆ ತಾಲೂಕಿನ ಹಳ್ಳಿಗಳಲ್ಲಿ ಮನೆ-ಮನೆಗೆ ಜೋಕುಮಾರನ ಆಗಮನವಾಗಿದ್ದು, ಇನ್ನಾದರೂ ಮಳೆ ಸುರಿದೀತೇ? ಎಂದು ಜನ ಬಾನಿನತ್ತ ಕತ್ತೆತ್ತಿ ನೋಡುತ್ತಿದ್ದಾರೆ.
ಅಗಲ ಮುಖ, ದೊಡ್ಡ ಕಣ್ಣು, ಹುರಿ ಮೀಸೆ, ತೆರೆದ ಬಾಯಿ, ಹಣೆಗೆ ವಿಭೂತಿ, ಕುಂಕುಮದ ಪಟ್ಟಿಗಳು, ಕೈಯಲ್ಲಿ ಸಣ್ಣ ಕತ್ತಿ ಹಿಡಿದ ಮಣ್ಣಿನ ಜೋಕುಮಾರ ಜನರ ಬಾಯಲ್ಲಿ ಜೋಕಪ್ಪ. ಆತನ ಮೂರ್ತಿಯನ್ನು ದೊಡ್ಡ ಬಿದಿರು ಬುಟ್ಟಿಯಲ್ಲಿ ಬೇವಿನ ಸೊಪ್ಪಿನ ನಡುವೆ ಇಟ್ಟುಕೊಂಡು ಬರುವ ಮಹಿಳೆಯರ ಹಾಡು ಸಂಭ್ರಮವನ್ನು ಕುರಿತು ಹೇಳುತ್ತವೆ. ರೈತರ ಬದುಕು ಹಸನಾಗಲಿ ಎಂಬ ಹಾರೈಕೆಯೇ ಈ ಹಾಡುಗಳ ಮುಖ್ಯ ಆಶಯ ಎಂಬುದು ವಿಶೇಷ.ಅಡ್ಡಡ್ಡ ಮಳೆ ಬಂದು ದೊಡ್ಡ ದೊಡ್ಡ ಕೆರಿ ತುಂಬಿ ಗೊಡ್ಡುಗಳೆಲ್ಲ ಹೈನಾಗೆ ಜೋಕುಮಾರ ಎಂದು ಸುಶ್ರಾವ್ಯವಾಗಿ ಹಾಡುತ್ತ ಮನೆ ಮನೆಗೆ ಬರುವ ಮಹಿಳೆಯರು ಹೊಸ ತಲೆಮಾರಿನವರಲ್ಲಿ ಅಚ್ಚರಿ ಮೂಡಿಸುತ್ತಾರೆ. ಹಬ್ಬದ ದಿನಗಳಲ್ಲಿ ಜೋಕುಮಾರನ ಮೂರ್ತಿ ಹೊತ್ತು ಮನೆಮನೆಗೆ ತಿರುಗಿ ಧಾನ್ಯ ಹಾಗೂ ದಕ್ಷಿಣೆ ಪಡೆಯಲಾಗುತ್ತದೆ. ಕೊನೆಯಲ್ಲಿ ಈ ಮೂರ್ತಿಯನ್ನು ನೀರಿನಲ್ಲಿ (ಬಾವಿ ಅಥವಾ ನದಿ) ವಿಸರ್ಜಿಸಲಾಗುತ್ತದೆ.ಜೋಕುಮಾರನನ್ನು ಹೊತ್ತು ಬರುವುದರಿಂದ ಮಹಿಳೆಯರಿಗೆ ಸಿಗುವ ಆದಾಯ ಅಷ್ಟಕ್ಕಷ್ಟೇ. ಆದರೆ ಉತ್ಸಾಹಕ್ಕೆ ಮಾತ್ರ ಬರಗಾಲವಿಲ್ಲ. ಗಣಪ ಹುಟ್ಟಿದ ಐದನೇ ದಿನಕ್ಕೆ ಹುಟ್ಟುತ್ತಾನೆ ಎನ್ನಲಾಗುವ ಜೋಕುಮಾರನ ಆಚರಣೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವುದೂ ನಿಜ.
ಗಂಗಾ ಮತಸ್ಥರ ಮನೆಯಲ್ಲಿ ಹುಟ್ಟುವ ಜೋಕುಮಾರನನ್ನು, ಆ ಮನೆತನದ ಮಹಿಳೆಯರು ಹೊತ್ತು ಮನೆ ಮನೆಗೆ ತೆರಳುತ್ತಾರೆ. ಈ ಆಚರಣೆಗೆಂದೇ ನಿಗದಿತ ಹಾಗೂ ಸೀಮಿತವಾದ ಕುಟುಂಬಗಳಿವೆ. ಹಲವು ವರ್ಷಗಳ ಹಿಂದೆ ಏಳು ದಿನ ಕಾಲ ಜೋಕುಮಾರ ಸ್ವಾಮಿಯ ಹೊತ್ತು ಮನೆ ಮನೆಗೆ ತೆರಳುತ್ತಿದ್ದ ಮಹಿಳೆಯರಿಗೆ ಸಾಕಷ್ಟು ಪ್ರಮಾಣದಲ್ಲಿ ಜೋಳ, ಅಕ್ಕಿ, ಗೋಧಿ,ಕಾಸು ದೊರೆಯುತ್ತಿತ್ತು. ಈಗ ಸಮರ್ಪಕ ಮಳೆಯೂ ಇಲ್ಲ, ಜನರ ಬಳಿ ಜಾನುವಾರುಗಳು ಕಡಿಮೆಯಾಗಿವೆ. ಹೀಗಾಗಿ ಉದಾರವಾಗಿ ದಾನ ಕೊಡುವವರೂ ಕಡಿಮೆ. ಜೋಕುಮಾರ ಸ್ವಾಮಿಯ ಹೊತ್ತು ತಿರುಗುವವರೂ ಕಡಿಮೆಯಾಗಿದ್ದಾರೆ. ನಾವಂತೂ ಹೊತ್ತು ತಿರುಗುತ್ತೇವೆ ಎಂದು ಬಸಮ್ಮಾ ತಳವಾರ ಯಲ್ಲವ್ವ ತಳವಾರ ಮಹಾದೇವಿ ತಳವಾರ ಹೇಳಿದರು.ಏಳೇ ದಿನದಲ್ಲಿ ಸಾಯುತ್ತಾನೆ ಜೋಕುಮಾರ: ಜೋಕುಮಾರನ ಕುರಿತು ಹಾಡು ಹೇಳುವವರು ಮೊಟ್ಟ ಮೊದಲು ಗ್ರಾಮದ ಗೌಡರು, ಅಥವಾ ಶಾನಭೋಗರ, ಆಯಾಗಾರರ ಮನೆಗಳಿಗೆ ಭೇಟಿ ನೀಡುತ್ತಾರೆ. ನಂತರ 7 ದಿನ ಊರಿನ ವಿವಿಧ ಮನೆಗಳಿಗೆ ಸುತ್ತುತ್ತಾರೆ. ಹುಣ್ಣಿಮೆಯ ದಿನ ಅಂದರೆ ಏಳನೇ ದಿನಕ್ಕೆ ಜೋಕಪ್ಪ ಸಾಯುತ್ತಾನೆ. ನಂತರ ಜೋಕಪ್ಪನನ್ನು ಊರ ಹೊರಗೆ ಇರುವ ಅಗಸರು ಬಟ್ಟೆ ಒಗೆಯುವ ಬಂಡೆಯ ಅಡಿಯಲ್ಲಿ ಹಾಕಿ ಬರುತ್ತಾರೆ. ಇದು ಹುಣ್ಣಿಮೆಯಂದು ನಡೆಯುವುದರಿಂದ ಜೋಕುಮಾರ ಹುಣ್ಣಿಮೆ ಎಂದೂ ಕರೆಯುತ್ತಾರೆ. ಸಂಚಾರದ ಸಂದರ್ಭದ ದೊರೆತ ಧಾನ್ಯಗಳಿಂದ ಅಡುಗೆ ಮಾಡಿ ಸಾಮೂಹಿಕ ಭೋಜನ ಮಾಡುತ್ತಾರೆ.ಬರಗಾಲದಲ್ಲೇ ಜೋಕುಮಾರ ಹೆಚ್ಚು ಪ್ರಸ್ತುತ: ಜೋಕುಮಾರ ಗಂಗೆಯಲ್ಲಿ ವಿಲೀನಗೊಂಡು ಸ್ವರ್ಗಕ್ಕೆ ತೆರಳುತ್ತಾನಂತೆ. ಆತ ಗಂಗೆ ಪಾರ್ವತಿಯೊಡಗೂಡಿರುವ ಪರಮೇಶ್ವರನಿಗೆ, ಭೂಲೋಕದಲ್ಲಿ ಭಾರೀ ಬರ ಅವರಿಸಿದ್ದು, ಮಳೆ ಬೆಳೆ ಅನಿವಾರ್ಯವಿದೆ ಎಂದು ವರದಿ ಒಪ್ಪಿಸುತ್ತಾನಂತೆ. ಆಗ ಪರಮೇಶ್ವರ, ಗಂಗೆಯನ್ನು ಪಾತಾಳದಿಂದ ಭೂಮಂಡಲದ ಮೇಲ್ಭಾಗಕ್ಕೆ ತೆರಳುವಂತೆ ಸೂಚಿಸುತ್ತಾನೆ. ಜತೆಗೆ ವರುಣನಿಗೆ ಮೊಡದ ಮೂಲಕ ಸಾಕಷ್ಟು ಮಳೆಯನ್ನು ಸುರಿಸಲು ಸೂಚಿಸುತ್ತಾನೆ ಎಂಬ ನಂಬಿಕೆ, ಕತೆಗಳಿವೆ. ಕಾಕತಾಳೀಯವೋ ಪವಾಡವೋ ಎಂಬಂತೆ ಜೋಕುಮಾರ ಕಾಣಿಸಿಕೊಂಡ ಕಡೆಗಳಲ್ಲಿ ಮಳೆ ಸುರಿದ ಸಂದರ್ಭಗಳಿವೆ ಎಂದು ಹಿರಿಯರು ಹೇಳುತ್ತಾರೆ. ಈ ಬಾರಿ ತಾಲೂಕಿನಲ್ಲಿ ಜೋಕುಮಾರನ ದರ್ಶನ ಭಾಗ್ಯದಿಂದ ಮಳೆ ಸುರಿಯಲಿ ಎಂದು ಜನ ಹಾರೈಸುತ್ತಿದ್ದಾರೆ.