ಸಾರಾಂಶ
ಗ್ರಾಮೀಣ ಪ್ರದೇಶದಲ್ಲಿ ಹಬ್ಬದ ಆಚರಣೆ ಆರಂಭ
ಬುಟ್ಟಿಯಲ್ಲಿಟ್ಟುಕೊಂಡು ಮನೆ ಮನೆಗೆ ಹೋಗುವ ಮಹಿಳೆಯರುಸಿ.ಕೆ. ನಾಗರಾಜ
ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿಗಣೇಶನ ವಿಸರ್ಜನೆಯಾದ ನಂತರ ಮರುದಿನ ಆರಂಭವಾಗುವ ಜೋಕುಮಾರಸ್ವಾಮಿ ಹಬ್ಬದ ಆಚರಣೆಯು ಈಗಾಗಲೇ ಪಟ್ಟಣ ಸೇರಿದಂತೆ ಹೋಬಳಿಯ ಗ್ರಾಮೀಣ ಪ್ರದೇಶದಲ್ಲಿ ಆರಂಭಗೊಂಡಿದೆ.
ಜೋಕುಮಾರಸ್ವಾಮಿಯನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿದರೆ, ಮಳೆ - ಬೆಳೆ ಸಮೃದ್ಧವಾಗಿ ಬರುತ್ತದೆ. ಜೊತೆಗೆ ಕೆಟ್ಟದ್ದನ್ನು ಹೋಗಲಾಡಿಸಿ ಸುಖ- ಶಾಂತಿ ನೀಡುತ್ತಾ ಮನುಷ್ಯರಿಗೆ ಒಳ್ಳೆಯದನ್ನೇ ಮಾಡುತ್ತಾನೆ ಎಂಬ ನಂಬಿಕೆ ಇದೆ.ಗಂಗಾಮತಸ್ಥರ ಮನೆಯಲ್ಲಿ ಜನಿಸಿದ ಎನ್ನುವ ಕಾರಣಕ್ಕೆ ಬಾರಕೇರ ಸಮಾಜದ ಮಹಿಳೆಯರು ಜೋಕುಮಾರಸ್ವಾಮಿ ಮೂರ್ತಿಯನ್ನು ಎಣ್ಣೆ, ಮಣ್ಣಿನಿಂದ ತಯಾರಿ, ಬೇವಿನ ತಪ್ಪಲು ತುಂಬಿದ ಬುಟ್ಟಿಯಲ್ಲಿ ಬೆಣ್ಣೆ, ಹೂವುಗಳಿಂದ ಪೂಜೆ ಮಾಡುತ್ತಾರೆ. ಮನೆ ಮನೆಗೆ ಹೊತ್ತುಕೊಂಡು ಹೋಗುವ ಮಹಿಳೆಯರು ಏಳು ದಿನಗಳ ಕಾಲ ಊರಲ್ಲಿ ಸಂಚರಿಸುತ್ತಾರೆ.
ಜೋಕುಮಾರಸ್ವಾಮಿಯ ಜನನ, ತುಂಟಾಟ, ಆತನ ಕೊಲೆಗೆ ಸಂಬಂಧಿಸಿದಂತಹ ಹಾಡುಗಳನ್ನು ಹಾಡಿ ಆತನ ಬಗ್ಗೆ ಇರುವ ಕಥೆ, ಲೀಲೆಯನ್ನು ಜನರಿಗೆ ತಿಳಿಸಿಕೊಡುತ್ತಾ, ದರ್ಶನ ಮಾಡಿಸುತ್ತಾರೆ.ಜೋಕುಮಾರಸ್ವಾಮಿಯನ್ನು ಹೊತ್ತ ಮಹಿಳೆಯರು ಮನೆಗೆ ಬಂದರೆ ಅಕ್ಕಿ, ಜೋಳ, ಬೆಲ್ಲ, ಎಣ್ಣೆ, ಬೆಣ್ಣೆ, ಉಪ್ಪು, ಹುಣಸೆಹಣ್ಣು, ಮೆಣಸಿನಕಾಯಿ ಸೇರಿದಂತೆ ಇತರೆ ಧಾನ್ಯಗಳನ್ನು ನೀಡಿ ಭಕ್ತಿ ಮೆರೆಯುತ್ತಾರೆ. ಮನೆಯವರು ಕೊಡುವ ಜೋಳಕ್ಕೆ ಮಹಿಳೆಯರು ಪ್ರತಿಯಾಗಿ ಮೊರದಲ್ಲಿ ಐದಾರು ಕಾಳು ಜೋಳ, ಬೇವಿನ ಸೊಪ್ಪು ನೀಡುತ್ತಾರೆ. ಜೋಳದ ಕಾಳನ್ನು, ಬೇವಿನ ಸೊಪ್ಪನ್ನು ಕಾಳಿನ ಸಂಗ್ರಹದಲ್ಲಿ ಹಾಕುತ್ತಾರೆ. ಹೀಗೆ ಮಾಡುವುದರಿಂದ ಪೈರುಗಳು ಹುಲುಸಾಗುತ್ತವೆ. ಧಾನ್ಯಗಳಿಗೆ ಹುಳುಬಾಧೆ ಕಾಣಿಸಿಕೊಳ್ಳುವುದಿಲ್ಲ ಎನ್ನುವುದು ರೈತರ ನಂಬಿಕೆ.
ಪೌರಾಣಿಕ ಕಥೆ:ಗಣೇಶ ಶಿಷ್ಟ ಸಂಸ್ಕೃತಿ ವಾರಸುದಾರನಾದರೆ, ಜೋಕುಮಾರಸ್ವಾಮಿ ಜಾನಪದ ಸಂಸ್ಕೃತಿಯ ಪ್ರತೀಕ. ಗಣೇಶ ಮತ್ತು ಜೋಕುಮಾರಸ್ವಾಮಿ ಇಬ್ಬರೂ ಒಂದು ವಾರ ಕಾಲ ಭೂ ಲೋಕ ಸಂಚರಿಸುತ್ತಾರೆ. ಗಣೇಶ ಕಡುಬಿನ ಭರ್ಜರಿ ಭೋಜನ ಸವಿದು ಹೋಗಿ ಭೂಲೋಕದಲ್ಲಿ ಎಲ್ಲರೂ ಸುಖವಾಗಿದ್ದಾರೆ ಎಂದು ಶಿವ-ಪಾರ್ವತಿಗೆ ವರದಿ ನೀಡುತ್ತಾನೆ. ಜೋಕುಮಾರಸ್ವಾಮಿ ಮಳೆ ಬೆಳೆ ಇಲ್ಲದೇ ಜನರು ಸಂಕಷ್ಟದಲ್ಲಿದ್ದಾರೆ. ಮಳೆ ಸುರಿಯದೇ ಹೋದರೆ ಭೂಲೋಕ ನರಕ ಕೂಪವಾಗುತ್ತದೆ ಎಂದು ಜನರ ಕಷ್ಟ ಕಾರ್ಪಣ್ಯಗಳ ಬಗ್ಗೆ ವರದಿ ಒಪ್ಪಿಸುತ್ತಾನೆ. ಇದರ ಪ್ರತೀಕವಾಗಿ ಗಣೇಶ ಹಬ್ಬದ ನಂತರ ಜೋಕುಮಾರಸ್ವಾಮಿ ಹಬ್ಬ ಆಚರಣೆ ಮಾಡಲಾಗುತ್ತದೆ.