ಸಾರಾಂಶ
ಭಟ್ಕಳ: ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವದ ಸಭಾ ಕಾರ್ಯಕ್ರಮದಲ್ಲಿ ಜಾಲಿ ಪಪಂ ಅಧ್ಯಕ್ಷೆ ಖಾಜೀಯಾ ಅಫ್ಸಾ ಹುಜೈಫಾ ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲು ಹಿಂದೇಟು ಹಾಕಿದರು.ಭಟ್ಕಳ ಉಪವಿಭಾಗಾಧಿಕಾರಿ ಡಾ. ನಯನಾ ಧ್ವಜಾರೋಹಣ ನೆರವೇರಿಸಿದ ಬಳಿಕ ಭುವನೇಶ್ವರಿ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಈ ವೇಳೆ ಕಸಾಪ ಘಟಕದ ಅಧ್ಯಕ್ಷ ಗಂಗಾಧರ ನಾಯ್ಕ ಪುಷ್ಪನಮನ ಸಲ್ಲಿಸಲು ಖಾಜೀಯಾ ಅಫ್ಸಾ ಹುಜೈಫಾ ಅವರನ್ನು ಕೇಳಿಕೊಂಡರು. ಆದರೆ ಅದನ್ನು ನಿರಾಕರಿಸಿದರು. ಪುನಃ ಡಾ. ನಯನಾ ಕೂಡ ಆಹ್ವಾನಿಸಿದ್ದರೂ ನಿರಾಕರಿಸಿ ದೂರ ಉಳಿದರು.ಜಾಲಿ ಪಪಂ ಆಗಿ ೧೦ ವರ್ಷ ಕಳೆದಿದ್ದು, ಈ ಹಿಂದೆ ಇಂತಹ ಘಟನೆ ನಡೆದಿರಲಿಲ್ಲ. ಇದೇ ಮೊದಲ ಬಾರಿಗೆ ಚುನಾಯಿತ ಪ್ರತಿನಿಧಿಯೊಬ್ಬರು ಪುಷ್ಪನಮನ ಸಲ್ಲಿಸಲು ನಿರಾಕರಿಸಿದ್ದು, ಖಾಜೀಯಾ ಅಫ್ಸಾ ಹುಜೈಫಾ ಮೂರು ತಿಂಗಳ ಹಿಂದೆಯಷ್ಟೇ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ್ದರು.
ಭಟ್ಕಳ ತಾಲೂಕಿನ ಯಾವುದೇ ಸ್ಥಳೀಯ ಸಂಸ್ಥೆಯಾಗಿರಲಿ, ಜಾಲಿ ಪಟ್ಟಣ ಪಂಚಾಯಿತಿಯಾಗಿರಲಿ ಯಾವುದೇ ಧರ್ಮದವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಪುಷ್ಪನಮನ ಸಲ್ಲಿಸುತ್ತಿದ್ದರು. ಈಗ ಜಾಲಿ ಪಪಂ ಅಧ್ಯಕ್ಷೆ ಪುಷ್ಪನಮನ ಸಲ್ಲಿಸಲು ನಿರಾಕರಿಸಿರುವುದು ಚರ್ಚೆಗೆ ಗ್ರಾಸವಾಗಿದೆ.ಕನ್ನಡ ಇತರೇ ಭಾಷೆಗಳಿಗೆ ಮಾದರಿ: ಡಾ. ನಯನಾ
ಭಟ್ಕಳ: ಕನ್ನಡ ಚೆಂದದ ಭಾಷೆಯಾಗಿದ್ದು, ಎಂಟು ಜ್ಞಾನ ಪೀಠ ಪ್ರಶಸ್ತಿ ಪಡೆದ ಕನ್ನಡ ಭಾಷೆ ಇತರ ಭಾಷೆಗಳಿಗೆ ಮಾದರಿ ಆಗಿದೆ ಎಂದು ಸಹಾಯಕ ಆಯುಕ್ತೆ ಡಾ. ನಯನಾ ತಿಳಿಸಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ಭಾಷೆ ಬಗ್ಗೆ ಪ್ರತಿಯೊಬ್ಬರೂ ಪ್ರೀತಿ, ವಿಶ್ವಾಸ, ಅಭಿಮಾನ ಬೆಳೆಸಿಕೊಳ್ಳಬೇಕು. ಕರ್ನಾಟಕ ಏಕೀಕರಣವಾಗಲು ಅನೇಕರ ತ್ಯಾಗ, ಹೋರಾಟ, ಪರಿಶ್ರಮವಿದೆ. ಕನ್ನಡ ರಾಜ್ಯೋತ್ಸವವನ್ನು ಎಲ್ಲೆಡೆ ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ಭಟ್ಕಳದಲ್ಲೂ ಸಂಭ್ರಮದಿಂದ ಆಚರಿಸಲಾಗಿದೆ ಎಂದರು.ಉಪನ್ಯಾಸ ನೀಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ಅವರು, ಕನ್ನಡಕ್ಕೆ ತನ್ನದೇ ಇತಿಹಾಸ ಇದೆ. ನಮ್ಮ ನಾಡಗೀತೆ ವೈಶಿಷ್ಟ್ಯತೆಯನ್ನು ಹೊಂದಿದ್ದು, ಸಂಸ್ಕೃತಿ ಮತ್ತು ವೈಚಾರಿಕತೆಯಿಂದ ಕೂಡಿದೆ. ಹಲವರು ಹೋರಾಟದಿಂದ ಕನ್ನಡ ಏಕೀಕರಣಗೊಂಡಿದೆ. ಕನ್ನಡ ಅಂದದ ಮತ್ತು ಚೆಂದದ ಭಾಷೆಯಾಗಿದ್ದು, ವಿದೇಶಿಗರಿಂದಲೂ ಮೆಚ್ಚುಗೆ ಪಡೆದಿದೆ ಎಂದರು.
ಪುರಸಭೆ ಉಪಾಧ್ಯಕ್ಷ ಅಲ್ತಾಪ್ ಖರೂರಿ, ಜಾಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಹಪ್ಸಾ ಖಾಜೀಯಾ, ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ಜಾಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜಪ್ಪ ಇದ್ದರು.ತಹಸೀಲ್ದಾರ್ ಅಶೋಕ ಭಟ್ಟ ಸ್ವಾಗತಿಸಿದರು. ಶಿಕ್ಷಕ ಶ್ರೀಧರ ಶೇಟ್ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ ವಂದಿಸಿದರು. ಕಾರ್ಯಕ್ರಮದಲ್ಲಿ ಜಾನಪದ ಕಲೆಯಲ್ಲಿ ಸಾಧನೆ ಮಾಡಿದ ಕೃಷ್ಣ ಮಾಸ್ತಿ ಗೊಂಡ ಹದ್ಲೂರು, ಸಾಹಿತ್ಯದಲ್ಲಿ ಮಂಜುನಾಥ ಮರುಡೇಶ್ವರ, ಯಕ್ಷಗಾನದಲ್ಲಿ ಅಚ್ಯುತ ವೈದ್ಯ ಬೈಲೂರು, ನಾಟಕದಲ್ಲಿ ರಘುರಾಮ ಮಡಿವಾಳ ಆಸರಕೇರಿ, ಸೋಬಾನೆ ಪದದಲ್ಲಿ ಕಾಳಿ ಸಂಕಯ್ಯ ಗೊಂಡ ಹಡಾಳ ಉತ್ತರಕೊಪ್ಪ, ಸಂಗೀತದಲ್ಲಿ ಮಂಜುಳಾ ಶಿರೂರಕರ್ ಸರ್ಕಾರಿ ಪ್ರೌಢಶಾಲೆ ಮುಂಡಳ್ಳಿ, ಹೇಮಾ ನಾಯ್ಕ ಶಿರಾಣಿ ಕಿರಿಯ ಪ್ರಾಥಮಿಕ ಶಾಲೆ, ಸಂಗೀತ(ಭಜನೆ)ಗಣಪತಿ ಶಿರೂರು ನ್ಯೂ ಇಂಗ್ಲಿಷ್ ಪ್ರೌಢಶಾಲೆ, ಸಮಾಜ ಸೇವೆಯಲ್ಲಿ ಡಿ.ಬಿ. ನಾಯ್ಕ ಜಾಲಿಮ, ಫಯ್ಯಾಜ್ ಮುಲ್ಲಾ ಉಸ್ಮಾನ ನಗರ, ಪತ್ರಕರ್ತರ ವಿಭಾಗದಲ್ಲಿ ಹಿರಿಯ ಪತ್ರಕರ್ತ ವಿಷ್ಣು ದೇವಡಿಗ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆ ಸೇರಿದಂತೆ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಚೇರಿ ದೀಪ ಅಲಂಕಾರದಲ್ಲಿ ಪುರಸಭೆ ಪ್ರಥಮ ಮತ್ತು ಸ್ತಬ್ಧಚಿತ್ರದಲ್ಲಿ ಅರಣ್ಯ ಇಲಾಖೆ ಪ್ರಥಮ ಸ್ಥಾನ ಪಡೆಯಿತು. ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಕನ್ನಡ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ತಾಲೂಕು ಕ್ರೀಡಾಂಗಣಕ್ಕೆ ತೆರಳಲಾಯಿತು.