ಸಾರಾಂಶ
ಮತ ಎಣಿಕೆ ಸಮಯದಲ್ಲಿ ಜೋಶಿ ಅವರು ಆರಂಭದಿಂದ ಮುನ್ನಡೆ ಸಾಧಿಸಿದರೂ ದೊಡ್ಡ ಮೊತ್ತದ ಮತಗಳ ಅಂತರ ಹೊಂದಲು ಸಾಧ್ಯವಾಗಲಿಲ್ಲ. ಒಟ್ಟು 21 ಸುತ್ತುಗಳ ಮತಗಳ ಎಣಿಕೆಯಲ್ಲಿ ಹಲವು ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಜೋಶಿ ಅವರಿಗಿಂತ ಹೆಚ್ಚಿನ ಮತ ಪಡೆಯುತ್ತಿದ್ದು ಏರಿಳಿತ ಇತ್ತು.
ಬಸವರಾಜ ಹಿರೇಮಠ
ಧಾರವಾಡ:ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸತತವಾಗಿ ನಾಲ್ಕು ಬಾರಿ ವಿಜೇತರಾಗಿ, ಕೇಂದ್ರದ ಸಚಿವರೂ ಆಗಿದ್ದ ಪ್ರಹ್ಲಾದ ಜೋಶಿ 5ನೇ ಬಾರಿ ದಾಖಲೆಯ ಗೆಲುವು ಸಾಧಿಸಿದರೂ ಸುಲಭ, ಸರಳವಾಗಿರಲಿಲ್ಲ. ಕಳೆದ ನಾಲ್ಕೂ ಬಾರಿಗಿಂತಲೂ ಈ ಬಾರಿ ಅವರು ಭಗೀರಥ ಪ್ರಯತ್ನ ಪಡಬೇಕಾಯಿತು.
ಮತ ಎಣಿಕೆ ಸಮಯದಲ್ಲಿ ಜೋಶಿ ಅವರು ಆರಂಭದಿಂದ ಮುನ್ನಡೆ ಸಾಧಿಸಿದರೂ ದೊಡ್ಡ ಮೊತ್ತದ ಮತಗಳ ಅಂತರ ಹೊಂದಲು ಸಾಧ್ಯವಾಗಲಿಲ್ಲ. ಒಟ್ಟು 21 ಸುತ್ತುಗಳ ಮತಗಳ ಎಣಿಕೆಯಲ್ಲಿ ಹಲವು ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಜೋಶಿ ಅವರಿಗಿಂತ ಹೆಚ್ಚಿನ ಮತ ಪಡೆಯುತ್ತಿದ್ದು ಏರಿಳಿತ ಇತ್ತು. ಜೋಶಿ ಹತ್ತು ಸಾವಿರ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ ಎನ್ನುವಷ್ಟರಲ್ಲಿ ಎಂಟು ಸಾವಿರಕ್ಕೆ ಇಳಿಯುತ್ತಿತ್ತು. ಹೀಗೆ ಹಲವು ಸುತ್ತುಗಳಲ್ಲಿ ಏರಿಳಿತ ಕಂಡು ಶೇ. 80ರಷ್ಟು ಮತದಾನ ಮುಗಿಯುತ್ತಿದ್ದಾಗ ಜೋಶಿ ಅವರ ಗೆಲವು ನಿಶ್ಚಿತವಾಯಿತು. ಒಂದು ಹಂತದಲ್ಲಿ ಎರಡು ಬಾರಿ ಲಕ್ಷ ಮತಗಳ ಅಂತರ ಕಂಡಿದ್ದ ಜೋಶಿ ಕೊನೆಯ ಎರಡ್ಮೂರು ಸುತ್ತಿನಲ್ಲಿ ಲಕ್ಷದಿಂದ ಕೆಳಗೆ ಇಳಿದು ಕೊನೆಗೆ ಅಂತರ 97 ಸಾವಿರಕ್ಕೆ ಬಂದು ನಿಂತಿತು.ಕಾರಣವೇನು?
ಧಾರವಾಡ ಲೋಕಸಭಾ ಕ್ಷೇತ್ರದ ಪೈಕಿ ಕಲಘಟಗಿ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಬಹುತೇಕ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳ ಮತದಾರರು ಬಿಜೆಪಿ ಹಾಗೂ ಪಕ್ಷದ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರನ್ನು ಕೈ ಬಿಟ್ಟಿರುವುದೇ ಈ ರೀತಿ ಮತಗಳ ಏರಿಳಿತಕ್ಕೆ ಕಾರಣ. ನಗರ ವಾಸಿಗಳ ಮನಗೆಲ್ಲುವಲ್ಲಿ ಸಫಲಗೊಂಡಿರುವ ಬಿಜೆಪಿಯು ನಿರೀಕ್ಷಿತ ಪ್ರಮಾಣದಲ್ಲಿ ಗ್ರಾಮೀಣ ಮತ ಸೆಳೆಯುವಲ್ಲಿ ವಿಫಲಗೊಂಡಿರುವುದು ಮತಗಳ ಹಂಚಿಕೆಯಿಂದ ತಿಳಿದು ಬಂದಿದೆ. ಕಳೆದ ಮೂರು ಚುನಾವಣೆಗಳಿಗಿಂತ ಜೋಶಿ ಅವರಿಗೆ ಈ ಬಾರಿ ಕಡಿಮೆ ಮತಗಳ ಅಂತರದ ಗೆಲವು ಕಮಲ ಪಕ್ಷಕ್ಕೆ ಸಿಕ್ಕಿದೆ.ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ 32,737 ಮತಗಳ ಲೀಡ್ ನೀಡಿದ ಕಲಘಟಗಿ ವಿಧಾನಸಭಾ ಮತಕ್ಷೇತ್ರ ಸೇರಿದಂತೆ ಬಿಜೆಪಿಗೆ ಹುಬ್ಬಳ್ಳಿ-ಧಾರವಾಡ ನಗರ ವ್ಯಾಪ್ತಿ ಮೂರು ಕ್ಷೇತ್ರಗಳಲ್ಲಿಯೇ ಅಂತರ ಹೆಚ್ಚು ಸಿಕ್ಕಿದೆ. ಕುಂದಗೋಳ ಮತಕ್ಷೇತ್ರದಲ್ಲಿ 1,660 ಮತಗಳ ಅಲ್ಪ ಮುನ್ನಡೆ ಸಿಕ್ಕಿದೆ. ಆದರೆ, ಹು-ಧಾ ಸೆಂಟ್ರಲ್‌ನಲ್ಲಿ ಬರೋಬ್ಬರಿ 51,318 ಹಾಗೂ ಹು-ಧಾ ಪಶ್ಚಿಮ ಕ್ಷೇತ್ರಗಳಲ್ಲಿ 41,588 ಮತಗಳ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ ಜೋಶಿ. ನವಲಗುಂದದಲ್ಲಿ 17,212, ಶಿಗ್ಗಾವಿಯಲ್ಲಿ 8,598, ಹು-ಧಾ ಪೂರ್ವದಲ್ಲಿ 26,776 ಮತಗಳ ಹಿನ್ನಡೆಯನ್ನು ಬಿಜೆಪಿ ಅನುಭವಿಸಿದೆ.
ಕಾಂಗ್ರೆಸ್‌ನ ಡಿ.ಕೆ. ನಾಯ್ಕರ್ ನಂತರ (1996ರಿಂದ) ಬಿಜೆಪಿ ಭದ್ರಕೋಟಿ ಆಗಿರುವ ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ ನಿರಂತರವಾಗಿ ಗೆದ್ದಿದೆ. ಅದರಲ್ಲೂ 2004ರಿಂದ ಇಲ್ಲಿ ಪ್ರಹ್ಲಾದ ಜೋಶಿ ಸಂಸದರಾಗಿದ್ದಾರೆ. 2004ರ ಪ್ರಥಮ ಚುನಾವಣೆಯಲ್ಲಿ ಚಲಾವಣೆಗೊಂಡ 8.10ಲಕ್ಷ ಮತಗಳಲ್ಲೇ 83,074 ಮತಗಳ ಅಂತರದ ಗೆಲವು ದಾಖಲಿಸಿದ್ದ ಜೋಶಿ ನಂತರ ನಡೆದ ಮೂರು ಚುನಾವಣೆಗಳಲ್ಲಿ 1.37 ಲಕ್ಷ, 1.14ಲಕ್ಷ, 2.05 ಲಕ್ಷ ಮತಗಳ ಅಂತರದ ಗೆಲವು ಕಂಡಿದ್ದರು. ಆದರೆ, ಈ ವರ್ಷ ಗೆಲುವಿನ ಅಂತರ ಲಕ್ಷದೊಳಗಡೆ (97,324) ಬಂದಿದ್ದು ವಿಪರ್ಯಾಸ.20 ವರ್ಷ ಧಾರವಾಡ ಕ್ಷೇತ್ರದ ಸಂಸದರಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಇಷ್ಟಾಗಿಯೂ ಈ ಬಾರಿ ಗೆಲುವಿನ ಅಂತರ ಕಡಿಮೆಯಾಗಿದ್ದು, ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಒಟ್ಟಾರೆ ಗೆಲುವಾಗಿದ್ದು ಜನಾದೇಶ ಸ್ವೀಕರಿಸುತ್ತೇನೆ. ಕ್ಷೇತ್ರದ ಜನರು ಮತ್ತೊಮ್ಮೆ ಅವಕಾಶ ನೀಡಿದ್ದು ಮತ್ತಷ್ಟು ಹುಮ್ಮಸ್ಸಿನಿಂದ ಕಾರ್ಯ ಮಾಡುತ್ತೇನೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದ್ದಾರೆ.